ADVERTISEMENT

ಸಂಸತ್‌: 28ರಿಂದ ‘ಆಪರೇಷನ್ ಸಿಂಧೂರ’ ಚರ್ಚೆ

ಉಭಯ ಸದನಗಳಲ್ಲಿ 16 ಗಂಟೆಗಳ ಸಮಯ ನಿಗದಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 15:39 IST
Last Updated 23 ಜುಲೈ 2025, 15:39 IST
<div class="paragraphs"><p>ಲೋಕಸಭೆ ಅಧಿವೇಶನ</p></div>

ಲೋಕಸಭೆ ಅಧಿವೇಶನ

   

ಪ್ರಾತಿನಿಧಿಕ ಚಿತ್ರ

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ‘ಆಪರೇಷನ್ ಸಿಂಧೂರ’ ಕುರಿತು ಸಂಸತ್ತಿನಲ್ಲಿ ಮುಂದಿನ ವಾರ ವಿಶೇಷ ಚರ್ಚೆ ನಡೆಯಲಿದೆ. ಉಭಯ ಸದನಗಳಲ್ಲಿ ತಲಾ 16 ಗಂಟೆಗಳ ಚರ್ಚೆಗೆ ಅವಕಾಶ ನೀಡಲು ಸರ್ಕಾರ ಒಪ್ಪಿದೆ. 

ADVERTISEMENT

ಸೋಮವಾರ ನಡೆದ ಲೋಕಸಭೆಯ ಕಲಾಪ ವ್ಯವಹಾರಗಳ ಸಮಿತಿ ಸಭೆಯಲ್ಲಿ (ಬಿಎಸಿ) 16 ಗಂಟೆಗಳ ಚರ್ಚೆಗೆ ಸರ್ಕಾರ ಒಪ್ಪಿಕೊಂಡಿತು. ಬುಧವಾರ ನಡೆದ ರಾಜ್ಯಸಭೆಯ ಕಲಾಪ ವ್ಯವಹಾರ ಸಮಿತಿ ಸಭೆಯಲ್ಲೂ ಇದೇ ರೀತಿಯ ನಿರ್ಧಾರಕ್ಕೆ ಬರಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಕಲಾಪದಲ್ಲಿ ಹಾಜರಿದ್ದು ಈ ವಿಷಯದ ಬಗ್ಗೆ ಮಾತನಾಡಬೇಕು ಎಂದು ವಿಪಕ್ಷಗಳು ತಮ್ಮ ಬೇಡಿಕೆಯನ್ನು ಬುಧವಾರವೂ ಪುನರುಚ್ಚರಿಸಿದವು. 

ಲೋಕಸಭೆಯಲ್ಲಿ ಇದೇ 28ರಂದು ಚರ್ಚೆ ಆರಂಭವಾಗಲಿದೆ. ಮರುದಿನ ರಾಜ್ಯಸಭೆಯಲ್ಲಿ ಚರ್ಚೆ ಶುರುವಾಗಲಿದೆ.

ಪ್ರಧಾನಿ ಪ್ರತಿಕ್ರಿಯೆ ನೀಡಬೇಕೆಂಬ ವಿಪಕ್ಷಗಳ ಬೇಡಿಕೆಗೆ ಸರ್ಕಾರ ಯಾವುದೇ ಭರವಸೆ ನೀಡಿಲ್ಲ ಎಂದು ಸರ್ಕಾರದ ಮೂಲಗಳು ಸ್ಪಷ್ಟಪಡಿಸಿವೆ. ಬಿಎಸಿ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯಸಭೆಯ ಕಾಂಗ್ರೆಸ್ ಉಪ ನಾಯಕ ಪ್ರಮೋದ್ ತಿವಾರಿ, ‘ಪ್ರಧಾನಿ ಮೋದಿ ಅವರು ಚರ್ಚೆಯ ಸಮಯದಲ್ಲಿ ಹಾಜರಿರಬೇಕು ಎಂದು ನಾವು ಒತ್ತಾಯಿಸಿದ್ದೇವೆ. ಸರ್ಕಾರದಿಂದ ನಮಗೆ ಆ ಬಗ್ಗೆ ಭರವಸೆ ಸಿಕ್ಕಿದೆ’ ಎಂದರು. 

ಉಪರಾಷ್ಟ್ರಪತಿ ಹುದ್ದೆಯಿಂದ ಜಗದೀಪ್ ಧನಕರ್‌ ಕೆಳಗಿಳಿದ ನಂತರ ನಡೆದ ಮೊದಲ ಬಿಎಸಿ ಸಭೆ ಇದಾಗಿದೆ. ರಾಜೀನಾಮೆಗೂ ಮುನ್ನ ಸದನದ ಕಾರ್ಯಸೂಚಿಯನ್ನು ಅಂತಿಮಗೊಳಿಸಲು ಧನಕರ್ ಅವರು ಎರಡು ಸಲ ಸಮಿತಿಯ ಸಭೆ ಕರೆದಿದ್ದರು. ಸೋಮವಾರ ಸಂಜೆ ನಡೆದ ಸಮಿತಿ ಸಭೆಗೆ ಕೇಂದ್ರ ಸಚಿವರು ಗೈರುಹಾಜರಾದ ಕಾರಣಕ್ಕೆ ಮಂಗಳವಾರಕ್ಕೆ ಮುಂದೂಡಿದ್ದರು. ಬುಧವಾರ ನಡೆದ ಸಮಿತಿ ಸಭೆಯ ಅಧ್ಯಕ್ಷತೆಯನ್ನು ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ವಹಿಸಿದ್ದರು. 

ಆಪರೇಷನ್ ಸಿಂಧೂರ ಕುರಿತ ಚರ್ಚೆಯು ನಿರ್ಣಯದ ಮೇಲೆ ಇರಬಾರದು ಎಂದು ವಿರೋಧ ಪಕ್ಷಗಳು ಸ್ಪಷ್ಟಪಡಿಸಿದವು. ಈ ವಿಷಯದ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿತು ಎಂದು ಮೂಲಗಳು ತಿಳಿಸಿವೆ. 

ರಾಜ್ಯಸಭೆಯಿಂದ ನಿವೃತ್ತರಾಗುತ್ತಿರುವ ಸಂಸದರಿಗೆ ಗುರುವಾರ ಬೀಳ್ಕೊಡುಗೆ ಆಯೋಜಿಸಬಹುದು ಎಂದು ಕೆಲವು ಸಂಸದರು ಸಲಹೆ ನೀಡಿದರು. ಧನಕರ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಬಹುದು ಎಂದು ಕಾಂಗ್ರೆಸ್‌ನ ಜೈರಾಮ್ ರಮೇಶ್‌ ಹೇಳಿದರು. ಧನಕರ್ ರಾಜೀನಾಮೆ ನೀಡಿರುವುದರಿಂದ ವಿದಾಯ ಹೇಳಲು ಯಾವುದೇ ಅವಕಾಶ ಉಳಿದಿಲ್ಲ ಎಂದು ಬಿಜೆಪಿಯ ಸಂಸದರೊಬ್ಬರು ಸ್ಪಷ್ಟಪಡಿಸಿದರು. 

ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಸೇರಿದಂತೆ ವಿವಿಧ ವಿಷಯಗಳ ಚರ್ಚೆಗೆ ವಿರೋಧ ಪಕ್ಷಗಳು ಒತ್ತಾಯಿಸಿದವು. ಆದರೆ, ಸರ್ಕಾರದ ಪ್ರತಿನಿಧಿಗಳು ಈ ಬಗ್ಗೆ ಯಾವುದೇ ಭರವಸೆ ನೀಡಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.