ADVERTISEMENT

ಎಂತಹ ಪರಿಸ್ಥಿತಿಯಲ್ಲೂ ಲಾಕ್‌ಡೌನ್‌ ಇಲ್ಲ, ಸೀಲ್‌ಡೌನ್‌ಗೆ ಸೀಮಿತ: ಆರ್‌. ಅಶೋಕ

ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣದಲ್ಲಿದೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 14:17 IST
Last Updated 26 ಜೂನ್ 2020, 14:17 IST
ಕಂದಾಯ ಸಚಿವ ಆರ್‌.ಅಶೋಕ
ಕಂದಾಯ ಸಚಿವ ಆರ್‌.ಅಶೋಕ   

ಬೆಂಗಳೂರು: ರಾಜ್ಯದಲ್ಲಿ ಎಂತಹ ಪರಿಸ್ಥಿತಿಯಲ್ಲೂ ಲಾಕ್‌ಡೌನ್‌ ಮಾಡುವುದಿಲ್ಲ, ಲಾಕ್‌ಡೌನ್‌ ಬದಲು ಸೀಲ್‌ಡೌನ್‌ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೋವಿಡ್‌ ಕುರಿತು ಶುಕ್ರವಾರ ಬೆಂಗಳೂರು ನಗರದ ಶಾಸಕರು, ಸಂಸದರು ಮತ್ತು ವಿಧಾನಪರಿಷತ್‌ ಸದಸ್ಯರ ಜತೆ ಸಭೆ ನಡೆಸಿದರು. ಸಭೆಯ ಬಳಿಕ ಅಶೋಕ ಸುದ್ದಿಗೋಷ್ಠಿಯಲ್ಲಿ ಲಾಕ್‌ಡೌನ್‌ ಜಾರಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ದೇಶದ ಇತರ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣದಲ್ಲಿ ಇದೆ. ಸಭೆಯಲ್ಲಿ ಶೇ 95 ರಷ್ಟು ಶಾಸಕರು ಸೀಲ್‌ ಡೌನ್‌ ಅಗತ್ಯವಿಲ್ಲ. ಸೀಲ್‌ಡೌನ್‌ ಮಾಡಿದರೆ ಸಾಕು. ಲಾಕ್‌ಡೌನ್ ಮಾಡಿದರೆ, ಬಡವರು ಮತ್ತೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಪರಿಹಾರ ನೀಡಿ ಲಾಕ್‌ಡೌನ್‌ ಮಾಡುವುದಾದರೆ ಮಾಡಿ ಎಂಬ ಸಲಹೆ ಸಭೆಯಲ್ಲಿ ಕೇಳಿ ಬಂದಿತು ಎಂದರು.

ADVERTISEMENT

ಕೊರೊನಾ ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಾಗ ಇಡೀ ಪ್ರದೇಶ ಸೀಲ್‌ಡೌನ್‌ ಮಾಡುವುದಿಲ್ಲ. ಸೋಂಕಿತರ ಮನೆಗಳನ್ನು ಮಾತ್ರ ಸೀಲ್‌ ಡೌನ್‌ ಮಾಡುತ್ತೇವೆ ಎಂದು ಹೇಳಿದರು.

ಹಾಸಿಗೆ ಹಂಚಿಕೆ ಜವಾಬ್ದಾರಿಗೆ ಅಧಿಕಾರಿ

ಹಿರಿಯ ಐಎಎಸ್‌ ಅಧಿಕಾರಿ ತುಷಾರ್‌ ಗಿರಿನಾಥ್ ಅವರನ್ನು ಹಾಸಿಗೆ ಹಂಚಿಕೆ ಉಸ್ತುವಾರಿ ನೀಡಲಾಗಿದೆ. ಇನ್ನು ಮುಂದೆ ಕೋವಿಡ್‌ ರೋಗಿ ಬಂದಾಗ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವ ಸ್ಥಿತಿ ಬರಬಾರದು. ಇದರ ಸಂಪೂರ್ಣ ಉಸ್ತುವಾರಿಯನ್ನು ನೋಡಿಕೊಳ್ಳುತ್ತಾರೆ ಎಂದು ಅಶೋಕ ಹೇಳಿದರು.

ಹಾಸಿಗೆಗಾಗಿ ರೋಗಿ 24 ರಿಂದ 48 ಗಂಟೆ ಕಾದರೂ ಸಿಗುತ್ತಿಲ್ಲ ಎಂಬ ವರದಿ ಮಾಧ್ಯಮಗಳಲ್ಲಿ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇನ್ನು ಮುಂದೆ ರೋಗಿಗಳಿಗೆ ಯಾವ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿದೆ ಎಂಬುದನ್ನು ತಿಳಿಸಿ, ದಾಖಲು ಮಾಡಿಸುವ ವ್ಯವಸ್ಥೆ ಮಾಡುತ್ತೇವೆ. ರೋಗಿಯೇ ಹುಡಕಿಕೊಂಡು ಓಡಾಡುವ ಅಗತ್ಯವಿಲ್ಲ. ಕಾಯಿಲೆ ಪತ್ತೆ ಆಗಿ 8 ಗಂಟೆಯೊಳಗೆ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ತಿಳಿಸಿದರು.

ರೋಗ ಲಕ್ಷಣ ಇದ್ದವರು ಮತ್ತು ರೋಗ ಲಕ್ಷಣ ಇಲ್ಲದ ಕೋವಿಡ್‌ ರೋಗಿಗಳನ್ನು ಪ್ರತ್ಯೇಕಿಸಲಾಗುತ್ತದೆ. ಇವೆಲ್ಲ ಕಾರ್ಯ ಸಾಧ್ಯವಾಗಿಸಲು ಮತ್ತು ಹಾಸಿಗೆಗಳ ಲಭ್ಯತೆಯ ಬಗ್ಗೆ ನೀಲ ನಕಾಶೆಯನ್ನು ರೂಪಿಸಲಾಗುವುದು ಎಂದು ವಿವರಿಸಿದರು.

ಇನ್ನು ಒಂದು ವಾರದಲ್ಲಿ ನಗರದಲ್ಲಿ 7,300 ಹಾಸಿಗೆ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು. ಈಗ ಲಭ್ಯವಿರುವ ಹಾಸಿಗೆಗಳಿಗಿಂತ ಶೇ 15 ರಿಂದ ಶೇ 20 ರಷ್ಟು ಹೆಚ್ಚಾಗುತ್ತದೆ ಎಂದರು.

*ಕೋವಿಡ್ ನಿಂದ ಮೃತಪಟ್ಟವರ ಮೃತ ದೇಹ ಸಾಗಿಸಲು ಪ್ರತ್ಯೇಕ ಆ್ಯಂಬುಲೆನ್ಸ್‌ ವ್ಯವಸ್ಥೆ ಹೆಚ್ಚಿಸಲು ಕ್ರಮ ವಹಿಸಲಾಗುವುದು.

*ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ಔಷಧಿಗಳನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ವಿತರಿಸುವ ಬಗ್ಗೆ ಪರಿಶೀಲಿಸಲಾಗುವುದು.

*ಕೋವಿಡ್ ನಿರ್ವಹಣೆಗೆ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ನೋಡಲ್ ಅಧಿಕಾರಿ ನೇಮಕ ಮಾಡುವ ಕುರಿತು ಸಭೆಯಲ್ಲಿ ಸಲಹೆ ವ್ಯಕ್ತವಾಯಿತು. ಈ ಬಗ್ಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.