ADVERTISEMENT

ಎಚ್‌ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಶುಭ ಶುಕ್ರವಾರ ವಿವಾಹ ಫಿಕ್ಸ್

ರಾಮನಗರದ ಎಚ್‌‌ಡಿಕೆ ತೋಟದ ಮನೆಯಲ್ಲಿ ಕೇವಲ 30 ಜನರ ಸಮ್ಮುಖದಲ್ಲಿ ಮದುವೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2020, 12:37 IST
Last Updated 15 ಏಪ್ರಿಲ್ 2020, 12:37 IST
ರೇವತಿ- ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥ ಚಿತ್ರ
ರೇವತಿ- ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥ ಚಿತ್ರ   
""
""

ರಾಮನಗರ: ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಹಾಗೂ ರೇವತಿ ವಿವಾಹ ಇದೇ 17ರಂದು ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಇರುವ ಅವರ ತೋಟದ ಮನೆಯಲ್ಲಿ ಸರಳವಾಗಿ ನಡೆಯಲಿದೆ.

ಬೆಂಗಳೂರಿನ ಮನೆಯಲ್ಲೇ ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆ ನೆರವೇರಿಸಲು ಕುಮಾರಸ್ವಾಮಿ ನಿಶ್ಚಯಿಸಿದ್ದರು. ಆದರೆ ಸದ್ಯ ರಾಜಧಾನಿಯಲ್ಲಿ ಕೋವಿಡ್‌-19 ಸೋಂಕಿತರು ಹೆಚ್ಚುತ್ತಿದ್ದು, ರೆಡ್ ಝೋನ್‌ ಆಗಿ ಗುರುತಿಸಲ್ಪಟ್ಟಿರುವುದರಿಂದ ವಿವಾಹವು ಕೇತಗಾನಹಳ್ಳಿಗೆ ಸ್ಥಳಾಂತರಗೊಂಡಿದೆ. ತೋಟದ ಮನೆಯ ಅಂಗಳದಲ್ಲೇ ಚಪ್ಪರ ಹಾಕಲಾಗಿದೆ. ಶುಕ್ರವಾರ ಬೆಳಗ್ಗೆ 10ಕ್ಕೆ ಧಾರಾ ಮುಹೂರ್ತವಿದ್ದು, ಎರಡೂ ಕುಟುಂಬದಿಂದ ಸುಮಾರು30 ಮಂದಿಯಷ್ಟೇ ಪಾಲ್ಗೊಳ್ಳಲಿದ್ದಾರೆ. ಸಚಿವರು-ಸಂಸದರೂ ಸೇರಿದಂತೆ ಯಾರೊಬ್ಬರಿಗೂ ಆಹ್ವಾನ ನೀಡಿಲ್ಲ.

"ಈ ಮೊದಲು ರಾಮನಗರದಲ್ಲೇ ಎಲ್ಲರ ಸಮ್ಮುಖದಲ್ಲಿ ಮದುವೆ ಮಾಡಲು ನಿಶ್ಚಯಿಸಿದ್ದೆವು. ಆದರೆ ಕೊರೊನಾ ಕಾರಣಕ್ಕೆ ಬೆಂಗಳೂರಿನಲ್ಲಿ ಸರಳವಾಗಿ ಮಾಡುವ ತೀರ್ಮಾನ ಮಾಡಿದೆವು. ಇದೀಗ ಮತ್ತೆ ಇಲ್ಲಿಯೇ ಮಾಡುವ ಹಾಗಾಗಿದೆ. ಇದಕ್ಕಾಗಿ ಸರ್ಕಾರದಿಂದ ಅನುಮತಿ ಪಡೆದಿದ್ದೇನೆ’ ಎಂದು ಕುಮಾರಸ್ವಾಮಿ ಬುಧವಾರ ಪತ್ರಕರ್ತರಿಗೆ ತಿಳಿಸಿದರು.

ADVERTISEMENT

"ಕುಟುಂಬದವರನ್ನು ಹೊರತುಪಡಿಸಿ ಯಾರೊಬ್ಬರಿಗೂ ಪ್ರವೇಶವಿಲ್ಲ. ಕಾರ್ಯಕರ್ತರು ದೂರದಿಂದಲೇ ಹರಸಬೇಕು. ಮುಂದೊಂದು ದಿನ ನಿಮ್ಮೆಲ್ಲರ ಸಮ್ಮುಖದಲ್ಲೇ ಆರತಕ್ಷತೆ ಮಾಡುತ್ತೇನೆ’ ಎಂದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್

ಹಾಸನದವರಾದ ಎಚ್‌.ಡಿ. ಕುಮಾರಸ್ವಾಮಿ 1980ರ ದಶಕದಲ್ಲಿ ಕೇತಗಾನಹಳ್ಳಿಯಲ್ಲಿ ಜಮೀನು ಖರೀದಿಸಿ ಇಲ್ಲಿಯೇ ಕೃಷಿ ಆರಂಭಿಸಿದ್ದರು. ಅವರ ಖಾಯಂ ವಿಳಾಸ ಸಹ ಇಲ್ಲಿನದ್ದೇ ಇದೆ. ಇದೇ ನೆಲದಲ್ಲಿ ಮಗನ ಮದುವೆಯೂ ನಡೆಯುತ್ತಿರುವುದು ವಿಶೇಷ.

ರಾಮನಗರ ಕೇತಗಾನಹಳ್ಳಿಯ ತೋಟದ ಮನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.