ADVERTISEMENT

ಇನ್ನೂ ಮುಗಿಯದ ಗೊಂದಲ: ಸಿಗದ ಪಠ್ಯಪುಸ್ತಕ, ತಪ್ಪದ ಗೋಳಾಟ

ಇನ್ನೂ ಮುಗಿಯದ ಪಠ್ಯ ಪರಿಷ್ಕರಣೆ ಗೊಂದಲ

ಸಚ್ಚಿದಾನಂದ ಕುರಗುಂದ
Published 25 ಜೂನ್ 2022, 19:00 IST
Last Updated 25 ಜೂನ್ 2022, 19:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ರಾಜ್ಯ ಸರ್ಕಾರ ಪರಿಷ್ಕೃತ ಪಠ್ಯಕ್ರಮವನ್ನೇ ಶಾಲೆಗಳಿಗೆ ಪೂರೈಸುವುದಾಗಿ ಹೇಳುತ್ತಿದೆ. ಆದರೆ, ಶಾಲೆ ಆರಂಭವಾಗಿ ಒಂದೂವರೆ ತಿಂಗಳಾಗುತ್ತಿದ್ದರೂ ಪಠ್ಯಪುಸ್ತಕಗಳು ಇನ್ನೂ ವಿದ್ಯಾರ್ಥಿಗಳ ಕೈ ಸೇರಿಲ್ಲ.

ಪರಿಷ್ಕೃತ ಪಠ್ಯದ ಸಮರ್ಥನೆಯಲ್ಲೇ ಮುಳುಗಿರುವ ಸರ್ಕಾರ, ತನ್ನ ಸಮರ್ಥನೆಗೆ ತಕ್ಕಂತೆ ಪುಸ್ತಕ ಪೂರೈಸುವತ್ತ ಲಕ್ಷ್ಯ ತೋರಿಲ್ಲ ಎಂದು ಶಿಕ್ಷಕರೇ ದೂರುವ ಸ್ಥಿತಿ ಎದುರಾಗಿದೆ. ಟೆಂಡರ್‌ ವಿಳಂಬ, ಮುದ್ರಣ ಕಾಗದದ ಸಮಸ್ಯೆಯೂ ಇದಕ್ಕೆ ಮತ್ತೊಂದು ಕಾರಣವಾಗಿದೆ.

ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಪರಿಶೀಲನಾ ಸಮಿತಿ ಪರಿಷ್ಕರಿಸಿದ್ದ ಪಠ್ಯಪುಸ್ತಕದ ಗೊಂದಲ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದರಿಂದ, ವಿದ್ಯಾರ್ಥಿಗಳು ಇನ್ನಷ್ಟು ಕಾಲ ಕಾಯಬೇಕಾದ ಪರಿಸ್ಥಿತಿ ಇದೆ.

ADVERTISEMENT

1ರಿಂದ 10ನೇ ತರಗತಿಯ ಪಠ್ಯಪುಸ್ತಕ ಮುದ್ರಣ ಮತ್ತು ವಿತರಣೆಯಲ್ಲಿ ವಿಳಂಬವಾಗಿದೆ. ಮುಖ್ಯವಾಗಿ 8, 9 ಮತ್ತು 10ನೇ ತರಗತಿಯ ಸಮಾಜ ವಿಜ್ಞಾನ, ಕನ್ನಡ ವಿಷಯದ ಪುಸ್ತಕಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

ಕರ್ನಾಟಕ ಪುಸ್ತಕ ಸಂಘದ ವೆಬ್‌ಸೈಟ್‌ನಲ್ಲಿಯೂ ಕೆಲ ವಿಷಯಗಳ ಪುಸ್ತಕಗಳ ಪಿಡಿಎಫ್‌ ಕೂಡ ಲಭ್ಯ ಇಲ್ಲ. ಸಾರ್ವಜನಿಕರಿಗೆ ದೊರೆಯುವಂತೆ ಕೆಲವು ಪಠ್ಯಪುಸ್ತಕಗಳನ್ನು ಅಪ್‌ಲೋಡ್ ಮಾಡಿದ್ದರೂ, ಅವುಗಳನ್ನು ಬಳಸುವಂತಿಲ್ಲ ಎಂಬ ವಾಟರ್‌ ಮಾರ್ಕ್‌ ಹಾಕಿರುವುದು ಕಗ್ಗಂಟಾಗಿದೆ.

‘ಸಮಾಜ ವಿಜ್ಞಾನ ಮತ್ತು ಕನ್ನಡ ವಿಷಯಗಳ ಪಠ್ಯಪುಸ್ತಕಗಳು ಸಿಕ್ಕಿಲ್ಲ. ಸದ್ಯಕ್ಕೆ, ಶಿಕ್ಷಕರ ಪಾಠ ಪ್ರವಚನದ ಮೇಲೆ ಅವಲಂಬನೆಯಾಗಿದ್ದೇವೆ’ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.

ಕಳೆದ ವರ್ಷವೇ ಸುಮಾರು ₹3 ಕೋಟಿ ಮೊತ್ತದ ಆರು ಲಕ್ಷಕ್ಕೂ ಹೆಚ್ಚು ಪುಸ್ತಕಗಳು ಬಾಕಿ ಉಳಿದಿದ್ದವು. ಹೀಗಾಗಿ,ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪಠ್ಯಪುಸ್ತಕ ಮರುಮುದ್ರಣದಿಂದ ಆರ್ಥಿಕ ಹೊರೆ ಹೆಚ್ಚಾಗುತ್ತದೆ ಎಂದು ಆರ್ಥಿಕ ಇಲಾಖೆ ಅಭಿಪ್ರಾಯಪಟ್ಟಿತ್ತು. ಆದರೆ, ಸರ್ಕಾರ ಈ ಅಭಿಪ್ರಾಯಕ್ಕೆ ಮನ್ನಣೆ ನೀಡದೇ ಪರಿಷ್ಕರಣೆ ಕಾರ್ಯ ಕೈಗೊಂಡಿತ್ತು.

‘ಮುದ್ರಣದ ಟೆಂಡರ್‌ ಪ್ರಕ್ರಿಯೆಯನ್ನು ಈ ಬಾರಿ ತಡವಾಗಿ ಕೈಗೊಳ್ಳಲಾಯಿತು. ‍ಪಠ್ಯದಲ್ಲಿ ಪದೇ ಪದೇ ಬದಲಾವಣೆಗಳನ್ನು ಮಾಡಿದ್ದರಿಂದ ಮುದ್ರಕರ ಕೈಗೆ ಪರಿಷ್ಕೃತ ಪಠ್ಯದ ಅಂತಿಮ ಪಿಡಿಎಫ್‌ ಇರುವ ಸಿ.ಡಿ ತಲುಪುವುದು ಮತ್ತಷ್ಟು ವಿಳಂಬವಾಯಿತು. ನವೆಂಬರ್‌ನಲ್ಲೇ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದರೆ ಸಕಾಲಕ್ಕೆ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಬಹುದಾಗಿತ್ತು’ ಎನ್ನುವುದು ಮುದ್ರಕರ ಅಭಿಪ್ರಾಯ. ಒಟ್ಟಾರೆಯಾಗಿ 84 ಶೀರ್ಷಿಕೆಗಳ ಪರಿಷ್ಕರಣೆ ಮತ್ತು ಮುದ್ರಣ ಕಾರ್ಯ ಕೈಗೊಂಡಿದ್ದರಿಂದ ಕೋಟ್ಯಂತರ ರೂಪಾಯಿ ಹೊರೆಯಾಗಿದೆ ಎಂದು ಅಂದಾಜಿಸಲಾಗಿದೆ.

ರಾಜ್ಯದಲ್ಲಿ ಇದುವರೆಗೆ ಶೇ 85ರಷ್ಟು ಪಠ್ಯಪುಸ್ತಕಗಳು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ತಲುಪಿವೆ. ಆದರೆ, ಎಲ್ಲ ಪಠ್ಯ ಪುಸ್ತಕಗಳು ವಿದ್ಯಾರ್ಥಿಗಳ ಕೈಸೇರಲು ಕನಿಷ್ಠ 15 ದಿನಗಳಿಗೂ ಹೆಚ್ಚು ಸಮಯಾವಕಾಶ ಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯೆ ಪಡೆಯಲು ಕರ್ನಾಟಕ ಪಠ್ಯ ಪುಸ್ತಕ ಸಂಘದ ನಿರ್ದೇಶಕ ಎಂ.ಪಿ. ಮಾದೇಗೌಡ ಅವರನ್ನು ಸಂಪರ್ಕಿಸಿದರೂ ಮೊಬೈಲ್‌ ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.