ADVERTISEMENT

ಕರ್ನಾಟಕದಲ್ಲಿಯೂ ಎನ್‌ಆರ್‌ಸಿ ಅನುಷ್ಠಾನಕ್ಕೆ ಚಿಂತನೆ: ಬಸವರಾಜ ಬೊಮ್ಮಾಯಿ 

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 18:50 IST
Last Updated 3 ಅಕ್ಟೋಬರ್ 2019, 18:50 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯನ್ನು ಕರ್ನಾಟಕದಲ್ಲಿಯೂ ಅನುಷ್ಠಾನಕ್ಕೆ ತರುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಗುರುವಾರ ಹೇಳಿದ್ದಾರೆ.

ದೇಶದಾದ್ಯಂತ ಎನ್‌ಆರ್‌ಸಿ ಅನುಷ್ಠಾನಕ್ಕೆ ತರುವ ಬಗ್ಗೆ ಮಹತ್ತರ ಚರ್ಚೆಗಳು ನಡೆದು ಬರುತ್ತಿವೆ.

ಕರ್ನಾಟಕದಲ್ಲಿಯೂ ಗಡಿದಾಟಿ ಬಂದ ಜನರು ಇಲ್ಲಿಯೇ ನೆಲೆಸಿ ಬಿಡುತ್ತಾರೆ. ಇಲ್ಲಿ ಹಲವಾರು ಸಮಸ್ಯೆಗಳಿವೆ. ಹಾಗಾಗಿ ನಾವು ಮಾಹಿತಿ ಕಲೆ ಹಾಕುತ್ತಿದ್ದೇವೆ. ಆಮೇಲೆ ಕೇಂದ್ರ ಗೃಹ ಸಚಿವರ ಜತೆ ಸಮಾಲೋಚನೆ ಮಾಡಿ ಮುಂದುವರಿಯುತ್ತೇವೆ ಎಂದು ಬೊಮ್ಮಾಯಿ ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಎನ್‌ಆರ್‌ಸಿ ಅನುಷ್ಠಾನದ ಬಗ್ಗೆ ಈಗಾಗಲೇ ಎರಡು ಸಭೆ ನಡೆಸಿಯಾಗಿದೆ ಎಂದು ಬುಧವಾರ ಹಾವೇರಿಯಲ್ಲಿ ಮಾಧ್ಯಮದವರೊಡನೆ ಮಾತಾಡಿದ ಸಚಿವರು ಹೇಳಿದ್ದರು.

ಕಾನೂನು ಬಗ್ಗೆ ಅರಿಯವಂತೆ ನಾನು ನನ್ನ ಹಿರಿಯ ಅಧಿಕಾರಿಗಳಿಗೆ ಹೇಳಿದ್ದೇನೆ. ಬೆಂಗಳೂರು ಮತ್ತು ಇತರ ಬೃಹತ್ ನಗರಗಳಲ್ಲಿ ವಿದೇಶಿಯರು ಬಂದು ಇಲ್ಲಿಯೇ ನೆಲೆಯೂರುತ್ತಾರೆ. ಇವರು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಕೆಲವರನ್ನು ಬಂಧಿಸಲಾಗಿದೆ. ಈ ವಾರ ಎನ್‌ಆರ್‌ಸಿ ಬಗ್ಗೆ ನಾವು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಬಿಜೆಪಿ ವಿಪಕ್ಷದಲ್ಲಿದ್ದಾಗ ಬೆಂಗಳೂರಿನಲ್ಲಿ ಬಾಂಗ್ಲಾದೇಶಿ ವಲಸೆಗಾರರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು.
ದೇಶದಾದ್ಯಂತ ಎನ್‌ಆರ್‌ಸಿ ಅನುಷ್ಠಾನಕ್ಕೆ ತರುವ ಮೂಲಕ ದೇಶದಲ್ಲಿರುವ ಅಕ್ರಮ ವಲಸೆಗಾರರನ್ನು ದೇಶದಿಂದ ಹೊರದಬ್ಬಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.