ನವದೆಹಲಿ: ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಕಾರಣಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಸೋಮವಾರ ಷೋಕಾಸ್ ನೋಟಿಸ್ ನೀಡಿದ್ದು, 72 ಗಂಟೆಗಳಲ್ಲಿ ಸಮಜಾಯಿಷಿ ನೀಡುವಂತೆ ತಾಕೀತು ಮಾಡಿದೆ.
ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕುಟುಂಬ ರಾಜಕಾರಣ, ಹೊಂದಾಣಿಕೆ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಯತ್ನಾಳ ಅವರು ನಿರಂತರ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ. ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕಿತ್ತೊಗೆಯಬೇಕು ಎಂದು ಯತ್ನಾಳ ಬಣ ಪಟ್ಟು ಹಿಡಿದಿದೆ. ಕಳೆದೊಂದು ವರ್ಷದಲ್ಲಿ ಯತ್ನಾಳ ಅವರಿಗೆ ಶಿಸ್ತು ಸಮಿತಿ ನೀಡುತ್ತಿರುವ ಮೂರನೇ ನೋಟಿಸ್ ಇದು.
ನಾಯಕರ ವಿರುದ್ಧ ಬಹಿರಂಗ ಹೇಳಿಕೆ ನೀಡಿ ಪಕ್ಷದ ಶಿಸ್ತನ್ನು ಧಿಕ್ಕರಿಸಿದ ಕಾರಣಕ್ಕೆ ಯತ್ನಾಳ ಅವರಿಗೆ ಎರಡು ತಿಂಗಳ ಹಿಂದೆ ಕೇಂದ್ರ ಶಿಸ್ತು ಸಮಿತಿ ನೋಟಿಸ್ ನೀಡಿತ್ತು. ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಅವರಿಗೆ ಯತ್ನಾಳ ವಿವರಣೆ ನೀಡಿದ್ದರು. ನಾಯಕರ ವಿರುದ್ಧ ಹೇಳಿಕೆ ನೀಡದಂತೆ ಪಾಠಕ್ ಸೂಚಿಸಿದ್ದರು. ಆ ಬಳಿಕ, ಯತ್ನಾಳ ಅವರು ನಾಲ್ಕು ದಿನ ಮೌನವಾಗಿದ್ದರು. ಇನ್ನುಮುಂದೆ ಶಾಸಕ ರಮೇಶ ಜಾರಕಿಹೊಳಿ ಅವರು ಪಕ್ಷದ ವಿಚಾರಗಳ ಬಗ್ಗೆ ಮಾತನಾಡಲಿದ್ದಾರೆ ಎಂದೂ ಹೇಳಿದ್ದರು. ಆ ನಂತರ, ವಿಜಯೇಂದ್ರ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿದ್ದರು. ವಿಜಯೇಂದ್ರ ಅವರನ್ನು ಹುದ್ದೆಯಲ್ಲಿ ಮುಂದುವರಿಸದಂತೆ ಒತ್ತಡ ಹೇರಲು ಹಾಗೂ ‘ಹೊಂದಾಣಿಕೆ ರಾಜಕಾರಣ’ದ ವಿರುದ್ಧ ದೂರು ನೀಡಲು ಯತ್ನಾಳ ಬಣದ ನಾಯಕರು ದೆಹಲಿಗೆ ಎರಡು ಬಾರಿ ಬಂದಿದ್ದರೂ ವರಿಷ್ಠರ ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ರಾಜ್ಯದ ಸಂಸದರೊಂದಿಗೆ ಚರ್ಚಿಸಿ ವಾಪಸಾಗಿದ್ದರು.
‘ನೀವು ಪಕ್ಷದ ಶಿಸ್ತನ್ನು ಪದೇ ಪದೇ ಉಲ್ಲಂಘನೆ ಮಾಡುತ್ತಿದ್ದೀರಿ. ಈ ಹಿಂದೆಯೂ ನಿಮಗೆ ನೋಟಿಸ್ ನೀಡಲಾಗಿತ್ತು. ಮುಂದಿನ ದಿನಗಳಲ್ಲಿ ಉತ್ತಮ ನಡವಳಿಕೆ ತೋರುತ್ತೇನೆ ಎಂದು ಆಗ ಭರವಸೆ ನೀಡಿದ್ದೀರಿ. ಆದರೆ, ಅದನ್ನೂ ಉಲ್ಲಂಘಿಸಿದ್ದೀರಿ. ಇಂತಹ ನಡವಳಿಕೆಗೆ ನಿಮ್ಮ ವಿರುದ್ಧ ಪಕ್ಷ ಯಾಕೆ ಶಿಸ್ತು ಕ್ರಮ ಕೈಗೊಳ್ಳಬಾರದು. ಇದಕ್ಕೆ ಮೂರು ದಿನಗಳಲ್ಲಿ ವಿವರಣೆ ನೀಡಬೇಕು’ ಎಂದು ಓಂ ಪಾಠಕ್ ಅವರು ನೋಟಿಸ್‌ನಲ್ಲಿ ಸೂಚಿಸಿದ್ದಾರೆ. ‘72 ಗಂಟೆಗಳೊಳಗೆ ಉತ್ತರ ನೀಡದಿದ್ದರೆ ಪಕ್ಷ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದು ಅವರು ಎಚ್ಚರಿಸಿದ್ದಾರೆ.
ಚಟುವಟಿಕೆ ಕೇಂದ್ರವಾದ ಸೋಮಣ್ಣ ನಿವಾಸ: ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಸಂಸದರ ನಿವಾಸಕ್ಕೆ ಸೋಮವಾರ ಸ್ಥಳಾಂತರಗೊಂಡರು. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಪೂಜೆ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ನಾಯಕರು ಭೇಟಿ ನೀಡಿ ಶುಭ ಕೋರಿದರು ಹಾಗೂ ರಾಜ್ಯ ಘಟಕದಲ್ಲಿನ ಬಿಕ್ಕಟ್ಟು ಸರಿಪಡಿಸುವ ಕುರಿತು ಚರ್ಚಿಸಿದರು.
ಬಸನಗೌಡ ಪಾಟೀಲ ಯತ್ನಾಳ, ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕರಾದ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಮಹೇಶ ಕುಮಠಳ್ಳಿ, ಮುಖಂಡ ಎನ್.ಆರ್.ಸಂತೋಷ್ ಅವರು ಸೋಮಣ್ಣ ಅವರಿಗೆ ಶುಭ ಕೋರಿದರು. ಈ ನಾಯಕರು ತುಸು ಹೊತ್ತು ಚರ್ಚಿಸಿದರು. ನಂತರ, ತುರ್ತು ಕೆಲಸದ ‘ನೆಪ’ ಹೇಳಿ ಸೋಮಣ್ಣ ಮನೆಯಿಂದ ನಿರ್ಗಮಿಸಿದರು. ಯತ್ನಾಳ ಬಣದ ನಾಯಕರು ಸಚಿವರ ಮನೆಯಲ್ಲಿ ಸುಮಾರು 15 ನಿಮಿಷ ಚರ್ಚಿಸಿದರು. ಹೊರಬಂದ ನಾಯಕರು, ‘ಸೋಮಣ್ಣ ಮೂಲಕ ವರಿಷ್ಠರು ನಮಗೆ ಸಂದೇಶ ರವಾನಿಸಿದ್ದಾರೆ. ತರಾತುರಿ ಮಾಡಬೇಡಿ ಎಂದು ಸೂಚಿಸಿದ್ದಾರೆ’ ಎಂದು ಹೇಳಿಕೊಂಡರು. ಯತ್ನಾಳ, ಲಿಂಬಾವಳಿ, ಕುಮಾರ ಬಂಗಾರಪ್ಪ ಅವರು ಕರ್ನಾಟಕ ಭವನಕ್ಕೆ ತೆರಳಿದರು.
ಸ್ವಲ್ಪ ಸಮಯದ ಬಳಿಕ ಸಚಿವರ ಮನೆಗೆ ಸಂಸದ ಬಸವರಾಜ ಬೊಮ್ಮಾಯಿ, ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಮಾಜಿ ಸಚಿವ ಮುರುಗೇಶ ನಿರಾಣಿ ಬಂದರು. ಯತ್ನಾಳ ಬಣದ ನಾಯಕರು, ‘ತಟಸ್ಥ’ ನಾಯಕರ ಜತೆಗೆ ಸೋಮಣ್ಣ ಸುದೀರ್ಘವಾಗಿ ಚರ್ಚಿಸಿದರು. ‘ರಾಜ್ಯದಲ್ಲಿ ಬಣ ರಾಜಕಾರಣ ವಿಕೋಪಕ್ಕೆ ಹೋಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ರಾಜ್ಯ ಘಟಕದ ಅಧ್ಯಕ್ಷರ ನೇಮಕ ಆಗಬೇಕಿದೆ. ಇಲ್ಲದಿದ್ದರೆ, ಬಿಕ್ಕಟ್ಟು ಇನ್ನಷ್ಟು ತೀವ್ರವಾಗಲಿದೆ. ಈ ವಿಷಯವನ್ನು ವರಿಷ್ಠರ ಗಮನಕ್ಕೆ ತರಬೇಕು’ ಎಂದು ನಾಯಕರು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.
ಸಚಿವರ ಮನೆ ಪೂಜಾ ಕಾರ್ಯಕ್ರಮದಲ್ಲಿ ಹಾಜರಾಗಲು ದೆಹಲಿಗೆ ತೆರಳುತ್ತಿದ್ದೇನೆ ಎಂದು ವಿಜಯೇಂದ್ರ ಅವರು ಬೆಂಗಳೂರಿನಲ್ಲಿ ಭಾನುವಾರ ಹೇಳಿಕೆ ನೀಡಿದ್ದರು. ಆದರೆ, ಅವರು ಸಚಿವರ ಮನೆಗೆ ಸೋಮವಾರ ಬರಲಿಲ್ಲ. ‘ಕೇಂದ್ರ ಸಚಿವರು, ರಾಜ್ಯದ ಸಂಸದರು ಹಾಗೂ ಎರಡು ಇಲಾಖೆಗಳ ಅಧಿಕಾರಿಗಳಿಗೆ ಮಾತ್ರ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಉಳಿದಂತೆ, ರಾಜ್ಯದ ನಾಯಕರನ್ನು ಕರೆದಿರಲಿಲ್ಲ’ ಎಂದು ಸೋಮಣ್ಣ ಆಪ್ತರು ಸ್ಪಷ್ಟಪಡಿಸಿದರು.
ವರಿಷ್ಠರಿಂದ ಸಂದೇಶ; ಯತ್ನಾಳ
‘ನಾವು ಬಂದ ಕೆಲಸ ಯಶಸ್ವಿಯಾಗಿದೆ. ಸಚಿವ ಸೋಮಣ್ಣ ಮೂಲಕ ವರಿಷ್ಠರು ನಮಗೆ ಸಂದೇಶ ರವಾನಿಸಿದ್ದಾರೆ. ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ’ ಎಂದು ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು. ‘ರಾತ್ರಿ ಕಂಡ ಬಾವಿಗೆ ಹಗಲು ಬೀಳು ಎಂದು ವರಿಷ್ಠರು ಸೂಚಿಸಿದರೆ ಅದಕ್ಕೂ ನಾವು ಸಿದ್ಧ. ನಾವು ಭಿನ್ನಮತೀಯ ನಾಯಕರು ಅಲ್ಲ. ಹೊಂದಾಣಿಕೆ ರಾಜಕಾರಣ ಮಾಡುವ ಗಿರಾಕಿಗಳಲ್ಲ. ವರಿಷ್ಠರ ಭೇಟಿಗೆ ಸಮಯಾವಕಾಶ ಕೇಳಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.