ADVERTISEMENT

ಎನ್‌ಒಸಿ ನೀಡಲು ₹50,000 ಲಂಚ: ಇಂಧನ ಸಚಿವರ ವಿಶೇಷಾಧಿಕಾರಿ ಬಂಧನ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 15:45 IST
Last Updated 4 ಅಕ್ಟೋಬರ್ 2025, 15:45 IST
<div class="paragraphs"><p>ಕರ್ನಾಟಕ ಲೋಕಾಯುಕ್ತ</p></div>

ಕರ್ನಾಟಕ ಲೋಕಾಯುಕ್ತ

   

ಬೆಂಗಳೂರು: ವಿದ್ಯುತ್ ಸಂಪರ್ಕಕ್ಕಾಗಿ ಎನ್‌ಒಸಿ ನೀಡಲು ₹50,000 ಲಂಚ ಪಡೆಯುತ್ತಿದ್ದ ವೇಳೆ ಇಂಧನ ಸಚಿವರ ವಿಶೇಷಾಧಿಕಾರಿ ಜ್ಯೋತಿ ಪ್ರಕಾಶ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಕೆ‍ಪಿಟಿಸಿಎಲ್‌ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿರುವ ಜ್ಯೋತಿ ಪ್ರಕಾಶ್‌ ಅವರು, ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರ ವಿಶೇಷಾಧಿಕಾರಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ADVERTISEMENT

‘ನಗರದ ಬ್ಯಾಡರಹಳ್ಳಿ ನಿವಾಸಿ ಕೆ.ಎಂ.ಅನಂತರಾಜು ಅವರು ಬಡಾವಣೆ ನಿರ್ವಹಿಸುತ್ತಿದ್ದು, ನಿರ್ಮಾಣ ಕಾಮಗಾರಿಗೆ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಎನ್‌ಒಸಿ ನೀಡಲು ಜ್ಯೋತಿ ಪ್ರಕಾಶ್ ಅವರು ₹ 1ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

‘ಅನಂತರಾಜು ಅವರು ನೀಡಿದ್ದ ದೂರಿನ ಆಧಾರದಲ್ಲಿ ಕಾರ್ಯಾಚರಣೆ ರೂಪಿಸಲಾಗಿತ್ತು. ಅದರಂತೆ ಅನಂತರಾಜು ಅವರು ಶನಿವಾರ ಸಂಜೆ ಜ್ಯೋತಿ ಪ್ರಕಾಶ್ ಅವರಿಗೆ ₹50 ಸಾವಿರ ನೀಡಿದ್ದರು. ಈ ವೇಳೆ ದಾಳಿ ನಡೆಸಿ ಜ್ಯೋತಿ ಪ್ರಕಾಶ್‌ ಮತ್ತು ಅವರ ಚಾಲಕ ನವೀನ್‌ ಎಂಬುವವರನ್ನು ಬಂಧಿಸಲಾಯಿತು’ ಎಂದು ಮಾಹಿತಿ ನೀಡಿದ್ದಾರೆ.

‘ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್‌ ದೇವರಾಜ್‌ ನೇತೃತ್ವದಲ್ಲಿ ಕಾರ್ಯಾಚರಣೆ ರೂಪಿಸಲಾಗಿತ್ತು. ಲಂಚದ ಹಣವನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆದಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.