ADVERTISEMENT

ರಾಜ್ಯದ ಸಾಮಾಜಿಕ ಭದ್ರತಾ ಯೋಜನೆಗಳಿಗಿಲ್ಲ ಕೇಂದ್ರದ ಹಣ!

ಅನುದಾನ ಬಿಡುಗಡೆಗೆ ಕೇಂದ್ರ ಸರ್ಕಾರ ಮೀನಮೇಷ

ಮಂಜುನಾಥ್ ಹೆಬ್ಬಾರ್‌
Published 13 ಡಿಸೆಂಬರ್ 2023, 0:20 IST
Last Updated 13 ಡಿಸೆಂಬರ್ 2023, 0:20 IST
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌   

ನವದೆಹಲಿ: 2023-24ನೇ ಆರ್ಥಿಕ ವರ್ಷದಲ್ಲಿ ಎಂಟು ತಿಂಗಳು ಕಳೆದರೂ ಕರ್ನಾಟಕದ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಒಂದು ಪೈಸೆ ಅನುದಾನವೂ ಬಿಡುಗಡೆಯಾಗಿಲ್ಲ. 

ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ, ಅಂಗವಿಕಲ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಿಗೆ ಮಾಸಾಶನ ನೀಡಲು ರಾಜ್ಯ ಸರ್ಕಾರವು ವಾರ್ಷಿಕವಾಗಿ ₹10,500 ಕೋಟಿ ವೆಚ್ಚ ಮಾಡುತ್ತಿದೆ. ಈ ಯೋಜನೆಗಳಿಗೆ ಕೇಂದ್ರ ಸರ್ಕಾರ ವರ್ಷಕ್ಕೆ ₹450 ಕೋಟಿಯಿಂದ ₹500 ಕೋಟಿಯಷ್ಟು ಅನುದಾನ ನೀಡುತ್ತಿದೆ. ಆದರೆ, ಈ ವರ್ಷ ಅನುದಾನ ಬಿಡುಗಡೆಗೆ ಕೇಂದ್ರ ಸರ್ಕಾರ ಮೀನಮೇಷ ಎಣಿಸುತ್ತಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದರು. ಹಣ ಬಿಡುಗಡೆಗೆ ಒತ್ತಾಯಿಸಿ ರಾಜ್ಯ ಸರ್ಕಾರ ಸಹ ಕೇಂದ್ರಕ್ಕೆ ಪತ್ರ ಬರೆದಿದೆ. ಇನ್ನೊಂದೆಡೆ, ಸಾಮಾಜಿಕ ಭದ್ರತಾ ಯೋಜನೆಗಳಿಗೆ ಕೇಂದ್ರ ನೀಡುತ್ತಿರುವ ಅನುದಾನದಲ್ಲಿ ಕಳೆದೆರಡು ವರ್ಷಗಳಿಂದ ಗಣನೀಯ ಇಳಿಕೆಯಾಗಿದೆ. 

ADVERTISEMENT

‘ಈ ಆರ್ಥಿಕ ವರ್ಷ ಮುಗಿಯಲು ಮೂರು ತಿಂಗಳಷ್ಟೇ ಉಳಿದಿವೆ. ಈ ತನಕ ಭಾಗಶಃ ಅನುದಾನವಾದರೂ ಬರಬೇಕಿತ್ತು. ಈ ಬಗ್ಗೆ ಕೇಂದ್ರಕ್ಕೆ ಮನವರಿಕೆಯನ್ನೂ ಮಾಡಿಕೊಡಲಾಗಿದೆ. ಅನುದಾನ ಬಿಡುಗಡೆ ಸಂಬಂಧ ಕರ್ನಾಟಕ ಭವನದ ಅಧಿಕಾರಿಗಳು ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಬಡ ಫಲಾನುಭವಿಗಳಿಗೆ ಪಿಂಚಣಿ ನೀಡುವ ಈ ಯೋಜನೆಗೆ ಕೇಂದ್ರ ಆದಷ್ಟು ಬೇಗ ಹಣ ಬಿಡುಗಡೆ ಮಾಡಬೇಕು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. ‘ಕೆಲವು ಯೋಜನೆಗಳಿಗೆ ಕೇಂದ್ರದ ಹಣ ಬಿಡುಗಡೆಗೆ ‘ಅನುದಾನ ಬಳಕೆ ಪ್ರಮಾಣಪತ್ರ’ ಸಲ್ಲಿಸಬೇಕು. ಆದರೆ, ಈ ಯೋಜನೆಯಲ್ಲಿ ಹಣ ಬಿಡುಗಡೆಗೆ ಅಂತಹ ಷರತ್ತುಗಳೇನೂ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು. 

ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿರುವ ಕೇಂದ್ರ ಸರ್ಕಾರದ ಸಹಭಾಗಿತ್ವದ ಯೋಜನೆಗಳಿಗೆ ಈ ವರ್ಷ ಇಲ್ಲಿಯವರೆಗೆ ₹10,450 ಕೋಟಿ ಅನುದಾನ ಬಿಡುಗಡೆಯಾಗಿದೆ. ನೇರವಾಗಿ ಅನುಷ್ಠಾನ ಇಲಾಖೆಗಳ ಖಾತೆಗಳಿಗೆ ಜಮೆ ಮಾಡಿರುವ ₹4,200 ಕೋಟಿಯೂ ಇದರಲ್ಲಿ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.