ADVERTISEMENT

ಹಣ ಪಡೆದಿಲ್ಲ, ಕುದುರೆ ವ್ಯಾಪಾರ ನಡೆದಿಲ್ಲ: ಬಾಪುಗೌಡ ಪಾಟೀಲ

ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2018, 11:14 IST
Last Updated 7 ಸೆಪ್ಟೆಂಬರ್ 2018, 11:14 IST

ಬೆಳಗಾವಿ: ‘ನಾವು ಯಾವುದೇ ಹಣ ಪಡೆದಿಲ್ಲ. ಕುದುರೆ ವ್ಯಾಪಾರ ನಡೆದಿಲ್ಲ. ನಾವು ಕಾಂಗ್ರೆಸ್‌ ಕಾರ್ಯಕರ್ತರಾಗಿದ್ದು, ಇಲ್ಲಿಯೂ ಪಕ್ಷದ ಪರವಾಗಿಯೇ ಕೆಲಸ ಮಾಡುತ್ತಿದ್ದೇವೆ’ ಎಂದು ಪಿಎಲ್‌ಡಿ ಬ್ಯಾಂಕ್‌ನ ನಿರ್ದೇಶಕರಲ್ಲಿ ಒಬ್ಬರಾದ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಜೊತೆ ಗುರುತಿಸಿಕೊಂಡಿರುವ ಬಾಪುಗೌಡ ಪಾಟೀಲ ಹೇಳಿದರು.

ನಗರದಲ್ಲಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ನಿವಾಸದಲ್ಲಿ ಶುಕ್ರವಾರ ಬೆಳಿಗ್ಗೆ, ಚುನಾವಣೆಗೂ ಮುಂಚೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಾನು ಮೊದಲಿನಿಂದಲೂ ಕಾಂಗ್ರೆಸ್‌ ಕಾರ್ಯಕರ್ತನಾಗಿದ್ದೇನೆ. ಪಕ್ಷದ ಪರವಾಗಿಯೇ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಈ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಯತ್ನಿಸುತ್ತಿದ್ದೇನೆ. ಹೊರತು, ಹಣ ಪಡೆದು ಲಕ್ಷ್ಮಿ ಅವರಿಗೆ ಬೆಂಬಲ ನೀಡುತ್ತಿದ್ದೇನೆ ಎನ್ನುವುದು ಸುಳ್ಳು’ ಎಂದು ತಿಳಿಸಿದರು.

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಲ್ಲಿ ನಮ್ಮ ಪಕ್ಷದ ಶಾಸಕರಾದ ಸತೀಶ ಜಾರಕಿಹೊಳಿ ಅವರ ಪರವಾಗಿ ಕೆಲಸ ಮಾಡಿದ್ದೇನೆ. ಬೇಕಿದ್ದರೆ ಅವರನ್ನೇ ಕೇಳಿ. ನಾನು ಯಾವತ್ತಿದ್ದರೂ ಪಕ್ಷದ ಪರವಾಗಿದ್ದೇನೆ’ ಎಂದರು.

ADVERTISEMENT

‘ಬ್ಯಾಂಕ್‌ನ 14 ನಿರ್ದೇಶಕರಲ್ಲಿ 9 ಜನ ನಿರ್ದೇಶಕರು ನಾವಿಲ್ಲಿ ಇದ್ದೇವೆ. ಚುನಾವಣೆ ನಡೆಯುವುದು ನಿಶ್ಚಿತ. ನಮ್ಮ ಬಣದವರೇ ಅಧ್ಯಕ್ಷರು– ಉಪಾಧ್ಯಕ್ಷರಾಗುತ್ತಾರೆ. ನಾನು ಈ ಮೊದಲು ಕೂಡ ಅಧ್ಯಕ್ಷನಾಗಿದ್ದೇನೆ. ಹೀಗಾಗಿ ಈ ಸಲ ಅಧ್ಯಕ್ಷನಾಗಲು ಬಯಸುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.