ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಕರ್ನಾಟಕ ಹಸಿರು ಜಲಜನಕ ನೀತಿ’ (ಗ್ರೀನ್ ಹೈಡ್ರೋಜನ್ ಪಾಲಿಸಿ) ಅನುಷ್ಠಾನಕ್ಕೆ ಆರಂಭದಲ್ಲೇ ತೊಡಕು ಎದುರಾಗಿದೆ. ₹2 ಲಕ್ಷ ಕೋಟಿ ಮೊತ್ತದ ಹೂಡಿಕೆ ಪ್ರಸ್ತಾಪಗಳಿರುವ ಈ ನೀತಿ ಅನುಷ್ಠಾನಕ್ಕೆ ರಾಜ್ಯ ಸರ್ಕಾರದಿಂದ ಅನುಮತಿ ದೊರೆತಿಲ್ಲ.
‘ಹಸಿರು ಜಲಜನಕ ಉತ್ಪಾದನೆಗೆ ಅಪಾರ ಪ್ರಮಾಣದ ಹೂಡಿಕೆ ಮತ್ತು ಮೂಲಸೌಕರ್ಯ ನಿರ್ಮಾಣ ಆಗಬೇಕಿದೆ. ಆದರೆ ಹೂಡಿಕೆ ಗಾತ್ರಕ್ಕೆ ಹೋಲಿಸಿದರೆ, ಅದು ಸೃಷ್ಟಿಸುವ ಉದ್ಯೋಗಗಳ ಸಂಖ್ಯೆ ತೀರಾ ಕಡಿಮೆ ಇದೆ. ಜತೆಗೆ ರಾಜ್ಯಕ್ಕೆ ದೊರೆಯುವ ಆದಾಯದ ಪ್ರಮಾಣವೂ ಕಡಿಮೆ’ ಎಂಬುದು ರಾಜ್ಯ ಸರ್ಕಾರದ ಉನ್ನತ ಮೂಲಗಳ ಅಭಿಪ್ರಾಯ.
‘ಈ ಕ್ಷೇತ್ರದಲ್ಲಿ ₹100 ಕೋಟಿ ಹೂಡಿಕೆ ಆದರೆ, ಅದರಿಂದ ಸೃಷ್ಟಿಯಾಗುವ ಉದ್ಯೋಗಗಳ ಸಂಖ್ಯೆ 15 ರಿಂದ 20 ಮಾತ್ರ. ಆದರೆ ಈಗ ಇರುವ ಪ್ರಸ್ತಾವಗಳನ್ನು ಪರಿಗಣಿಸಿದರೆ, ರಾಜ್ಯ ಸರ್ಕಾರ ₹20,000 ಕೋಟಿ ವೆಚ್ಚ ಮಾಡಬೇಕಾಗುತ್ತದೆ. ಆದರೆ ಅದರಿಂದ ರಾಜ್ಯಕ್ಕೆ, ರಾಜ್ಯದ ಜನತೆಗೆ ಹೆಚ್ಚಿನ ಲಾಭವಿಲ್ಲ’ ಎಂದು ಮೂಲಗಳು ವಿವರಿಸಿವೆ.
ಈ ಬಗ್ಗೆ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ‘ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯ ಅನುಪಾತವನ್ನು ಪರಿಶೀಲಿಸಲಾಗುತ್ತಿದೆ. ಉದ್ಯೋಗ ಸೃಷ್ಟಿಯ ಪ್ರಮಾಣ ಕಡಿಮೆ ಇದೆ. ಹಸಿರು ಜಲಜನಕ ರಫ್ತಿಗೆ ಉತ್ತಮ ಅವಕಾಶಗಳಿವೆ. ಆದರೆ ಇದಕ್ಕಾಗಿ ಮಧ್ಯ–ಉತ್ತರ ಕರ್ನಾಟಕದಿಂದ ಕರಾವಳಿ ಪ್ರದೇಶದವರೆಗೆ ವಿದ್ಯುತ್ ಜಾಲ ಮತ್ತಿತರ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿಬೇಕಿದೆ’ ಎಂದರು.
ಕಳೆದ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಮುಂದೂಡಿಕೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.