ADVERTISEMENT

ಮೇಕೆದಾಟು ವಿಚಾರದಲ್ಲಿ ಯಾರ ಮಧ್ಯಸ್ಥಿಕೆ ಅಗತ್ಯವಿಲ್ಲ: ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2022, 10:29 IST
Last Updated 6 ಮಾರ್ಚ್ 2022, 10:29 IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್   

ರಾಮನಗರ: ಮೇಕೆದಾಟು ವಿಚಾರದಲ್ಲಿ ಯಾರ ಮಧ್ಯಸ್ಥಿಕೆಯ ಅವಶ್ಯಕತೆ ಇಲ್ಲ. ಕೇಂದ್ರ ಸರ್ಕಾರ ಕೂಡಲೇ ಯೋಜನೆಗೆ ಅನುಮತಿ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದರು.

ಕನಕಪುರದಲ್ಲಿ ಭಾನುವಾರ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಮೇಕೆದಾಟು ವಿಚಾರದಲ್ಲಿ ನಾವೇನು ಮಾಡುವ ಹಾಗಿಲ್ಲ. ಮಾತುಕತೆ ಮೂಲಕವೇ ಎರಡೂ ರಾಜ್ಯಗಳು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವರು ಹೇಳಿರುವುದು ಖಂಡನೀಯ‌. ಕುಡಿಯುವ ನೀರಿನ ಯೋಜನೆಗೆ ಯಾರ ಅನುಮತಿಯೂ ಬೇಕಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ತಮಿಳುನಾಡಿನವರು ಈ ವಿಚಾರಕ್ಕೆ ರಾಜಕೀಯ ಮಾಡುತ್ತಲೇ ಬಂದಿದ್ದಾರೆ. ಅವರು ಇದಕ್ಕೆ ಒಪ್ಪುವುದೂ ಇಲ್ಲ ಎಂದರು.

ಕೇಂದ್ರ ಸಚಿವರು ಹೀಗೆ ಮಾತನಾಡುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೌನವಾಗಿ ಸಮ್ಮತಿಸಿರುವುದು ಸರಿಯಲ್ಲ. ಇದು ರಾಜ್ಯಕ್ಕೆ ಆಗಿರುವ ಅವಮಾನ. ಅವರು ಕೇಂದ್ರದಿಂದ ಎನ್‌ಒಸಿ ಪಡೆಯಬೇಕು ಇಲ್ಲವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.‌

ADVERTISEMENT

ಸಂಸದ ಡಿ.ಕೆ. ಸುರೇಶ್ ಮಾತನಾಡಿ, ಚರ್ಚೆ ಮಾಡುವುದಿದ್ದರೆ ನಾವ್ಯಾಕೆ ಕೇಂದ್ರದ ಬಳಿ ಹೋಗಬೇಕಿತ್ತು. ತಮಿಳುನಾಡು ಬಳಿ ಮಾತನಾಡುವ ಅಗತ್ಯ ಇಲ್ಲ. ಈ ವಿಚಾರದಲ್ಲಿ ಅನವಶ್ಯಕವಾಗಿ ಗೊಂದಲ ಸೃಷ್ಟಿಸಬಾರದು ಎಂದರು‌.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ಕುಡಿಯುವ ನೀರಿನ ಯೋಜನೆಗೆ ಅನುಮತಿ ನೀಡಬೇಕಾದದ್ದು ಕೇಂದ್ರದ ಕೆಲಸ. ನೀರಾವರಿ ಸಚಿವರು ಕೂಡಲೇ ಕಾವೇರಿ ನೀರಾವರಿ ಸಮಿತಿ ಸಭೆ ಕರೆದು ಅನುಮೋದನೆ ನೀಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.