ಅರಣ್ಯ
ಬೆಂಗಳೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಅನುಮೋದನೆ ಇಲ್ಲದೆ, ಮಂಡಳಿಯ ಖಾತೆಯಿಂದ ₹426 ಕೋಟಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲು ಸರ್ಕಾರ ಆದೇಶಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಅರಣ್ಯೀಕರಣ, ಆನೆ ಹಾವಳಿ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ₹300 ಕೋಟಿ ಹಾಗೂ ಕೆ–ಶೋರ್ ಯೋಜನೆಗೆ ₹126 ಕೋಟಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲು ಹಣಕಾಸು ಇಲಾಖೆ ಸಮ್ಮತಿಸಿದೆ.
‘ಸರ್ಕಾರದಿಂದ ಅನುದಾನ ಪಡೆಯದ ಮಂಡಳಿ, ಎಲ್ಲ ವೆಚ್ಚಗಳನ್ನು ತನ್ನ ರಾಜಸ್ವದಿಂದಲೇ ಭರಿಸಬೇಕಾಗುತ್ತದೆ. ಹೊಸ ಸಿಬ್ಬಂದಿಗೂ ವೇತನ–ಭತ್ಯೆ ನೀಡಬೇಕಾಗುತ್ತದೆ. ಹೀಗಾಗಿ, ಅರಣ್ಯೀಕರಣ ಹಾಗೂ ಬ್ಯಾರಿಕೇಡ್ ಅಳವಡಿಸಲು ಹಣ ನೀಡಬಾರದು. ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಮಂಡಳಿ ₹17 ಕೋಟಿ ನೀಡಿರುವುದಕ್ಕೆ ಮಹಾಲೇಖಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಗೆ ₹300 ಕೋಟಿ ನೀಡಿದರೂ ಆಕ್ಷೇಪ ವ್ಯಕ್ತವಾಗುವ ಸಂಭವವಿರುತ್ತದೆ’ ಎಂದು ಸೆಪ್ಟೆಂಬರ್ 9ರಂದು ನಡೆದ ಮಂಡಳಿ ಸಭೆಯಲ್ಲಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಂಡಳಿ ಸಭೆಯ ನಿರ್ಣಯ, ಹೂಡಿಕೆ ಸಮಿತಿ ನಡಾವಳಿ, ಸಾರ್ವಜನಿಕರ ಆಕ್ಷೇಪಗಳೊಂದಿಗೆ ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಅಕ್ಟೋಬರ್ 9ರಂದು ಮಂಡಳಿಯ ಸದಸ್ಯ ಕಾರ್ಯದರ್ಶಿ ಪತ್ರ ಬರೆದಿದ್ದರು.
ಮಂಡಳಿಯ ತಕರಾರುಗಳನ್ನು ಪತ್ರದಲ್ಲಿ ಉಲ್ಲೇಖಿಸಿರುವ ಅವರು, ‘ಹಣ ವರ್ಗಾವಣೆ ಮಾಡುವ ಬಗ್ಗೆ ಅರಣ್ಯ ಇಲಾಖೆಯೇ ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಬೇಕು’ ಎಂದಿದ್ದರು. ಇದನ್ನು ಆಧರಿಸಿ, ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಣಕಾಸು ಇಲಾಖೆಗೆ ಪತ್ರ ಬರೆದಿದ್ದರು.
‘ರಾಜ್ಯ ಮಾಲಿನ್ಯ ಮಂಡಳಿಯಿಂದ ₹200 ಕೋಟಿಯನ್ನು ನಾಲ್ಕು ವರ್ಷಗಳಿಗೆ ಶೇ 7.5ರಷ್ಟು ಸರಳ ಬಡ್ಡಿಯಂತೆ ಪಡೆದುಕೊಳ್ಳಬಹುದು. ಅರಣ್ಯ ಇಲಾಖೆ ಇನ್ನೂ ₹100 ಕೋಟಿಯನ್ನು ಪಡೆಯಲು ಬಯಸಿದರೆ ಅದನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುದಾನವಾಗಿ ಪಡೆದುಕೊಳ್ಳಬಹುದು’ ಎಂದು ಹಣಕಾಸು ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯವರು ನವೆಂಬರ್ 27ರಂದು ಅನುಮೋದನೆ (ಎಫ್‌ಡಿ/621/ಇಎಕ್ಸ್‌ಪಿ5/2024; ಎಫ್‌ಇಇ/427/ಇಪಿಸಿ/2024) ನೀಡಿದ್ದಾರೆ.
ಅರಣ್ಯ ಚಿವರ ಆಪ್ತ ಶಾಖೆಗೆ ಎಲೆಕ್ಟ್ರಾನಿಕ್ ಉಪಕರಣ ಒದಗಿಸಲು ಕೋರಿದ ಟಿಪ್ಪಣಿ
₹126 ಕೋಟಿ ಬಿಡುಗಡೆಗೆ ಅರಣ್ಯ ಇಲಾಖೆ ಆದೇಶ
₹300 ಕೋಟಿ ಬಿಡುಗಡೆಗೆ ಹಣಕಾಸು ಇಲಾಖೆ ಆದೇಶ
ಆಕ್ಷೇಪ: ‘ನವೆಂಬರ್ ಮೊದಲನೇ ವಾರದಲ್ಲಿ ನಡೆಯಬೇಕಿದ್ದ ಮಂಡಳಿಯ 247ನೇ ಸಭೆಯನ್ನು ಹೊಸ ಅಧ್ಯಕ್ಷರ ನೇಮಕವಾಗುವವರೆಗೂ ಮುಂದೂಡಲಾಗಿತ್ತು. ನಂತರದ ದಿನಗಳಲ್ಲಿ ಪ್ರಭಾರ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. 248ನೇ ಸಭೆಯನ್ನೂ ಡಿಸೆಂಬರ್ 2ರಂದು ನಡೆಸಲು ನಿರ್ಧರಿಸಲಾಗಿದೆ. ಈ ಸಭೆಯಲ್ಲಿ ಅಧಿಕಾರಿಗಳೇ ಇರುವುದರಿಂದ ಸರ್ಕಾರ ಈಗಾಗಲೇ ಆದೇಶಿಸಿರುವುದಕ್ಕೆ ಅನುಮೋದನೆ ನೀಡುತ್ತಾರೆ’ ಎಂಬ ಆಕ್ಷೇಪವೂ ವ್ಯಕ್ತವಾಗಿದೆ.
ಮಂಡಳಿಗೆ ಬಾಧಕ ಇಲ್ಲ: ಸಚಿವ ಈಶ್ವರ ಖಂಡ್ರೆ
‘ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ₹300 ಕೋಟಿ ಪಡೆದು ಅರಣ್ಯ ಇಲಾಖೆಯ ವತಿಯಿಂದ ಅರಣ್ಯೀಕರಣ ಮತ್ತು ಮಾನವ-ವನ್ಯಜೀವಿ ಸಂಘರ್ಷ ತಪ್ಪಿಸುವ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಇದರಿಂದ ಮಂಡಳಿಗೆ ಯಾವುದೇ ಬಾಧಕ ಇಲ್ಲ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಹಣ ವರ್ಗಾವಣೆ ಕುರಿತು ‘ಪ್ರಜಾವಾಣಿ’ಯ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ‘ಇದು ಪರಿಸರ ಪೂರಕ ಚಟುವಟಿಕೆ ಆಗಿದ್ದು, ಮಂಡಳಿಯಲ್ಲಿ ಸಂಗ್ರಹವಾಗುವ ಹಣ ಪರಿಸರಪೂರಕ ಚಟುವಟಿಕೆಗೆ ಬಳಕೆ ಮಾಡಬೇಕು. ಅರಣ್ಯ ಇಲಾಖೆ ಮತ್ತು ಮಂಡಳಿಯ ಉದ್ದೇಶ ಒಂದೇ ಆಗಿದೆ. ಇದು ಒಂದು ಆಂತರಿಕ ಹೊಂದಾಣಿಕೆಯಷ್ಟೆ’ ಎಂದರು.
‘ಕೆ–ಶೋರ್ ವಿಶ್ವ ಬ್ಯಾಂಕ್ ಪ್ರಾಯೋಜಕತ್ವದ ಯೋಜನೆ, ಇದರಡಿ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸಮುದ್ರದ ಸೇರಿ ಜಲಚರಗಳ ಸಾವಿಗೆ ಕಾರಣವಾಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ನಿಗ್ರಹವಾಗಲಿದೆ. ಜೊತೆಗೆ ಕಡಲ ಕೊರೆತ ಆಗದಂತೆ ಕಾಂಡ್ಲಾ ವನ ಬೆಳೆಸಲೂ ಈ ಹಣ ಬಳಕೆಯಾಗುತ್ತದೆ. ₹126 ಕೋಟಿಯನ್ನು ರಾಜ್ಯ ಸರ್ಕಾರ ವೆಚ್ಚ ಮಾಡಬೇಕಾಗಿದ್ದು, ಮಂಡಳಿಯಿಂದ ಹಂತ ಹಂತವಾಗಿ ಹಣ ಪಡೆಯಲಾಗುತ್ತದೆ. ವಿಶ್ವ ಬ್ಯಾಂಕ್ ಈ ಹಣವನ್ನು ಮಂಡಳಿಗೆ ಮರು ಪಾವತಿ ಮಾಡುತ್ತದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.