ADVERTISEMENT

ಲಾಕ್‌ಡೌನ್ ಸಡಿಲಿಕೆ: ಮದ್ಯಕ್ಕಾಗಿ ಮಹಿಳೆಯರೂ ಕ್ಯೂ...

​ಪ್ರಜಾವಾಣಿ ವಾರ್ತೆ
Published 4 ಮೇ 2020, 7:33 IST
Last Updated 4 ಮೇ 2020, 7:33 IST
ಮದ್ಯ ಖರೀದಿಗಾಗಿ ಸರದಿಯಲ್ಲಿ ನಿಂತಿರುವ ಮಹಿಳೆಯರು
ಮದ್ಯ ಖರೀದಿಗಾಗಿ ಸರದಿಯಲ್ಲಿ ನಿಂತಿರುವ ಮಹಿಳೆಯರು   

ಬೆಂಗಳೂರು: ಲಾಕ್‌ಡೌನ್ ಸಡಿಲಿಕೆಯಿಂದ ಮದ್ಯದಂಗಡಿಗಳನ್ನು ತೆರೆಯಲಾಗಿದ್ದು, ನಗರದಾದ್ಯಂತ ಹೆಚ್ಚಿನ ಸ್ಥಳಗಳಲ್ಲಿ ಮದ್ಯ ಖರೀದಿಗಾಗಿ ಪುರುಷರೊಂದಿಗೆ ಮಹಿಳೆಯರು ಕೂಡ ಸರದಿಯಲ್ಲಿ ನಿಂತಿರುವುದು ಕಂಡುಬರುತ್ತಿದೆ. ಜಿಲ್ಲೆಯ ಹೆಚ್ಚಿನ ವ್ಯಾಪಾರ ಕೇಂದ್ರಗಳಾದ ಕೋರಮಂಗಲ, ಜಯನಗರ, ಮಾರತಹಳ್ಳಿ, ಇಂದಿರಾನಗರ ಮತ್ತು ಜೆಪಿ ನಗರಗಳಲ್ಲಿ ಮಹಿಳೆಯರು ಸರದಿಯಲ್ಲಿ ನಿಂತಿದ್ದಾರೆ.

ಇತರೆಡೆಗಳಲ್ಲಿ ಬಹುತೇಕ ಪುರುಷರೇ ಗುಂಪಾಗಿ ನಿಂತಿದ್ದು, ಕೊಳೆಗೇರಿಗಳು ಇರುವ ಕಡೆಗಳಲ್ಲಿರುವ ಮಳಿಗೆಗಳಲ್ಲಿ ಮಹಿಳೆಯರು ನಿಂತಿರುವುದು ಕಂಡುಬಂದಿದೆ.ಹೆಚ್ಚಿನ ಸ್ಥಳಗಳಲ್ಲಿ ಅಂತರವನ್ನು ಕಾಯ್ದುಕೊಳ್ಳಲಾಗಿದ್ದು, ಗ್ರಾಹಕರು ಮತ್ತು ಎಂಆರ್‌ಪಿ ಔಟ್‌ಲೆಟ್‌ಗಳ ಸಿಬ್ಬಂದಿ ಮಾಸ್ಕ್ ಮತ್ತು ಕೈಗವಸುಗಳನ್ನು ಧರಿಸಿದ್ದಾರೆ.

ಕಸ್ತೂರ್ಬಾ ರಸ್ತೆಯ ಟಾನಿಕ್ ಎದುರು ಅತಿಹೆಚ್ಚಿನ ಮಹಿಳೆಯರು ನಿಂತಿರುವುದು ಕಂಡುಬಂದಿದೆ.

ADVERTISEMENT

ಬನಶಂಕರಿಯ ಔಟರ್ ರಿಂಗ್ ರಸ್ತೆಯ ಹನಿ ಡ್ರೂ ಡ್ರಾಪ್ಸ್ ಸಿಬ್ಬಂದಿ ಮಾತನಾಡಿ, ಬೆಳಿಗ್ಗೆ 9 ಗಂಟೆ ಸುಮಾರಿಗೆ ನಾವು ಅಂಗಡಿ ತೆರೆದಿದ್ದೇವೆ. ಜನರು ಬೆಳಿಗ್ಗೆಯಿಂದಲೇ ಅಂಗಡಿ ಮುಂಭಾಗದಲ್ಲಿ ಕಾಯುತ್ತಿದ್ದರು. ಅಂತರವನ್ನು ಕಾಯ್ದುಕೊಳ್ಳಲಾಗಿದೆ. ನಾವು ಅಂಗಡಿಯನ್ನು ತೆರೆದ ನಂತರ ಗುಂಪು ಗುಂಪಾಗಿ ಧಾವಿಸಿದರು. ಆಗ ಅಂತರವನ್ನು ಕಾಯ್ದುಕೊಳ್ಳುವವರೆಗೂ ಮದ್ಯ ನೀಡುವುದಿಲ್ಲ ಎಂದು ಖಚಿತವಾಗಿ ಹೇಳಿದ ಬಳಿಕ ಸರದಿಯಲ್ಲಿ ನಿಂತು ಮದ್ಯ ಖರೀದಿಸಿದರು ಎಂದು ತಿಳಿಸಿದ್ದಾರೆ.

ಗಿರಿನಗರದ ಗ್ರಾಹಕ ಕಿಶೋರ್ ಮಾತನಾಡಿ, ಮುಂಜಾನೆ 6 ಗಂಟೆಗೆ ಹನುಮಂತನಗರದ ವೈನ್‌ ಶಾಪ್ ಎದುರು ಸರದಿಯಲ್ಲಿ ನಿಂತಿದ್ದೆ. ಅದರಂತೆ 9. 30 ಗಂಟೆಗೆ ಮದ್ಯ ಸಿಕ್ಕಿತು. ನಾನು ಮೂರು ಬಾಟಲ್ ತೆಗೆದುಕೊಂಡಿದ್ದೇನೆ. ಅಲ್ಲಿ ಸ್ಯಾನಿಟೈಸರ್ ಅನ್ನು ಇಡಲಾಗಿತ್ತು. ಕೈ ಸ್ವಚ್ಛಗೊಳಿಸಿಕೊಂಡ ನಂತರವೇ ಮದ್ಯ ಪೂರೈಸಲಾಯಿತು. ಒಂದು ಬಾರಿಗೆ ಐವರಿಗಷ್ಟೇ ಮದ್ಯ ಖರೀದಿಸಲು ಅವಕಾಶವಿತ್ತು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.