ADVERTISEMENT

Covid-19 Karnataka Update: ದೃಢ ಪ್ರಮಾಣ ಶೇ 7.77; 146 ಓಮೈಕ್ರಾನ್‌ ಪ್ರಕರಣ

11,698 ಪ್ರಕರಣಗಳು ಪತ್ತೆ; 9 ಕೋಟಿ ದಾಟಿದ ಲಸಿಕೆ ವಿತರಣೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 3:56 IST
Last Updated 11 ಜನವರಿ 2022, 3:56 IST
   

ಬೆಂಗಳೂರು: ರಾಜ್ಯದಲ್ಲಿ ಸೋಮವಾರ ಕೋವಿಡ್‌ ಸೋಂಕು ದೃಢ ಪ್ರಮಾಣಶೇ 7.77ಕ್ಕೆ ಏರಿಕೆಯಾಗಿದೆ.

ಆದರೆ, ಸೋಂಕು ಪ್ರಕರಣಗಳು ಕೊಂಚ ಇಳಿಕೆಯಾಗಿವೆ. ಒಟ್ಟು 11,698 ಪ್ರಕರಣಗಳು ಪತ್ತೆಯಾಗಿದ್ದು, ಬೆಂಗಳೂರಿನಲ್ಲೇ ಅತಿ ಹೆಚ್ಚಿನ 9,221 ಪ್ರಕರಣಗಳು ದೃಢಪಟ್ಟಿವೆ. ರಾಜ್ಯದಲ್ಲಿ ಭಾನುವಾರ 12 ಸಾವಿರ ಮಂದಿ ಕೋವಿಡ್‌ ಪೀಡಿತರಾಗಿರುವುದು ದೃಢಪಟ್ಟಿತ್ತು.

ಹಾವೇರಿ ಹೊರತುಪಡಿಸಿದರೆ ಉಳಿದ ಎಲ್ಲ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. 10 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಮೂರಂಕಿ, 13 ಜಿಲ್ಲೆಗಳಲ್ಲಿ ಎರಡಂಕಿಯಲ್ಲಿದೆ. ಮೈಸೂರಿನಲ್ಲಿ 309, ಮಂಡ್ಯದಲ್ಲಿ 306, ಉಡುಪಿಯಲ್ಲಿ 219 ಪ್ರಕರಣಗಳು ವರದಿಯಾಗಿವೆ. ಇದುವರೆಗೆ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 30.63 ಲಕ್ಷ ದಾಟಿದೆ.

ADVERTISEMENT

ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದ್ದು, 60,148ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲೇ 48,960 ಸಕ್ರಿಯ ಪ್ರಕರಣಗಳಿವೆ. ದಕ್ಷಿಣ ಕನ್ನಡ (1,383) ಮತ್ತು ಮೈಸೂರಿನಲ್ಲಿ (1,338) ಒಂದು ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ.

ಕೋವಿಡ್ ಪೀಡಿತರಲ್ಲಿ ಬೆಂಗಳೂರಿನಲ್ಲಿ ಇಬ್ಬರು ಹಾಗೂ ಮೈಸೂರು ಮತ್ತು ರಾಮನಗರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಮರಣ ಪ್ರಮಾಣ ದರವು ಶೇ 0.03 ರಷ್ಟು ವರದಿಯಾಗಿದೆ. ಈವರೆಗೆ ಕೋವಿಡ್‌ಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 38,374ಕ್ಕೆ ಏರಿಕೆಯಾಗಿದೆ.

ಸೋಂಕಿತರಲ್ಲಿ 1,148 ಮಂದಿ ಚೇತರಿಸಿಕೊಂಡಿದ್ದಾರೆ. ಗುಣಮುಖರಾದವರ ಒಟ್ಟು ಸಂಖ್ಯೆ 29.65 ಲಕ್ಷ ದಾಟಿದೆ. ಒಂದು ದಿನದ ಅವಧಿಯಲ್ಲಿ 1.50 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ.

146 ಓಮೈಕ್ರಾನ್‌ ಪ್ರಕರಣಗಳು
ಬೆಂಗಳೂರಿನಲ್ಲಿ ಒಂದೇ ದಿನ 146 ಹೊಸ ಓಮೈಕ್ರಾನ್‌ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 479ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಟ್ವೀಟ್‌ ಮಾಡಿದ್ದಾರೆ.

9 ಕೋಟಿ ದಾಟಿದ ಲಸಿಕೆ ವಿತರಣೆ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌–19 ವಿರುದ್ಧದ ಲಸಿಕೆ ವಿತರಣೆ ಸೋಮವಾರ ಒಂಬತ್ತು ಕೋಟಿ ದಾಟಿದೆ.

‘ಈ ಕಾರ್ಯದಲ್ಲಿ ಪಾಲ್ಗೊಂಡಿರುವ ಎಲ್ಲ ಆರೋಗ್ಯ ಕಾರ್ಯಕರ್ತರು ಮತ್ತು ಜಿಲ್ಲಾಡಳಿತಗಳಿಗೆ ಅಭಿನಂದನೆಗಳು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಟ್ವೀಟ್‌ ಮಾಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 1.58 ಕೋಟಿಗೂ ಹೆಚ್ಚು ಹಾಗೂ ಬೆಳಗಾವಿ ಜಿಲ್ಲೆಯಲ್ಲಿ 67 ಲಕ್ಷಕ್ಕೂ ಹೆಚ್ಚು ಲಸಿಕೆ ವಿತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.