ADVERTISEMENT

ಅಲೆಮಾರಿಗಳ ವಿಮೋಚನಾ ದಿನ: ಒಳ ಮೀಸಲು; ತಕ್ಷಣವೇ ಶಾಶ್ವತ ಆಯೋಗ ಸ್ಥಾಪಿಸಲು ಆಗ್ರಹ

ಅಲೆಮಾರಿಗಳ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಆರು ನಿರ್ಣಯ: ಪರಿಶಿಷ್ಟರ ಸೌಲಭ್ಯ ಕಬಳಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 14:50 IST
Last Updated 31 ಆಗಸ್ಟ್ 2025, 14:50 IST
<div class="paragraphs"><p>ಕಾರ್ಯಕ್ರಮದಲ್ಲಿ ಪ್ರೊ. ಖಂಡೋಬ, ವೆಂಕಟೇಶ ವೊರ್ಸೆ, ಬಿ.ಟಿ. ಲಲಿತಾ ನಾಯಕ್, ರುದ್ರಪ್ಪ ಲಮಾಣಿ, ಶಿವರುದ್ರಯ್ಯ, ಎನ್. ಅನಂತನಾಯ್ಕ್ ಹಾಗೂ ಸುಭಾಷ್ ರಾಥೋಡ್ ಅವರು ಸಂವಿಧಾನ ಪೀಠಿಕೆ ವಾಚಿಸಿದರು</p></div>

ಕಾರ್ಯಕ್ರಮದಲ್ಲಿ ಪ್ರೊ. ಖಂಡೋಬ, ವೆಂಕಟೇಶ ವೊರ್ಸೆ, ಬಿ.ಟಿ. ಲಲಿತಾ ನಾಯಕ್, ರುದ್ರಪ್ಪ ಲಮಾಣಿ, ಶಿವರುದ್ರಯ್ಯ, ಎನ್. ಅನಂತನಾಯ್ಕ್ ಹಾಗೂ ಸುಭಾಷ್ ರಾಥೋಡ್ ಅವರು ಸಂವಿಧಾನ ಪೀಠಿಕೆ ವಾಚಿಸಿದರು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ರಾಜ್ಯ ಸರ್ಕಾರ ಅಳೆದು ತೂಗಿ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಹಂಚಿಕೆ ಮಾಡಿದೆ. ಈ ವರ್ಗೀಕರಣದ ವೇಳೆ ಆಗಿರುವ ಸಣ್ಣಪುಟ್ಟ ವ್ಯತ್ಯಾಸವನ್ನು ಸರಿಪಡಿಸಲು ಪರಿಶಿಷ್ಟ ಜಾತಿಗಳ ಶಾಶ್ವತ ಆಯೋಗವನ್ನು ರಾಜ್ಯ ಸರ್ಕಾರ ತಕ್ಷಣ ಸ್ಥಾಪನೆ ಮಾಡಬೇಕು’ ಎಂದು ಅಲೆಮಾರಿಗಳ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಆಗ್ರಹಿಸಲಾಯಿತು.

ADVERTISEMENT

ಕರ್ನಾಟಕ ಬಂಜಾರ ಮಹಾಸಭಾ ರಾಜ್ಯ ಸಮಿತಿಯ ಸಹಯೋಗದಲ್ಲಿ ಪರಿಶಿಷ್ಟ ಜಾತಿ ವಿಮುಕ್ತ ಅಲೆಮಾರಿ ಸಮುದಾಯಗಳ ಒಕ್ಕೂಟವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ, ಪ್ರವರ್ಗ ‘ಸಿ’ಯಲ್ಲಿ ಬರುವ ವಿವಿಧ ಸಮುದಾಯಗಳ ಮುಖಂಡರು ಪಾಲ್ಗೊಂಡಿದ್ದರು. ಈ ವೇಳೆ ಒಳ ಮೀಸಲಾತಿಯ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ, ಆರು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಈ ನಿರ್ಣಯಗಳನ್ನು ವಕೀಲ ಎನ್. ಅನಂತನಾಯ್ಕ ಮಂಡಿಸಿದರು. ಇದಕ್ಕೆ ಸಭೆಯಲ್ಲಿದ್ದ ಮುಖಂಡರು ಸಹಮತ ಸೂಚಿಸಿದರು.   

’ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದ ಆಯೋಗ ಸಲ್ಲಿಸಿದ್ದ ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ, ತುಸು ಪರಿಷ್ಕರಣೆಯೊಂದಿಗೆ ಮೀಸಲಾತಿ ವರ್ಗೀಕರಣ ಮಾಡಲಾಗಿದೆ. ಈ ವರ್ಗೀಕರಣದ ವೇಳೆ ಲೋಪದೋಷ ಆಗಿದ್ದರೆ, ಅದನ್ನು ಸರಿಪಡಿಸುವ ಕೆಲಸವನ್ನು ಪರಿಶಿಷ್ಟ ಜಾತಿಗಳ ಶಾಶ್ವತ ಆಯೋಗ ಮಾಡಬೇಕು’ ಎಂದು ಆಗ್ರಹಿಸಿದರು. 

‘ಪ್ರವರ್ಗ ‘ಸಿ’ ಅಡಿ ಬಂಜಾರ, ಭೋವಿ, ಕೊರಮ, ಕೊರಚ ಒಳಗೊಂಡು 50 ಕ್ಕೂ ಹೆಚ್ಚು ಸೂಕ್ಷ್ಮ, ಅತಿ ಸೂಕ್ಷ್ಮ ಜಾತಿಗಳನ್ನು ಸೇರಿಸಿ, ಶೇ 5ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿದೆ. ಸೂಕ್ಷ್ಮ ಸಮುದಾಯಗಳು ‘ಸಿ’ ಗುಂಪಿನಲ್ಲಿ ಇರಲು ಇಚ್ಛಿಸದಿದ್ದರೆ ಅವರಿಗೆ ಪ್ರತ್ಯೇಕ ಗುಂಪು ಮಾಡಿ, ಹೆಚ್ಚುವರಿ ಮೀಸಲಾತಿ ಹಂಚಿಕೆ ಮಾಡಬೇಕು’ ಎಂದರು.

‘ಅಲೆಮಾರಿ ಸಮುದಾಯಗಳ ಇತಿಹಾಸ, ಅಸ್ಮಿತೆ, ಘನತೆ ಮತ್ತು ಪ್ರಗತಿಯ ದೃಷ್ಟಿಯಿಂದ ಆಗಸ್ಟ್ 31 ರಂದು ‘ಅಲೆಮಾರಿಗಳ ವಿಮೋಚನಾ ದಿನಾಚರಣೆ’ಯನ್ನು ವಿವಿಧ ರಾಜ್ಯ ಸರ್ಕಾರಗಳು ಆಚರಿಸುತ್ತಿವೆ. ಕರ್ನಾಟಕ ಸರ್ಕಾರ ಮುಂದಿನ ವರ್ಷ ಇದೇ ದಿನ ಅಧಿಕೃತವಾಗಿ ‘ಅಲೆಮಾರಿಗಳ ವಿಮೋಚನಾ ದಿನಾಚರಣೆ’ ಆಚರಿಸಬೇಕು’ ಎಂದು ಆಗ್ರಹಿಸಿದರು. ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಕಾರ್ಯಕ್ರಮ ಉದ್ಘಾಟಿಸಿದರು.

‘ವಿಶೇಷ ಪ್ಯಾಕೇಜ್ ಘೋಷಿಸಿ’

‘ವಿಮುಕ್ತ ಅಲೆಮಾರಿ ಸಮುದಾಯಗಳ ಶಿಕ್ಷಣ ಉದ್ಯೋಗ ಮತ್ತು ಅರ್ಥಿಕ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ವಿಮುಕ್ತ ಅಲೆಮಾರಿಗಳ ಶಾಶ್ವತ ಆಯೋಗ ಸ್ಥಾಪನೆ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಸಮುದಾಯಗಳಿಗೆ ವಿಶೇಷ ಪ್ಯಾಕೇಜ್ ನೀಡಬೇಕು. ವೀರಶೈವ ಲಿಂಗಾಯತ ಜಂಗಮರು ಸಮುದಾಯಗಳ ಜನರು ಪರಿಶಿಷ್ಟ ಜಾತಿಯ ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ಪಡೆದಿದ್ದಾರೆ. ಪರಿಶಿಷ್ಟರ ಸೌಲಭ್ಯಗಳನ್ನು ಕಬಳಿಸುತ್ತಿದ್ದಾರೆ. ಅಂತಹವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಅವರ ಜಾತಿ ಪ್ರಮಾಣಪತ್ರ ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದೂ ಸಭೆಯಲ್ಲಿ ಒತ್ತಾಯಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.