ADVERTISEMENT

'ಚಿಲುಮೆ' ಪ್ರಕರಣದಲ್ಲಿ ಐಎಎಸ್‌ ಅಧಿಕಾರಿಗಳಿಗೆ ನೋಟಿಸ್: ವಿಚಾರಣೆ ಇಂದು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 21:10 IST
Last Updated 2 ಡಿಸೆಂಬರ್ 2022, 21:10 IST
   

ಬೆಂಗಳೂರು: ಮತದಾರರ ವೈಯಕ್ತಿಕ ಮಾಹಿತಿ ಕಳವು ಹಾಗೂ ದುರ್ಬಳಕೆ ಆರೋಪದಡಿ ಚಿಲುಮೆ ಸಂಸ್ಥೆ ವಿರುದ್ಧ ದಾಖಲಾಗಿರುವ ಪ್ರಕರಣ ಸಂಬಂಧ ಐಎಎಸ್ ಅಧಿಕಾರಿಗಳಾದ ಕೆ. ಶ್ರೀನಿವಾಸ್ ಹಾಗೂ ಎಸ್. ರಂಗಪ್ಪ ಅವರಿಗೆ ಹಲಸೂರು ಗೇಟ್ ಪೊಲೀಸರು ನೋಟಿಸ್ ನೀಡಿದ್ದಾರೆ.

ಹಲಸೂರು ಗೇಟ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಚಿಲುಮೆ ಸಂಸ್ಥೆಯ ಸಂಸ್ಥಾಪಕ ರವಿಕುಮಾರ್, ಬಿಬಿಎಂಪಿಯ ನಾಲ್ವರು ಅಧಿಕಾರಿಗಳು ಸೇರಿ 15 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಇದೀಗ ಪ್ರಕರಣದಲ್ಲಿ ಶ್ರೀನಿವಾಸ್ ಹಾಗೂ ರಂಗಪ್ಪ ಅವರ ಪಾತ್ರದ ಬಗ್ಗೆಯೂ ಪೊಲೀಸರಿಗೆ ಅನು ಮಾನ ಬಂದಿತ್ತು. ಹೀಗಾಗಿ, ವಿಚಾರಣೆ ನಡೆಸಲೆಂದು ನೋಟಿಸ್ ಜಾರಿ ಮಾಡಿ ದ್ದಾರೆ.

‘ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಕೆ. ಶ್ರೀನಿವಾಸ್‌ ಮತ್ತು ಬಿಬಿಎಂಪಿ ವಿಶೇಷ ಆಯುಕ್ತರಾಗಿದ್ದ ಎಸ್‌. ರಂಗಪ್ಪ ಅವರ ವಿಚಾರಣೆ ಅಗತ್ಯವಿದೆ. ಹೀಗಾಗಿ, ಇಬ್ಬರಿಗೂ ನೋಟಿಸ್ ನೀಡಲಾಗಿದೆ. ಶನಿವಾರ ಬೆಳಿಗ್ಗೆ ಹಲಸೂರು ಗೇಟ್ ಠಾಣೆಗೆ ಬಂದು ವಿಚಾರಣೆಗೆ ಹಾಜರಾಗುವಂತೆ ಸೂಚಿ ಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಪ್ರಕರಣದಲ್ಲಿ ಬಂಧಿಸಲಾಗಿದ್ದ ಆರೋಪಿಗಳಿಂದ ಈಗಾಗಲೇ ಸಾಕಷ್ಟು ಮಾಹಿತಿ ಸಂಗ್ರಹಿಸಲಾಗಿದೆ. ಅದೇ ಮಾಹಿತಿ ಆಧರಿಸಿ ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದ್ದು, ಇವುಗಳಿಗೆ ಐಎಎಸ್ ಅಧಿಕಾರಿಗಳಿಂದ ಉತ್ತರ ಪಡೆಯಬೇಕಿದೆ. ಅವರು ಹೇಳಿಕೆ ನೀಡಿದ ನಂತರವೇ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದೂ ಹೇಳಿದರು.

ADVERTISEMENT

ಅಮಾನತಾಗಿದ್ದ ಅಧಿಕಾರಿಗಳು: ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಕರ್ತವ್ಯಲೋಪ ಎಸಗಿದ ಆರೋಪದಡಿ ಕೆ. ಶ್ರೀನಿವಾಸ್‌ ಮತ್ತು ಎಸ್‌. ರಂಗಪ್ಪ ಅವರನ್ನು ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಸೇವೆಯಿಂದ ಅಮಾನತುಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ನ. 26ರಂದು ಆದೇಶ ಹೊರಡಿಸಿತ್ತು.

ಚಿಲುಮೆ ಸಂಸ್ಥಾಪಕ ಜೈಲಿಗೆ

ಚಿಲುಮೆ ಸಂಸ್ಥೆಯ ಸಂಸ್ಥಾಪಕ ರವಿಕುಮಾರ್ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದ ಪೊಲೀಸರು, ಕಸ್ಟಡಿ ಅವಧಿ ಮುಗಿದಿದ್ದರಿಂದ ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

‘ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ರವಿಕುಮಾರ್‌ನನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ. ಸದ್ಯ ಆತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ’ ಎಂದು ‍ಪೊಲೀಸ್ ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.