ಬೆಂಗಳೂರು: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ (ಜಾತಿ ಜನಗಣತಿ) ವರದಿ ಜಾರಿಗೆ ಕೆಲವು ಸಚಿವರ ಅಪಸ್ವರ, ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ತೀವ್ರ ವಿರೋಧಕ್ಕೆ ಮಣಿದಿರುವ ಕಾಂಗ್ರೆಸ್ ಹೈಕಮಾಂಡ್, ವರದಿಗೆ ಸರ್ಕಾರ ಒಪ್ಪಿಗೆ ನೀಡಿ, ಗೊಂದಲಗಳ ನಿವಾರಣೆಗೆ ಮರು ಗಣತಿ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸೂಚನೆ ನೀಡಿದೆ.
2015ರಲ್ಲಿ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಜಾತಿ ಜನಗಣತಿ ವರದಿಯ ಕುರಿತು ಚರ್ಚಿಸಲು ಇದೇ 12ರಂದು ವಿಶೇಷ ಸಚಿವ ಸಂಪುಟ ಸಭೆ ನಿಗದಿಯಾಗಿದೆ. ಈ ಮಧ್ಯೆ, ಉಭಯ ನಾಯಕರನ್ನು ದೆಹಲಿಗೆ ಕರೆಸಿಕೊಂಡು ಚರ್ಚೆ ನಡೆಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ‘ಜಾತಿ ಜನಗಣತಿ ವಿಚಾರದಲ್ಲಿ ಯಾರ ಅಪಸ್ವರವೂ ಇಲ್ಲದಂತೆ ನೋಡಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕೂಡ ಇದ್ದರು.
‘ಕರ್ನಾಟಕದಲ್ಲಿ ಸಮೀಕ್ಷೆಯು ವೈಜ್ಞಾನಿಕ, ತರ್ಕಬದ್ಧ ಹಾಗೂ ವ್ಯವಸ್ಥಿತವಾಗಿ ನಡೆದಿದ್ದು, ವರದಿಯನ್ನು ಮೊದಲು ಅಂಗೀಕರಿಸಿ. ಸಂದೇಹ, ಅಪಸ್ವರಗಳಿಗೆ ಅವಕಾಶವೇ ಇಲ್ಲದಂತೆ ಸಮುದಾಯಗಳ ಬೇಡಿಕೆಗೆ ಅನುಸಾರ ಮರುಸಮೀಕ್ಷೆ ನಡೆಸಿ’ ಎಂದು ವರಿಷ್ಠರು, ಸಿದ್ದರಾಮಯ್ಯ ಅವರಿಗೆ ಸೂಚಿಸಿದರು ಎಂದು ಗೊತ್ತಾಗಿದೆ.
ಸಭೆಯ ಬಳಿಕ ಮಾತನಾಡಿದ ಕೆ.ಸಿ. ವೇಣುಗೋಪಾಲ್, ‘ವಿಶೇಷ ಸಂಪುಟ ಸಭೆಯಲ್ಲಿ ಜಾತಿ ಸಮೀಕ್ಷೆ ಬಗ್ಗೆ ಸರ್ಕಾರ ಚರ್ಚಿಸಲಿದೆ. 10 ವರ್ಷಗಳ ಹಿಂದೆ ನಡೆದ ವರದಿಗೆ ಸಭೆ ತಾತ್ವಿಕವಾಗಿ ಒಪ್ಪಿಗೆ ನೀಡಲಿದೆ. ಆದರೆ, ಜಾತಿ ಜನಗಣತಿಯ ಬಗ್ಗೆ ಕೆಲವು ಜಾತಿಯ ಜನರಿಗೆ ಅನುಮಾನವಿದೆ. ನಿಗದಿತ ಸಮಯ ವಿಧಿಸಿ ಮತ್ತೊಮ್ಮೆ ಗಣತಿ ನಡೆಸುವಂತೆ ಸರ್ಕಾರಕ್ಕೆ ಸಲಹೆ ನೀಡಲಾಗಿದೆ’ ಎಂದರು.
‘ಜಾತಿಗಣತಿ ವರದಿ ಬಗ್ಗೆ ಅಪಸ್ವರ ಎದ್ದಿರುವ ಕಾರಣ ಈಗಾಗಲೇ ಸಲ್ಲಿಕೆಯಾಗಿರುವ ಜಾತಿಗಣತಿ ವರದಿಗೆ ತಾತ್ವಿಕ ಒಪ್ಪಿಗೆ ನೀಡಿ, ಸಮೀಕ್ಷೆಗೆ ಮರುಗಣತಿ ನಡೆಸಲು ವರಿಷ್ಠರ ಜೊತೆಗಿನ ಸಭೆಯಲ್ಲಿ ನಿರ್ಧರಿಸಲಾಗಿದೆ‘ ಎಂದು ಸಿದ್ದರಾಮಯ್ಯ ತಿಳಿಸಿದರು.
‘ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಲಾಗಿದೆ. ವಿವಿಧ ಜಾತಿ, ಸಮುದಾಯಗಳ ಮುಖಂಡರು, ಸಂಘ–ಸಂಸ್ಥೆಗಳು, ಮಠಾಧೀಶರು, ಸಚಿವರು ಜಾತಿಗಣತಿ ವರದಿ ಬಗ್ಗೆ ಅಪಸ್ವರ ಎತ್ತಿರುವ ಬಗ್ಗೆಯೂ ವಿಚಾರ ವಿನಿಮಯ ನಡೆಸಲಾಗಿದೆ. ಈಗಾಗಲೇ ಸಲ್ಲಿಕೆಯಾಗಿರುವ ಜಾತಿ ಗಣತಿಯ ದತ್ತಾಂಶ 10 ವರ್ಷ ಹಳೆಯದಾಗಿರುವುದರಿಂದ ಮರುಗಣತಿ ಮಾಡಲು ತೀರ್ಮಾನಿಸಲಾಗಿದೆ. ಸದ್ಯ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಜನಗಣತಿಯಂತೆ, ಹೊತಾಗಿ ಇತರೆ ಜಾತಿಗಳ ಸಮೀಕ್ಷೆಯನ್ನು 90 ದಿನದೊಳಗೆ ಪೂರ್ಣಗೊಳಿಸಿ ವರದಿ ನೀಡಬೇಕಾಗಿದೆ’ ಎಂದರು.
ಡಿ.ಕೆ. ಶಿವಕುಮಾರ್ ಮಾತನಾಡಿ, ‘ಮುಖ್ಯಮಂತ್ರಿ ಮತ್ತು ನನ್ನನ್ನು ಕರೆಸಿ ಪಕ್ಷ ಸಂಘಟನೆ ವಿಚಾರವಾಗಿ, ರಾಜ್ಯ ರಾಜಕಾರಣ ಹಾಗೂ ಇತ್ತೀಚಿನ ಕಾಲ್ತುಳಿತ ಪ್ರಕರಣದ ಬಗ್ಗೆ ವರಿಷ್ಠರು ಚರ್ಚೆ ನಡೆಸಿದರು. ಈಗಾಗಲೇ ನಡೆದಿರುವ ಜಾತಿ ಗಣತಿಗೆ ವಿರೋಧ ವ್ಯಕ್ತವಾಗಿರುವುದರಿಂದ ವರಿಷ್ಠರ ನಿರ್ದೇಶನದಂತೆ, ಮತ್ತೊಮ್ಮೆ ಮನೆ ಮನೆ ಸಮೀಕ್ಷೆ ನಡೆಸಲಾಗುವುದು. ಅಲ್ಲದೆ, ಆನ್‌ಲೈನ್ ಮೂಲಕವೂ ಮಾಹಿತಿ ನೀಡಲು ಅವಕಾಶ ನೀಡಲಾಗುವುದು. ಈ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗುವುದು’ ಎಂದು ಹೇಳಿದರು.
‘ಈಗಾಗಲೇ ನಡೆದಿರುವ ಜಾತಿ ಗಣತಿ ವಿಚಾರದಲ್ಲಿ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಿದ್ದೆವು. ಈ ಜಾತಿ ಗಣತಿ ವಿಚಾರವಾಗಿ ವರಿಷ್ಠರ ಜತೆ ಪಕ್ಷದ ಸಂಸದರು, ಶಾಸಕರು ಮತ್ತು ಕೆಲವು ಸಂಘ–ಸಂಸ್ಥೆಗಳ ಪ್ರಮುಖರು ಚರ್ಚಿಸಿದ್ದಾರೆ. ಕೆಲವು ಸಮುದಾಯ ಹಾಗೂ ಸಂಘಟನೆಗಳಿಂದ ಅಪಸ್ವರ ಬಂದಿರುವ ಕಾರಣ, ಎಲ್ಲರಿಗೂ ನ್ಯಾಯಬದ್ಧವಾಗಿ ಅವಕಾಶ ಕಲ್ಪಿಸಿಕೊಡಬೇಕೆಂದು ವರಿಷ್ಠರು ನಿರ್ದೇಶನ ನೀಡಿದ್ದಾರೆ. ಹೊಸತಾಗಿ ನಡೆಸುವ ಜಾತಿ ಗಣತಿಯಲ್ಲಿ ಎಲ್ಲರೂ ಒಳಗೊಳ್ಳಬೇಕು, ಯಾರನ್ನೂ ಬಿಡಬಾರದೆಂದು ತೀರ್ಮಾನಿಸಲಾಗಿದೆ. ಯಾರ ಅಪಸ್ವರವೂ ಇಲ್ಲದಂತೆ ನೋಡಿಕೊಳ್ಳಲು ಮುಖ್ಯಮಂತ್ರಿಗೆ ವರಿಷ್ಠರು ನಿರ್ದೇಶನ ನೀಡಿದ್ದಾರೆ’ ಎಂದರು.
‘ಜಾತಿ ಗಣತಿಯಲ್ಲಿರುವ ಅಂಕಿಅಂಶಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸಮುದಾಯಗಳಿಗೆ ಸ್ಪಷ್ಟನೆ ನೀಡಲು ಅವಕಾಶ ಮಾಡಿಕೊಡಲು ತೀರ್ಮಾನಿಸಲಾಗಿದೆ. ಸಾರ್ವಜನಿಕರು ನ್ಯಾಯಬದ್ಧವಾಗಿ ಯಾವ ಸಮಾಜಕ್ಕೆ ಸೇರಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಎಲ್ಲರಿಗೂ ನ್ಯಾಯ ಒದಗಿಸಿಕೊಡಲಾಗುವುದು. ಇದರಲ್ಲಿ ಯಾವುದೇ ಆತಂಕ ಬೇಡ. ನಮ್ಮ ರಾಜ್ಯದವರು ಎಲ್ಲೇ ಇದ್ದರೂ ಈ ಬಗ್ಗೆ ಆನ್‌ಲೈನ್ ಮೂಲಕ ಮಾಹಿತಿ ನೀಡಲು ಅವಕಾಶ ಕಲ್ಪಿಸಲಾಗುವುದು. ಸಮಾಜದ ಮುಖಂಡರು ಹಾಗೂ ಮಠಾಧೀಶರು ಇದಕ್ಕೆ ಸಹಕರಿಸಬೇಕು’ ಎಂದೂ ಶಿವಕುಮಾರ್ ಮನವಿ ಮಾಡಿದರು.
ಕಾಲ್ತುಳಿತ: ಕಿವಿಮಾತು ಹೇಳಿದ ವರಿಷ್ಠರು
ಕಾಲ್ತುಳಿತದ ಘಟನೆ ಬಗ್ಗೆ ವಿವರಣೆ ಪಡೆದ ಕಾಂಗ್ರೆಸ್ ಹೈಕಮಾಂಡ್ ಇಂತಹ ಘಟನೆಗಳು ಮರುಕಳಿಸಿದಂತೆ ಎಚ್ಚರ ವಹಿಸಬೇಕಿತ್ತು ಎಂದು ಕಿವಿಮಾತು ಹೇಳಿದೆ. ‘ದೆಹಲಿಯಲ್ಲಿ ನಡೆದ ಸಭೆಯಲ್ಲಿ ‘ಇಂತಹ ದುರ್ಘಟನೆಯಿಂದ ಸರ್ಕಾರದ ವರ್ಚಸ್ಸಿಗೆ ಆಗಿರುವ ಧಕ್ಕೆಯನ್ನು ಹೋಗಲಾಡಿಸಲು ಏನು ಕ್ರಮ ವಹಿಸಿದ್ದೀರಿ’ ಎಂದು ವರಿಷ್ಠರು ರಾಜ್ಯ ನಾಯಕರನ್ನು ಪ್ರಶ್ನಿಸಿದರು. ‘ಸರ್ಕಾರದ ತಪ್ಪೇನೂ ಇಲ್ಲ ಎಂದು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ರಾಜ್ಯದ ಹಿರಿಯ ನಾಯಕರು ಮಾಡುತ್ತಿದ್ದಾರೆ’ ಎಂದು ನಾಯಕರು ಉತ್ತರಿಸಿದರು’ ಎಂದು ಗೊತ್ತಾಗಿದೆ.
ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ ‘ಕಾಲ್ತುಳಿತ ಘಟನೆಯ ಬಳಿಕ ಸರ್ಕಾರ ತೆಗೆದುಕೊಂಡ ಕ್ರಮಗಳು ಸಮರ್ಪಕವಾಗಿವೆ ಎಂದು ವರಿಷ್ಠರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ’ ಎಂದು ತಿಳಿಸಿದರು. ಕಾಲ್ತುಳಿತ ಘಟನೆಯ ತನಿಖೆಗೆ ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ಮ್ಯಾಜಿಸ್ಟ್ರಿಯಲ್ ತನಿಖೆ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ನೇತೃತ್ವದ ಏಕಸದಸ್ಯ ಆಯೋಗ ರಚಿಸಿ ನ್ಯಾಯಾಂಗ ತನಿಖೆ ಐವರು ಪೊಲೀಸ್ ಅಧಿಕಾರಿಗಳ ಅಮಾನತು ಗುಪ್ತಚರ ಇಲಾಖೆಯ ಮುಖ್ಯಸ್ಥರ ಬದಲಾವಣೆ ರಾಜಕೀಯ ಕಾರ್ಯದರ್ಶಿಯ ಬದಲಾವಣೆಯಂತಹ ಕ್ರಮಗಳ ಬಗ್ಗೆ ವರಿಷ್ಠರಿಗೆ ವಿವರಿಸಿದ್ದೇವೆ. ಏಕಸದಸ್ಯ ಆಯೋಗದ ತನಿಖಾ ವರದಿಯನ್ನು ಆಧರಿಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದೂ ಅವರು ವಿವರಿಸಿದರು. ‘ಕಾಲ್ತುಳಿತ ಘಟನೆಯ ಬಗ್ಗೆ ವರಿಷ್ಠರಿಗೆ ಸಂಪೂರ್ಣ ಮಾಹಿತಿ ನೀಡಿ ಸತ್ಯಾಸತ್ಯತೆ ವಿವರಿಸಿದ್ದೇವೆ’ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು. ಕೆ.ಸಿ. ವೇಣುಗೋಪಾಲ್ ಪ್ರತಿಕ್ರಿಯಿಸಿ ‘ಪ್ರತಿಯೊಬ್ಬ ಮಾನದ ಜೀವದ ಬಗ್ಗೆಯೂ ಕಾಳಜಿ ವಹಿಸುತ್ತೇವೆ. ಒಂದು ದುರದೃಷ್ಟಕರ ಘಟನೆ ಸಂಭವಿಸಿದೆ. ಏನಾಯಿತು ಎಂಬುದನ್ನು ನಿಖರವಾಗಿ ಕಂಡುಹಿಡಿಯಲು ಕರ್ನಾಟಕ ಸರ್ಕಾರ ಈಗಾಗಲೇ ನ್ಯಾಯಾಂಗ ತನಿಖೆಗೆ ಆದೇಶಿಸಿದೆ’ ಎಂದರು. ‘ಈ ವಿಷಯದಲ್ಲಿ ಸ್ಪಷ್ಟವಾದ ಜನಪರ ಮನೋಭಾವ ಇರಬೇಕು ಎನ್ನುವುದು ಪಕ್ಷದ ನಿಲುವು’ ಎಂದೂ ಅವರು ಒತ್ತಿ ಹೇಳಿದರು.
ಪರಿಷತ್‌ಗೆ ನಾಮನಿರ್ದೇಶನ: ಹೈಕಮಾಂಡ್ ಮರುಪರಿಶೀಲನೆ
ವಿಧಾನಪರಿಷತ್ತಿನಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳ ನಾಮನಿರ್ದೇಶನಕ್ಕೆ ಈಗಾಗಲೇ ಅನುಮೋದಿಸಿರುವ ಪಟ್ಟಿಯನ್ನು ಮರು ಪರಿಶೀಲಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ. ‘ಪರಿಷ್ಕೃತ ಪಟ್ಟಿ ಕಳುಹಿಸುವುದಾಗಿ ವರಿಷ್ಠರು ಮುಖ್ಯಮಂತ್ರಿಗೆ ತಿಳಿಸಿದ್ದಾರೆ’ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಈ ನಾಲ್ಕು ಸ್ಥಾನಗಳಿಗೆ ದಿನೇಶ್ ಅಮಿನ್ ಮಟ್ಟು ರಮೇಶ್ ಬಾಬು ಡಿ.ಜಿ. ಸಾಗರ್ ಮತ್ತು ಆರತಿಕೃಷ್ಣ ಅವರನ್ನು ಶಿಫಾರಸು ಮಾಡಲಾಗಿತ್ತು. ಆದರೆ ಈ ನಾಲ್ವರ ಪಟ್ಟಿಗೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯ ಕಾಂಗ್ರೆಸ್‌ನ ಕೆಲವು ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು. ‘ಪರಿಷತ್‌ಗೆ ನಾಮನಿರ್ದೇಶನ ಕುರಿತಂತೆ ವರಿಷ್ಠರ ಜೊತೆ ಚರ್ಚೆ ಮಾಡಿದ್ದೇವೆ. ಈ ವಿಚಾರವಾಗಿ ಹೈಕಮಾಂಡ್ ಪರಿಶೀಲಿಸಿ ಮುಖ್ಯಮಂತ್ರಿಗೆ ಮಾಹಿತಿ ನೀಡಲಿದೆ’ ಎಂದು ಶಿವಕುಮಾರ್ ತಿಳಿಸಿದರು. ‘ಸಚಿವ ಸಂಪುಟ ಪುನರ್‌ರಚನೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ’ ಎಂದು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.