ADVERTISEMENT

ಆರ್ಥಿಕ ದಿವಾಳಿಯತ್ತ ರಾಜ್ಯ, ಬಿಜೆಪಿ ಕೈಯಲ್ಲಿ ಸುರಕ್ಷಿತವಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 12:18 IST
Last Updated 24 ಮಾರ್ಚ್ 2021, 12:18 IST
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ   

ಬೆಂಗಳೂರು: ಇವರ ಕೈಯಲ್ಲಿ (ಬಿಜೆಪಿ ಸರ್ಕಾರ) ರಾಜ್ಯ ಸುರಕ್ಷಿತವಾಗಿ ಇರಲು ಸಾಧ್ಯವಿಲ್ಲ ಮತ್ತು ಆರ್ಥಿಕವಾಗಿ ದಿವಾಳಿ ಆಗುವುದನ್ನು ತಡೆಯುವುದನ್ನು ಸಾಧ್ಯವಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ವಿಧಾನಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಉತ್ತರಕ್ಕೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಇವರು ತುಪ್ಪನಾದ್ರೂ ತಿನ್ನಲಿ, ಬೆಣ್ಣೆನಾದ್ರೂ ತಿನ್ನಲಿ. ಅಂಕಿ–ಅಂಶ ನೋಡಿದರೆ ಗೊತ್ತಾಗುವುದಿಲ್ಲವೆ ಎಂದು ಪ್ರಶ್ನಿಸಿದರು.

ಸಾಲ ತಂದು ಸಂಬಳ ಕೊಡುವ ಜರೂರತ್ತು ಏನಿತ್ತು. ಸಾಲ ಸಿಗುತ್ತದೆ ಎಂದು ಸಾಲ ತಂದರೆ ಆಗುವುದಿಲ್ಲ. ಸಾಲ ತೀರಿಸುವ ಶಕ್ತಿ ಇದೆಯಾ ಎಂದು ನೋಡಿಕೊಂಡು ಸಾಲ ಮಾಡಬೇಕು ಎಂದರು.

ADVERTISEMENT

ರಾಜಸ್ವ ವೆಚ್ಚ ಮತ್ತು ಬದ್ಧತಾ ವೆಚ್ಚ ಕಡಿಮೆ ಮಾಡುವ ಬಗ್ಗೆ ಗಂಭೀರವಾದ ಆಲೋಚನೆಗಳೇ ಇಲ್ಲ. 2022 ರ ಜೂನ್‌ನಿಂದ ಕೇಂದ್ರದಿಂದ ಬರುವ ಜಿಎಸ್‌ಟಿ ಪರಿಹಾರವೂ ನಿಂತು ಹೋಗುತ್ತದೆ. ಇದರಿಂದ ನಮ್ಮ ಮೇಲೆ ಇನ್ನಷ್ಟು ಹೊರೆ ಆಗುತ್ತದೆ. ಕೇಂದ್ರ ಸರ್ಕಾರ ಅನುದಾನವನ್ನೂ ಕಡಿತ ಮಾಡಿದೆ. ಅದನ್ನು ತರುವ ಪ್ರಯತ್ನವನ್ನೂ ಮಾಡಿಲ್ಲ ಎಂದು ಸಿದ್ದರಾಮಯ್ಯ ಹರಿಹಾಯ್ದರು.

ರಾಜ್ಯದಿಂದ ಕೇಂದ್ರಕ್ಕೆ ತೆರಿಗೆ ರೂಪದಲ್ಲಿ ₹2.50 ಲಕ್ಷ ಕೋಟಿ ಹೋಗುತ್ತದೆ. ಆದರೆ ನಮಗೆ ವಾಪಸ್‌ ಸಿಗುವುದು ₹30 ಸಾವಿರ ಕೋಟಿ ಮಾತ್ರ. ವಾಸ್ತವದಲ್ಲಿ ₹74 ಸಾವಿರ ಕೋಟಿ ಸಿಗಬೇಕು. ರಾಜ್ಯಕ್ಕೆ ನ್ಯಾಯಬದ್ಧವಾಗಿ ಕೊಡಬೇಕಾದ ಹಣವನ್ನು ಪಡೆಯಲೂ ಇವರು ಪ್ರಯತ್ನಿಸುತ್ತಿಲ್ಲ ಎಂದರು.

ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಬಿಜೆಪಿ ಸರ್ಕಾರ ಇರುವುದರಿಂದ ಡಬಲ್‌ ಎಂಜಿನ್‌ ಸರ್ಕಾರ, ಸ್ವರ್ಗವನ್ನೇ ತರುತ್ತೇವೆ ಎಂದು ಹೇಳಿದ್ದರು. ಈಗ ಡಬಲ್‌ ಎಂಜಿನ್‌ ಗಾಡಿ ಹಿಂದಕ್ಕೆ ಹೋಗುತ್ತಿದೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.