ಬೆಂಗಳೂರು: ಓಲಾ, ಉಬರ್ ಮತ್ತು ರ‍್ಯಾಪಿಡೊ ಸೇವೆಯನ್ನು ಜೂನ್ 15ರವರೆಗೆ ಮುಂದುವರಿಸಲು ಹೈಕೋರ್ಟ್ ಅನುಮತಿ ನೀಡಿದೆ.
‘ಬೈಕ್ ಟ್ಯಾಕ್ಸಿ ಸೇವೆಯನ್ನು ರಾಜ್ಯದಲ್ಲಿ ಮುಂದುವರೆಸಲು ನಿರ್ದೇಶಿಸಬೇಕು’ ಎಂದು ಕೋರಿ ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್’, ‘ರೊಪ್ಪೆನ್ ಟ್ರಾನ್ಸ್‌ಪೋರ್ಟೇಶನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (ರ‍್ಯಾಪಿಡೊ)’ ಮತ್ತು ‘ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (ಓಲಾ)’ ಕಂಪನಿಗಳು ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ಬಿ.ಎಂ.ಶ್ಯಾಂಪ್ರಸಾದ್ ಅವರಿದ್ದ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲರಾದ ಶ್ರೀನಿವಾಸ ರಾಘವನ್ ಮತ್ತು ಅರುಣ್ ಕುಮಾರ್, ‘ಕರ್ನಾಟಕದಲ್ಲಿ ಆರು ಲಕ್ಷಕ್ಕೂ ಹೆಚ್ಚು ಜನರು, ಬೈಕ್ ಟ್ಯಾಕ್ಸಿ ಸೇವೆ ಒದಗಿಸುವ ಮೂಲಕ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ. ಏಕಾಏಕಿ ಬೈಕ್ ಟ್ಯಾಕ್ಸಿಗಳ ಸೇವೆಯನ್ನು ಸ್ಥಗಿತಗೊಳಿಸಿದರೆ ಅವರ ದೈನಂದಿನ ಜೀವನ ನಿರ್ವಹಣೆ ಕಷ್ಟವಾಗಲಿದೆ. ಈಗಾಗಲೇ, ದೇಶದಾದ್ಯಂತ 19 ರಾಜ್ಯ ಸರ್ಕಾರಗಳು ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗೆ ನಿಯಮಗಳನ್ನು ರೂಪಿಸಿವೆ. ಆದರೆ, ರಾಜ್ಯದಲ್ಲಿ ಈವರೆಗೂ ಯಾವುದೇ ನಿಯಮಗಳನ್ನು ರೂಪಿಸಿಲ್ಲ. ಹೀಗಾಗಿ, ಹೈಕೋರ್ಟ್ ಈ ಹಿಂದೆ ಸೇವೆ ನಿರ್ಬಂಧಿಸಿ ಆದೇಶಿಸಿರುವ ಕಾಲಾವಕಾಶವನ್ನು ವಿಸ್ತರಿಸಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಬೈಕ್ ಟ್ಯಾಕ್ಸಿಗಳ ಸೇವೆಯನ್ನು ಜೂನ್ 15ರವರೆಗೂ ವಿಸ್ತರಿಸಿ ಆದೇಶಿಸಿತು. ಅರ್ಜಿದಾರರಾದ ರ‍್ಯಾಪಿಡೊ ಪರ ಹೈಕೋರ್ಟ್ ವಕೀಲರುಗಳಾದ ಎ.ವಿ.ನಿಶಾಂತ್, ಓಲಾ ಪರ ಕೆ.ಎನ್.ಚೇತನಾ ಮತ್ತು ಉಬರ್ ಪರ ಪಿ.ಎನ್.ಮನಮೋಹನ್ ವಕಾಲತ್ತು ವಹಿಸಿದ್ದಾರೆ.
‘ಮೋಟಾರು ವಾಹನ ಕಾಯ್ದೆ–1988ರ ಕಲಂ 93ರ ಅನುಸಾರ ರಾಜ್ಯ ಸರ್ಕಾರ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ತನಕ ಸಂಬಂಧಿತ ಸಂಸ್ಥೆಗಳಾದ ಓಲಾ, ಉಬರ್ ಮತ್ತು ರ‍್ಯಾಪಿಡೊಗಳು ತಮ್ಮ ಬೈಕ್ ಟ್ಯಾಕ್ಸಿ ಸೇವೆಯನ್ನು ಆರು ವಾರಗಳ ಒಳಗಾಗಿ ನಿರ್ಬಂಧಿಸಬೇಕು’ ಎಂದು ಇದೇ ನ್ಯಾಯಪೀಠ ಈ ಹಿಂದಿನ ವಿಚಾರಣೆ ವೇಳೆ ಆದೇಶಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.