ADVERTISEMENT

ಶೇಂಗಾ: ಬೆಳೆಯೂ ಇಲ್ಲ, ಬೆಲೆಯೂ ಇಲ್ಲ

ಮಳೆ ಹಾನಿಯಿಂದ ಕಂಗಲಾದ ರೈತನಿಗೆ, ಬೆಲೆ ಕುಸಿತದ ಬರೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 19:45 IST
Last Updated 14 ನವೆಂಬರ್ 2019, 19:45 IST
ಮಳೆಯಿಂದಾಗಿ ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್‌ನಲ್ಲಿ ಮಂಗಳವಾರ ಶೇಂಗಾ ರಾಶಿಯಲ್ಲಿ ರೈತರು ಕೆಲಸದಲ್ಲಿ ತೊಡಗಿದ ದೃಶ್ಯ –ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಮಳೆಯಿಂದಾಗಿ ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್‌ನಲ್ಲಿ ಮಂಗಳವಾರ ಶೇಂಗಾ ರಾಶಿಯಲ್ಲಿ ರೈತರು ಕೆಲಸದಲ್ಲಿ ತೊಡಗಿದ ದೃಶ್ಯ –ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್   

ಹುಬ್ಬಳ್ಳಿ: ಈ ವರ್ಷ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಶೇಂಗಾ ಬೆಳೆದಿದ್ದ ರೈತರ ಬೆಳೆಯನ್ನು, ಮಳೆರಾಯ ಅಪೋಶನ ತೆಗೆದುಕೊಂಡಿದ್ದಾನೆ. ಇದರಿಂದ ಕಂಗಾಲಾಗಿದ್ದ ರೈತನಿಗೆ, ಇದೀಗ ಬೆಲೆ ಕುಸಿತವೂ ಸಿಡಿಲಿನಂತೆ ಬಂದೆರಗಿದೆ.

ಜಿಲ್ಲೆಯಲ್ಲಿ ಈ ಬಾರಿ 26,519 ಹೆಕ್ಟೇರ್‌ನಲ್ಲಿ ಶೇಂಗಾ ಬಿತ್ತನೆಯಾಗಿತ್ತು. ಈ ಪೈಕಿ, 21,515 ಹೆಕ್ಟೇರ್ ಬೆಳೆ ನಾಶವಾಗಿದೆ. ಇದರ ನಡುವೆಯೇ ಅಳಿದುಳಿದ ಬೆಳೆಯನ್ನು ರಕ್ಷಿಸಿಕೊಂಡು, ಮಾರುಕಟ್ಟೆಗೆ ತಂದವರಿಗೆ ಸಿಗುತ್ತಿರುವುದು ಅಲ್ಪ ಬೆಲೆ. ಹಾಕಿದ ಬಂಡವಾಳವೂ ವಾಪಸ್ಸು ಬರುತ್ತಿಲ್ಲ.

ಕ್ವಿಂಟಲ್‌ಗೆ ₹6,500ರಿಂದ ₹7 ಸಾವಿರದವರೆಗೆ ಇದ್ದ ಶೇಂಗಾ ಬೆಲೆ, ಇದೀಗ ₹2,500ರಿಂದ ₹5,400ಕ್ಕೆ ಇಳಿದಿದೆ. ಮಳೆ ಗಾಯದಿಂದಾಗಿ ಕುಗ್ಗಿದ್ದ ರೈತ, ಇದೀಗ ಬೆಲೆ ಇಳಿಕೆಯ ಬರೆ ಯಿಂದಾಗಿ ಜರ್ಝರಿತನಾಗಿದ್ದಾನೆ.

ADVERTISEMENT

ಸಿಕ್ಕಿದ್ದು ಎರಡೇ ಚೀಲ: ‘ಎರಡು ಎಕರೆಯಲ್ಲಿ ಬೆಳೆದಿದ್ದ ಶೇಂಗಾ ಪೈಕಿ, ಸಿಕ್ಕಿದ್ದು ಕೇವಲ ಎರಡು ಚೀಲ. ಒಂದು ಗಿಡದಲ್ಲಿ ಅಂದಾಜು 25ರಿಂದ 30 ಕಾಯಿ ಬಿಡುತ್ತಿದ್ದ ಗಿಡಗಳಲ್ಲಿ, ಈ ಬಾರಿ 4ರಿಂದ 5 ಕಾಯಿಗಳಷ್ಟೇ ಬಿಟ್ಟಿದ್ದವು’ ಎಂದು ನೂಲ್ವಿಯ ರೈತ ಗುರುನಾಥಗೌಡರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಶೇಂಗಾ ಕಿತ್ತ ಸಂದರ್ಭದಲ್ಲೇ ಸತತವಾಗಿ ಮಳೆ ಸುರಿದಿದ್ದರಿಂದ ಒಕ್ಕಲು ಮಾಡಿ, ಒಣಗಿಸುವುದೇ ದೊಡ್ಡ ಸಮಸ್ಯೆಯಾಯಿತು. ಬೆಳೆಯನ್ನು ಹಾಗೇ ಇಟ್ಟುಕೊಂಡರೆ ಕೊಳೆಯುತ್ತಿತ್ತು. ಹಾಗಾಗಿ, ಹಸಿ ಕಾಯಿಯನ್ನೇ ಕೇವಲ ₹2 ಸಾವಿರಕ್ಕೆ ಮಾರಾಟ ಮಾಡಬೇಕಾದ ಅನಿವಾರ್ಯ ಎದುರಾಯಿತು’ ಎಂದರು.

‘ಉತ್ತಮ ಫಸಲು ಹಾಗೂ ಬೆಳೆ ನಿರೀಕ್ಷೆಯಲ್ಲಿ 12 ಎಕರೆಯಲ್ಲಿ ಶೇಂಗಾ ಬಿತ್ತಿದ್ದೆ. ಮಳೆ ಅಬ್ಬರದ ಮಧ್ಯೆ ಕೊಯ್ಲಿಗೆ ಬರುವಷ್ಟರಲ್ಲಿ, ಉಳಿದಿದ್ದು ಕೇವಲ 4 ಎಕರೆಯ ಬೆಳೆಯಷ್ಟೆ. 8 ಎಕರೆಯ ಶೇಂಗಾ ಮಣ್ಣು ಪಾಲಾಯಿತು. ಇದೀಗ, ಕೈಗೆ ಬಂದಿರುವ ಮಾಲು ಏನೂ ಪ್ರಯೋಜನವಿಲ್ಲ. ಸಣ್ಣ ಕಾಯಿಗಳೇ ಹೆಚ್ಚು. ಇದಕ್ಕೆ ₹3 ಸಾವಿರ ಬೆಲೆ ಸಿಕ್ಕರೆ ಹೆಚ್ಚು’ ಎಂದು ಕುಸುಗಲ್‌ ರೈತ ಹಸನ್‌ಸಾಬ್ ಮಿರ್ಜಾನವರ ಹತಾಶೆ ವ್ಯಕ್ತಪಡಿಸಿದರು.

‘ಒಣಗಿದ ಹಾಗೂ ದಪ್ಪ ಕಾಳಿನ ಶೇಂಗಾ ಬದಲಿಗೆ, ಹಸಿ ಮಾಲು ಹೆಚ್ಚಾಗಿ ಮಾರುಕಟ್ಟೆಗೆ ಬರುತ್ತಿದೆ. ಹಾಗಾಗಿ, ಬೆಲೆ ಇಳಿದಿದೆ. ಗುಣಮಟ್ಟದ ಶೇಂಗಾ ಬಂದರೆ, ಕ್ರಮೇಣ ಬೆಲೆ ಏರಿಕೆಯಾಗುತ್ತದೆ’ ಎಂದು ಹುಬ್ಬಳ್ಳಿ ಎಪಿಎಂಸಿಯ ಸಹ ಕಾರ್ಯದರ್ಶಿ ಗೋವಿಂದ ಕಬ್ಬೇನಹಳ್ಳಿ ಹೇಳಿದರು.

‘ಗರಿಷ್ಠ 2 ಹೆಕ್ಟೇರ್‌ಗಷ್ಟೇ ಪರಿಹಾರ’
‘ಜಿಲ್ಲೆಯಲ್ಲಿ ಒಟ್ಟು ಬಿತ್ತನೆಯಾಗಿದ್ದ ಶೇಂಗಾ ಪೈಕಿ ಆಗಸ್ಟ್ ಮಳೆಯಬ್ಬರಕ್ಕೆ 10,982 ಹೆಕ್ಟೇರ್ ಹಾಗೂ ಅಕ್ಟೋಬರ್ ಮಳೆಗೆ 10,533 ಹೆಕ್ಟೇರ್ ಬೆಳೆ ನಾಶವಾಗಿದೆ’ ಎಂದು ಧಾರವಾಡದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಸ್‌.ಎಸ್‌. ಅಬೀದ್ ಹೇಳಿದರು.

‘ಎಷ್ಟೇ ಬೆಳೆ ಹಾನಿ ಯಾಗಿದ್ದರೂ, ಗರಿಷ್ಠ 2 ಹೆಕ್ಟೇರ್‌ ಗಷ್ಟೇ ಪರಿಹಾರ ಸಿಗುತ್ತದೆ. ಒಣ ಬೇಸಾಯವಾಗಿದ್ದರೆ, ಪ್ರತಿ ಹೆಕ್ಟೇರ್‌ಗೆ ₹16,800 ಹಾಗೂ ನೀರಾವರಿಯಾಗಿದ್ದರೆ ₹23,500 ಪರಿಹಾರ ಸಿಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.