ADVERTISEMENT

‘ಕೃಷ್ಣ’ ನಿವಾಸದಲ್ಲಿ ಅತೃಪ್ತರು–ಬಿಜೆಪಿ ನಾಯಕರ ಮುಖಾಮುಖಿ:ಮತ್ತೆ ಭಿನ್ನರ ಆಟ ಶುರು

​ಪ್ರಜಾವಾಣಿ ವಾರ್ತೆ
Published 26 ಮೇ 2019, 19:54 IST
Last Updated 26 ಮೇ 2019, 19:54 IST
ಕಾಂಗ್ರೆಸ್‌ ಶಾಸಕ ಡಾ.ಕೆ.ಸುಧಾಕರ್‌, ಬಿಜೆಪಿ ನಾಯಕ ಆರ್‌ ಅಶೋಕ್‌ ಹಾಗೂ ಅತೃಪ್ತರ ಬಣದ ನಾಯಕ ರಮೇಶ ಜಾರಕಿಹೊಳಿ
ಕಾಂಗ್ರೆಸ್‌ ಶಾಸಕ ಡಾ.ಕೆ.ಸುಧಾಕರ್‌, ಬಿಜೆಪಿ ನಾಯಕ ಆರ್‌ ಅಶೋಕ್‌ ಹಾಗೂ ಅತೃಪ್ತರ ಬಣದ ನಾಯಕ ರಮೇಶ ಜಾರಕಿಹೊಳಿ   

ಬೆಂಗಳೂರು: ಕಾಂಗ್ರೆಸ್‌–ಜೆಡಿಎಸ್‌ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ರೆಸಾರ್ಟ್‌ಗೆ ಸ್ಥಳಾಂತರಿಸಲಾಗುತ್ತಿದೆ ಎಂಬ ವದಂತಿಯ ಮಧ್ಯೆ, ಬಿಜೆಪಿ ಹಿರಿಯ ನಾಯಕರನ್ನು ಅತೃಪ್ತರ ಬಣದ ನಾಯಕ ರಮೇಶ ಜಾರಕಿಹೊಳಿ, ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌ ಭೇಟಿ ಮಾಡಿದರು. ಇದು ಮೈತ್ರಿ ಪಕ್ಷಗಳಲ್ಲಿ ತಲ್ಲಣ ಉಂಟು ಮಾಡಿದೆ.

ಈ ಬೆಳವಣಿಯ ಬೆನ್ನಲ್ಲೇ ಭಾನುವಾರ ರಾತ್ರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ‘ಕಾವೇರಿ’ ನಿವಾಸಕ್ಕೆ ತೆರಳಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದಾರೆ. ಅತೃಪ್ತರನ್ನು ಸಮಾಧಾನಪಡಿಸುವ ನಿಟ್ಟಿನಲ್ಲಿ ಸಂಪುಟ ಪುನರ್ ರಚನೆ ಬಗ್ಗೆಯೂ ಇಬ್ಬರೂ ನಾಯಕರು ಮಾತುಕತೆ ನಡೆಸಿದರು ಎನ್ನಲಾಗಿದೆ.

ಕಾಂಗ್ರೆಸ್‌–ಜೆಡಿಎಸ್‌ ಶಾಸಕರನ್ನು ತಮ್ಮತ್ತ ಸೆಳೆಯಲು ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ ಸದ್ದಿಲ್ಲದೆ ನಡೆಯುತ್ತಿರುವಂತೆಯೇ, ಆ ಪಕ್ಷದ ಹಿರಿಯ ‌ನಾಯಕ ಎಸ್‌.ಎಂ.ಕೃಷ್ಣ ಜೊತೆ ಸುಧಾಕರ್‌, ರಮೇಶ ಬೆಳಿಗ್ಗೆ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ. ಈ ವೇಳೆ ಬಿಜೆಪಿ ಶಾಸಕ ಆರ್‌.ಅಶೋಕ ಕೂಡಾ ಇದ್ದರು.

ADVERTISEMENT

ಶೀಘ್ರದಲ್ಲೇ ಕಾಂಗ್ರೆಸ್‌ ತ್ಯಜಿಸುವುದಾಗಿ ಹೇಳಿರುವ ರಮೇಶ, ತಮ್ಮೊಂದಿಗೆ ಮತ್ತಷ್ಟು ಅತೃಪ್ತ ಶಾಸಕರನ್ನು ಸೆಳೆಯಲು ಹಲವು ದಿನಗಳಿಂದ ಕಾರ್ಯಪ್ರವೃತ್ತರಾಗಿದ್ದಾರೆ. ದೋಸ್ತಿ ಸರ್ಕಾರ ಪತನಗೊಳಿಸುವ ಕಸರತ್ತಿನ ಭಾಗವಾಗಿಯೇ ಬಿಜೆಪಿ ನಾಯಕರ ಜೊತೆ ರಮೇಶ ಚರ್ಚೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ಈ ನಡುವೆ, ರಮೇಶ ಜೊತೆ ನಿಕಟ ಸಂಪರ್ಕದಲ್ಲಿರುವ ಕಾಂಗ್ರೆಸ್‌ನ ಕೆಲವು ಅತೃಪ್ತ ಶಾಸಕರು ಗೋವಾದ ರೆಸಾರ್ಟ್‌ಗೆ ವಾಸ್ತವ್ಯ ಬದಲಿಸುವ ಉದ್ದೇಶದಿಂದ ಕೊಠಡಿಗಳನ್ನು ಕಾದಿರಿಸುತ್ತಿದ್ದಾರೆ ಎನ್ನಲಾಗಿದೆ. ‘ನಾವು ಯಾವುದೇ ರೆಸಾರ್ಟ್‌ಗೆ ಹೋಗುವುದಿಲ್ಲ’ ಎಂದು ಶಾಸಕರಾದ ಮಹೇಶ ಕುಮಠಳ್ಳಿ (ಅಥಣಿ) ಮತ್ತು ಭೀಮಾ ನಾಯ್ಕ (ಹಗರಿಬೊಮ್ಮನಹಳ್ಳಿ) ಸ್ಪಷ್ಟನೆ ನೀಡಿದ್ದಾರೆ.

ಲಿಂಗಾಯತರನ್ನು ಕಡೆಗಣಿಸಿದ್ದೇ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಲು ಕಾರಣ ಎಂದು ಹಿರೇಕೆರೂರಿನ ಕಾಂಗ್ರೆಸ್‌ ಶಾಸಕ ಬಿ.ಸಿ.ಪಾಟೀಲ ಹೇಳಿಕೆ ನೀಡಿದ ಮರುದಿನವೇ ಕಾಂಗ್ರೆಸ್‌ ಗುಂಪಿನಲ್ಲಿ ಭಿನ್ನಮತೀಯ ಚಟುವಟಿಕೆ ಗರಿಗೆದರಿದೆ. ಈ ಮಧ್ಯೆ ಪಕ್ಷೇತರ ಶಾಸಕರಾದ ಆರ್.ಶಂಕರ್ (ರಾಣೇಬೆನ್ನೂರು), ಎಚ್.ನಾಗೇಶ್ (ಮುಳಬಾಗಲು) ಅವರ ಮನವೊಲಿಸಿ, ಪಕ್ಷದ ಕಡೆಗೆ ಸೆಳೆಯಲು ಸಿದ್ದರಾಮಯ್ಯ ಪ್ರಯತ್ನಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸುಧಾಕರ್‌, ‘ಎಸ್.ಎಂ.ಕೃಷ್ಣ ನನ್ನ ರಾಜಕೀಯ ಗುರು. ಇದು ವೈಯಕ್ತಿಕ ಭೇಟಿ. ನನ್ನ ಮನೆಗೆ ರಮೇಶ ಬಂದಿದ್ದರು. ಕೃಷ್ಣ ಅವರ ‌ಮನೆಗೆ ಹೋಗುತ್ತಿದ್ದೇನೆ ಎಂದಾಗ ನಾನೂ ಬರುತ್ತೇನೆ ಅಂದರು. ಹೀಗಾಗಿ ಜೊತೆಯಾಗಿ ಬಂದೆವು’ ಎಂದು ಹೇಳಿದರು.

‘ನಾವು ಭೇಟಿಯಾದ ಸಂದರ್ಭದಲ್ಲೇ ಸುಮಲತಾ, ಯಡಿಯೂರಪ್ಪ ಕೂಡಾ ಅಲ್ಲಿಗೆ ಬಂದರು. ಇದು ಅನಿರೀಕ್ಷಿತ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ’ ಎಂದೂ ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ ನಾಯಕರ ಜೊತೆ ಮುನಿಸಿಕೊಂಡಿರುವ ಮಹೇಶ್ ಕುಮಠಳ್ಳಿ ಕೂಡಾ ರಮೇಶ ಅವರ ಜತೆಗೆ ಮಾತುಕತೆನಡೆಸಿದ್ದಾರೆ ಎನ್ನಲಾಗಿದೆ. ಆದರೆ, ಆ ವಿಷಯವನ್ನು ನಿರಾಕರಿಸಿರುವ ಕುಮಠಳ್ಳಿ, ‘ನನಗೂ ಆಪರೇಷನ್ ಕಮಲಕ್ಕೂ ಸಂಬಂಧವಿಲ್ಲ. ನೀರಾವರಿ ವಿಚಾರದಲ್ಲಿ ಚರ್ಚಿಸಲು ಬೆಂಗಳೂರಿಗೆ ಬಂದಿದ್ದೆ. ವಾಪಸು ಹೋಗುತ್ತೇನೆ. ನಾನು ಗೋವಾಗೆ ಹೋಗುತ್ತಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ಈಗಲೇ ಏನೂ ಹೇಳಲ್ಲ: ರಮೇಶ
‘ನಾನೀಗ ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ. ಯಾವಾಗ ರಾಜೀನಾಮೆ ಕೊಡುತ್ತೇನೆ ಎಂದು ಹೇಳುವುದಕ್ಕೆ ಆಗುವುದಿಲ್ಲ’ ಎಂದು ರಮೇಶ ಜಾರಕಿಹೊಳಿ ಹೇಳಿದರು.

‘ಎಷ್ಟು ಜನ ರಾಜೀನಾಮೆ ಕೊಡ್ತೇವೆ ಎಂದು ಲೆಕ್ಕ ಹೇಳುವುದಕ್ಕೂ ಆಗುವುದಿಲ್ಲ. ನೀವು ಸ್ಟಿಂಗ್ ಆಪರೇಷನ್ (ಮಾಧ್ಯಮದವರು) ಮಾಡುವಾಗ ನಮಗೆ ಹೇಳಿ ಹೋಗುತ್ತೀರಾ. ನಾನೂ ಹಾಗೆಯೇ’ ಎಂದರು.

‘ಎಸ್‌.ಎಂ.ಕೃಷ್ಣ ಹಿರಿಯ ರಾಜಕಾರಣಿ. ಅವರು ಯಾವುದೇ ಪಕ್ಷದಲ್ಲಿದ್ದರೂ ನಮ್ಮ ನಾಯಕರು. ಆರೋಗ್ಯ ವಿಚಾರಿಸಲು ಬಂದಿದ್ದೆ. ಬೇರೆ ರಾಜಕೀಯ ವಿಚಾರ ಚರ್ಚೆ ಮಾಡಿಲ್ಲ’ ಎಂದು ಹೇಳಿದರು.

**

ನಾನೊಬ್ಬನೇ ರಾಜೀನಾಮೆ ಕೊಡುವುದಿಲ್ಲ, ನಮ್ಮದೊಂದು ತಂಡ ಇದೆ. ನಾವೆಲ್ಲರೂ ಒಟ್ಟಾಗಿ ರಾಜೀನಾಮೆ ಕೊಡುತ್ತೇವೆ.
-ರಮೇಶ ಜಾರಕಿಹೊಳಿ, ಕಾಂಗ್ರೆಸ್‌ ಅತೃಪ್ತ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.