ADVERTISEMENT

ಕೃಷಿ ಉತ್ಪನ್ನ ಸಾಗಣೆಗೆ ಮುಕ್ತ ಅವಕಾಶ: ಶಿವರಾಮ ಹೆಬ್ಬಾರ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2020, 13:16 IST
Last Updated 11 ಏಪ್ರಿಲ್ 2020, 13:16 IST
ಶಿವರಾಮ ಹೆಬ್ಬಾರ
ಶಿವರಾಮ ಹೆಬ್ಬಾರ   

ಕಾರವಾರ:‘ಅಡಿಕೆಯೂ ಸೇರಿದಂತೆ ತೋಟಗಾರಿಕೆ ಮತ್ತುಕೃಷಿ ಉತ್ಪನ್ನಗಳನ್ನು ವಿವಿಧ ಜಿಲ್ಲೆಗಳು, ಹೊರರಾಜ್ಯಗಳಿಗೆ ರವಾನಿಸಲುಕೃಷಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ’ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರಅವರು ಶನಿವಾರ ಮೊದಲ ಬಾರಿಗೆ ನಗರದಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.

‘ಕೃಷಿ ಉತ್ಪನ್ನಗಳ ಸಾಗಣೆಗೆ ಮುಕ್ತ ಅನುಮತಿ ನೀಡುವಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಲಾಕ್‌ಡೌನ್‌ನಿಂದಾಗಿ ಕೃಷಿ ಉತ್ಪನ್ನಗಳು ಹಾಳಾಗದಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶವಾಗಿದೆ. ಜಿಲ್ಲೆಯ ಕರಾವಳಿಯಲ್ಲಿ ಬೆಳೆಯುವ ಕಲ್ಲಂಗಡಿ, ಮಲೆನಾಡು ಭಾಗದ ಅನಾನಸ್, ಬಾಳೆಹಣ್ಣು, ಪಪ್ಪಾಯಿಯನ್ನು ಹೊರಭಾಗಕ್ಕೆ ಕಳುಹಿಸಲು ನಾವು ಸಿದ್ಧವಾಗಿದ್ದೇವೆ. ಆದರೆ, ಖರೀದಿಸಲು ಮಾರುಕಟ್ಟೆ ಸಿದ್ಧವಾಗಿಲ್ಲ.ಹಾಗಾಗಿ ಇದರಿಂದ ಸ್ವಲ್ಪ ಸಮಸ್ಯೆಯಾಗಿದ್ದು,ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ಈ ನಿಟ್ಟಿನಲ್ಲಿ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಅನಾನಸ್ ಬೆಳೆಗೆ ದೆಹಲಿಯಲ್ಲಿ ಅತಿದೊಡ್ಡ ಮಾರುಕಟ್ಟೆಯಿದೆ. ಒಂದು ಅಂದಾಜಿನ ಪ್ರಕಾರ 12 ಸಾವಿರ ಟನ್ ಹಣ್ಣು ರಾಜ್ಯದಿಂದ ರವಾನೆಯಾಗಲು ಲಭ್ಯವಿದೆ. ಅದರ ಖರೀದಿ ಮತ್ತು ಮಾರಾಟ ಸಂಬಂಧ ಈಗಾಗಲೇ ಕೇಂದ್ರ ಸರ್ಕಾರದ ಮಟ್ಟದಲ್ಲಿ ಮಾತುಕತೆ ಆರಂಭಿಸಲಾಗಿದೆ.ಈ ಪ್ರಕ್ರಿಯೆಒಂದೇ ವಾರದಲ್ಲಿ ಆಗಬೇಕಿದೆ’ ಎಂದೂ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.