ADVERTISEMENT

ರೈಲಿನ ಲಟ– ಪಟ ಸದ್ದು ಮಾಯ!

ಬಿ.ಎನ್.ಶ್ರೀಧರ
Published 2 ಜನವರಿ 2020, 1:29 IST
Last Updated 2 ಜನವರಿ 2020, 1:29 IST
ಭಾರತೀಯ ರೈಲ್ವೆ (ಸಾಂದರ್ಭಿಕ ಚಿತ್ರ)
ಭಾರತೀಯ ರೈಲ್ವೆ (ಸಾಂದರ್ಭಿಕ ಚಿತ್ರ)   
""

ಹುಬ್ಬಳ್ಳಿ: ರೈಲು ಚಲಿಸುವಾಗ ಕೇಳಿಬರುವ ಲಟ-ಪಟ ಸದ್ದು ಪ್ರಯಾಣಿಕರ ನಿದ್ದೆ ಕೆಡಿಸಿದ್ದು, ಕೆಲವೊಮ್ಮೆ ತಲೆ ನೋವು ತಂದಿದ್ದೂ ಇದೆ. ಆದರೆ, ಅಂತಹ ಸದ್ದು ಈಗ ಬಹುತೇಕ ನೇಪಥ್ಯಕ್ಕೆ ಸರಿದಿದೆ. ಈಗ ಬರೇ ಸುಂಯ್‌ ಎನ್ನುವ ಶಬ್ದ!

ಶಬ್ದ ಮಾಲಿನ್ಯ ತಡೆಯುವ ಮತ್ತು ರೈಲು ಮಾರ್ಗದ ನಿರ್ವಹಣಾ ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ ರೈಲ್ವೆ ಮಂಡಳಿ ಹಲವು ಸುಧಾರಣಾ ಕ್ರಮಗಳನ್ನು ಕೈಗೆತ್ತಿಕೊಂಡಿದೆ. ಅದರ ಭಾಗವಾಗಿ 15 ವರ್ಷಗಳ ಹಿಂದೆ ರಾಜ್ಯದಲ್ಲಿ ಆರಂಭವಾದ ವೆಲ್ಡಿಂಗ್‌ ಮೂಲಕ ಹಳಿಗಳನ್ನು ಪರಸ್ಪರ ಜೋಡಿಸುವ ಲಾಂಗ್‌ ವೆಲ್ಡೆಡ್‌ ರೈಲ್‌ (ಎಲ್‌ಡಬ್ಲ್ಯೂಆರ್‌) ಎನ್ನುವ ವಿನೂತನ ವ್ಯವಸ್ಥೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.

ಏನಿದು ಹೊಸ ವ್ಯವಸ್ಥೆ?: ಇದುವರೆಗೂ ಕಬ್ಬಿಣದ ಸಲಾಕೆ ಆಕಾರದ ತುಂಡಿಗೆ ನಟ್ಟು– ಬೋಲ್ಟ್‌ (ಫಿಶ್‌ಪ್ಲೇಟ್‌) ಹಾಕಿ ರೈಲ್ವೆ ಹಳಿಗಳನ್ನು ಪರಸ್ಪರ ಜೋಡಿಸಲಾಗುತ್ತಿತ್ತು. ಆದರೆ, ಹೊಸ ವ್ಯವಸ್ಥೆಯಾದ ಎಲ್‌ಡಬ್ಲ್ಯೂಆರ್‌ ಪ್ರಕಾರ ಹಳಿಗಳನ್ನು ಬೆಸುಗೆ ಹಾಕಿ ಜೋಡಿಸಲಾಗುತ್ತಿದೆ. ಇದರಿಂದ ಹಳಿಗಳ ನಡುವಿನ ಸಣ್ಣ ಪ್ರಮಾಣದ ಅಂತರ ಕೂಡ ಇಲ್ಲದಂತಾಗಿ ಲಟ– ಪಟ ಎನ್ನುವ ಕರ್ಕಶ ಸದ್ದು ಇಲ್ಲದಂತಾಗುತ್ತದೆ.

ADVERTISEMENT

‘ನೈರುತ್ಯ ರೈಲ್ವೆ ವಲಯದಲ್ಲಿ 4,020 ಕಿ.ಮೀ ಉದ್ದದ ರೈಲು ಮಾರ್ಗ ಇದ್ದು, ಇದರಲ್ಲಿ 3,650 ಕಿ.ಮೀ ಉದ್ದದ ಮಾರ್ಗದಲ್ಲಿನ ಹಳಿ
ಗಳನ್ನು ವೆಲ್ಡಿಂಗ್‌ ಮೂಲಕ ಜೋಡಿಸಲಾಗಿದೆ. ಉಳಿದ 370 ಕಿ.ಮೀ ಉದ್ದದ ಹಳಿಗಳ ಪೈಕಿ ಇನ್ನೂ 96 ಕಿ.ಮೀ ಉದ್ದದ ಹಳಿಗಳಿಗೆ ಮಾತ್ರ ಹೊಸ ವ್ಯವಸ್ಥೆ ಪ್ರಕಾರ ಜೋಡಿಸಲು ಅವಕಾಶ ಇದೆ. ಇನ್ನು 274 ಕಿ.ಮೀ ಉದ್ದದ ಮಾರ್ಗವು ಕಡಿದಾದ ತಿರುವು ಮತ್ತು ಘಾಟ್‌ ಸೆಕ್ಷನ್‌ಗಳಿಂದ ಕೂಡಿದ್ದು, ಅಲ್ಲಿ ಹಳೇ ವ್ಯವಸ್ಥೆಯ ಕಡಿಮೆ ಉದ್ದದ ಹಳಿಗಳನ್ನೇ ಫಿಶ್‌ಪ್ಲೇಟ್‌ ಹಾಕಿ ಜೋಡಿಸಲಾಗಿದೆ’ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ.ವಿಜಯಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾಮಾನ್ಯವಾಗಿ ಈ ಹಿಂದೆ ಹಳಿಯ ಗರಿಷ್ಠ ಉದ್ದ 13 ಮೀಟರ್‌ ಇರುತ್ತಿತ್ತು. ಅಂತಹ ಹಳಿಗಳನ್ನು ಒಂದಕ್ಕೊಂದು ಜೋಡಿಸಿಯೇ ರೈಲ್ವೆ ಮಾರ್ಗ ನಿರ್ಮಾಣ ಮಾಡಲಾಗುತ್ತಿತ್ತು. ಒಂದು ಕಿ.ಮೀ ರೈಲು ಮಾರ್ಗ ನಿರ್ಮಾಣಕ್ಕೆ 154 ಕಡೆ ಹಳಿಗಳನ್ನು ಜೋಡಿಸಬೇಕಿತ್ತು. ಆದರೆ, ಹೊಸ ವ್ಯವಸ್ಥೆ ಜಾರಿಯಾದ ನಂತರ ಒಂದು ರೈಲ್ವೆ ಹಳಿಯ ಕನಿಷ್ಠ ಉದ್ದ 260 ಮೀಟರ್‌ಗೆ ಏರಿದೆ! ಇಷ್ಟು ಉದ್ದದ ಹಳಿಗಳನ್ನು ಭಾರತೀಯ ಉಕ್ಕು ಪ್ರಾಧಿಕಾರ ಉತ್ಪಾದಿಸಿ, ರೈಲ್ವೆಗೆ ಸರಬರಾಜು ಮಾಡುತ್ತಿದೆ’ ಎನ್ನುತ್ತಾರೆ ಅವರು.

ಹೊಸ ವ್ಯವಸ್ಥೆಯಿಂದಾಗಿ ಹಳಿಗಳ ಸವೆತ ಕಡಿಮೆ ಆಗಿ, ಗಾಲಿಗಳ ಬಾಳಿಕೆ ಹೆಚ್ಚಾಗಲಿದೆ. ಇಂಧನ ಉಳಿತಾಯ ಕೂಡ ಆಗುತ್ತದೆ ಎನ್ನುತ್ತಾರೆ ವಿಜಯಾ.

ರೈಲ್ವೆ ಪ್ರಯಾಣ ದರ ಹೆಚ್ಚಳ

ರೈಲು ಪ್ರಯಾಣದ ದರ ಹೆಚ್ಚಳ ಮಾಡಿರೈಲ್ವೆ ಇಲಾಖೆ ಆದೇಶ ಹೊರಡಿಸಿದ್ದು, ಪರಿಷ್ಕೃತ ದರ ಜನವರಿ 1ರಿಂದಲೇ ಜಾರಿಗೆ ಬಂದಿದೆ.

ಉಪನಗರ ರೈಲು ಪ್ರಯಾಣ ದರದಲ್ಲಿ ಬದಲಾವಣೆ ಇಲ್ಲ. ಆರ್ಡಿನರಿ ನಾನ್‌ ಎಸಿ, ಎಸಿ, ಶತಾಬ್ದಿ, ರಾಜಧಾನಿ, ತುರಂತ್ ರೈಲುಗಳಿಗೆ ದರ ಹೆಚ್ಚಳ ಅನ್ವಯವಾಗಲಿದೆ. ಟಿಕೆಟ್ ಕಾಯ್ದಿರಿಸುವಿಕೆ ಶುಲ್ಕದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಇಲಾಖೆ ತಿಳಿಸಿದೆ. ಈಗಾಗಲೇ ಕಾಯ್ದಿರಿಸಿರುವ ಟಿಕೆಟ್‌ಗಳಿಗೆ ದರ ಹೆಚ್ಚಳ ಅನ್ವಯವಾಗುವುದಿಲ್ಲ ಎಂದೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಆರ್ಡಿನರಿ ನಾನ್‌ ಎಸಿ ರೈಲು ಪ್ರಯಾಣದ ದರ ಕಿ.ಮೀ ಗೆ 1 ಪೈಸೆ, ಮೈಲ್/ಎಕ್ಸ್‌ಪ್ರೆಸ್‌ ನಾನ್‌ ಎಸಿರೈಲು ಪ್ರಯಾಣದ ದರ ಕಿ.ಮೀ ಗೆ 2 ಪೈಸೆ ಮತ್ತು ಎಸಿ ರೈಲುಗಳ ಪ್ರಯಾಣ ದರಕಿ.ಮೀ ಗೆ4 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.