ಬೀದರ್‌ನ ಕರ್ನಾಟಕ ರಾಜ್ಯ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ
ಬೀದರ್: ಪ್ರಾದೇಶಿಕ ಅಸಮತೋಲನ ನಿವಾರಣೆಯ ಉದ್ದೇಶದಿಂದ ಸ್ಥಾಪನೆಗೊಂಡಿರುವ ಇಲ್ಲಿನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ರಾಜ್ಯದ ಇತರೆ ವಿಶ್ವವಿದ್ಯಾಲಯಗಳೊಂದಿಗೆ ವಿಲೀನಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ರಾಯಚೂರಿನ ಕೃಷಿ ವಿವಿ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿವಿಯೊಂದಿಗೆ ಪಶು ವಿವಿಯನ್ನು ವಿಲೀನಗೊಳಿಸಲು ಉದ್ದೇಶಿಸಲಾಗಿದೆ. ವಿಲೀನ ಪ್ರಕ್ರಿಯೆಗಾಗಿ ರಾಜ್ಯ ಸರ್ಕಾರವು ಟಿ.ಎಂ. ವಿಜಯಭಾಸ್ಕರ್ ಅಧ್ಯಕ್ಷತೆಯ ಐವರ ಕೃಷಿ, ತೋಟಗಾರಿಕೆ ಹಾಗೂ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಪುನರ್ ಸಂಘಟನೆ ಉನ್ನತಾಧಿಕಾರ ಸಮಿತಿ ರಚಿಸಿದೆ.
ಈ ಸಮಿತಿಯು ಈಗಾಗಲೇ ಇದರ ಸಾಧಕ–ಬಾಧಕಗಳ ಕುರಿತು ಅಧ್ಯಯನ ಆರಂಭಿಸಿದೆ. ಸಮಿತಿಯ ಸದಸ್ಯರು ನಗರದ ಪಶು ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಭೇಟಿ ಕೊಟ್ಟು, ವಿವಿ ಕುಲಪತಿ ಹಾಗೂ ಸಿಬ್ಬಂದಿಯೊಂದಿಗೆ ಚರ್ಚಿಸಿದ್ದಾರೆ. ಯಾವ ವಿಷಯಗಳ ಕುರಿತು ಚರ್ಚೆ ನಡೆದಿದೆ ಎಂಬುದರ ವಿವರ ಹಂಚಿಕೊಳ್ಳಲು ವಿವಿ ಆಡಳಿತ ಮಂಡಳಿ ನಿರಾಕರಿಸಿದೆ.
ಆದರೆ, ವಿಶ್ವವಿದ್ಯಾಲಯಕ್ಕೆ ಸರ್ಕಾರದಿಂದ ಹಂಚಿಕೆಯಾಗುತ್ತಿರುವ ಅನುದಾನ, ಕಾಯಂ ಹಾಗೂ ಹೊರಗುತ್ತಿಗೆ ನೌಕರರು, ಆದಾಯ, ವಿಲೀನದ ಕುರಿತ ಅಭಿಪ್ರಾಯಗಳು ಸೇರಿದಂತೆ ಹಲವು ವಿಷಯಗಳ ಕುರಿತು ಮಾಹಿತಿ ಕಲೆ ಹಾಕಿದೆ ಎಂದು ಖಚಿತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಪ್ರಾದೇಶಿಕ ಅಸಮಾನತೆ ನಿವಾರಣೆಗೆ ವಿವಿ: ಪ್ರಾದೇಶಿಕ ಅಸಮತೋಲನ ನಿವಾರಣೆಯ ಹಿನ್ನೆಲೆಯಲ್ಲಿ ಡಾ. ನಂಜುಂಡಪ್ಪ ವರದಿ ಆಧರಿಸಿ ಬೀದರ್‌ನಲ್ಲಿ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. ರಾಜ್ಯದ ಉತ್ತರ ಹಾಗೂ ದಕ್ಷಿಣದ ಭಾಗಗಳು ಸಮಾನವಾಗಿ ಅಭಿವೃದ್ಧಿ ಹೊಂದಬೇಕೆನ್ನುವುದು ಇದರ ಆಶಯವಾಗಿದ್ದು, 2005ರಲ್ಲಿ ವಿವಿ ಕಾರ್ಯಾರಂಭ ಮಾಡಿತು. ಒಂದುವೇಳೆ ಇದನ್ನು ಅನ್ಯ ವಿಶ್ವವಿದ್ಯಾಲಯಗಳಲ್ಲಿ ವಿಲೀನಗೊಳಿಸಿದರೆ ಇದರ ಅಸ್ತಿತ್ವ ಕೊನೆಗಾಣಲಿದೆ. ಇದರ ಉದ್ದೇಶಕ್ಕೂ ಕೊಡಲಿ ಏಟು ಬೀಳಲಿದೆ ಎನ್ನುವುದು ತಜ್ಞರು ಹಾಗೂ ವಿವಿ ಸಿಬ್ಬಂದಿಯ ವಾದ.
ಹೈನುಗಾರಿಕೆ, ಮೀನುಗಾರಿಕೆ, ದೇಶಿ ತಳಿಗಳ ಸಂವರ್ಧನೆ, ಜಾನುವಾರುಗಳ ಹಲವಾರು ರೋಗಗಳಿಗೆ ಸಂಬಂಧಿಸಿದಂತೆ ಲಸಿಕೆ ಅಭಿವೃದ್ಧಿ ಸೇರಿದಂತೆ ಅನೇಕ ಆವಿಷ್ಕಾರಗಳು, ಕೆಲಸಗಳು ಪಶು ವಿವಿಯಲ್ಲಿ ನಡೆಯುತ್ತಿವೆ. ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ, ಪಿಎಚ್‌ಡಿ ಸೇರಿದಂತೆ ಹಲವು ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ. ಇದರ ಅಡಿಯಲ್ಲಿ ಬೀದರ್, ಬೆಂಗಳೂರು, ಶಿವಮೊಗ್ಗ, ಹಾಸನ, ಅಥಣಿ, ಪುತ್ತೂರು ಹಾಗೂ ಗದಗದಲ್ಲಿ ಕಾಲೇಜುಗಳು ಕೆಲಸ ನಿರ್ವಹಿಸುತ್ತಿವೆ. ಶುಲ್ಕ, ಲಸಿಕೆ ಸೇರಿದಂತೆ ಇತರೆ ಮೂಲಗಳಿಂದ ಆದಾಯ ಬರುತ್ತಿದ್ದು, ಸ್ವಾವಲಂಬಿಯಾಗಿ ಮುನ್ನಡೆಯುತ್ತಿದೆ. ಆದರೂ ಸರ್ಕಾರ ವಕ್ರದೃಷ್ಟಿ ಬೀರಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಸ್ಥಳೀಯರು ಹೋರಾಟದ ಎಚ್ಚರಿಕೆ ನೀಡಿದ್ದಾರೆ.
‘ವಿಲೀನಗೊಳಿಸುವುದೇಕೆ?’
‘ಪಶು ವೈದ್ಯಕೀಯ ವಿವಿ 20 ವರ್ಷಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ. 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಪ್ರಕಾರದ ಪದವಿ ಪಡೆದು ನೌಕರಿ ಸೇರಿದ್ದಾರೆ. ವಿವಿ ಆರಂಭಗೊಂಡಾಗ ಹತ್ತು ಸಂಸ್ಥೆಗಳಿದ್ದವು. ಈಗ ಅವುಗಳ ಸಂಖ್ಯೆ 35ಕ್ಕೆ ಏರಿದೆ. ವಿವಿ ಕೆಲಸದಿಂದ ಪಶುಪಾಲನಾ ಸಾಮರ್ಥ್ಯ ಶೇ 20ರಿಂದ ಶೇ 30ಕ್ಕೆ ಹೆಚ್ಚಾಗಿದೆ. ಹೊಸ ತಳಿ ಲಸಿಕೆ ಸೇರಿದಂತೆ ಅನೇಕ ಗಮನಾರ್ಹ ಕೆಲಸಗಳಾದಾಗ ವಿಲೀನಗೊಳಿಸುವುದೇಕೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವಿವಿಯ ಹಿರಿಯ ವಿಜ್ಞಾನಿಗಳು ಪ್ರಶ್ನಿಸಿದ್ದಾರೆ.
‘ವಿವಿ ಶ್ರಮದಿಂದ ಮುಧೋಳ ತಳಿಯ ನಾಯಿ ಭಾರತೀಯ ಸೇನೆಗೆ ಸೇರ್ಪಡೆಯಾಗಿದೆ. ಮುಧೋಳನಲ್ಲಿ ಶ್ವಾನ ಸಂಶೋಧನಾ ಸಂಸ್ಥೆ ಸಹ ಆರಂಭಿಸಲಾಗಿದೆ. ವಿಜಯಪುರದಲ್ಲಿ ಮೀನುಗಾರಿಕೆ ಸಂಸ್ಥೆ ಆರಂಭಿಸಲಾಗಿದ್ದು ಇದರಿಂದ ಉತ್ತರದಲ್ಲಿ ಮೀನುಗಾರಿಕೆ ಚಟುವಟಿಕೆಗಳಿಗೆ ಉತ್ತೇಜನ ಸಿಕ್ಕಿದೆ. ದಕ್ಷಿಣದ ಪ್ರಭಾವಿಗಳ ಲಾಬಿಗೆ ಒಳಗಾಗಿ ಅನ್ಯ ವಿವಿಯೊಂದಿಗೆ ವಿಲೀನಗೊಳಿಸಿದರೆ ವಿವಿ ಸ್ಥಾಪಿಸಿದ ಉದ್ದೇಶ ಈಡೇರದು. ಇತರೆ ವಿವಿಗಳ ಮೇಲೂ ಇದರ ಪರಿಣಾಮ ಉಂಟಾಗಲಿದೆ’ ಎಂದಿದ್ದಾರೆ.
2021ರಲ್ಲಿ ರಾಜ್ಯ ಸರ್ಕಾರವು ಶಿವಮೊಗ್ಗದಲ್ಲಿ ಇನ್ನೊಂದು ಪಶು ವೈದ್ಯಕೀಯ ವಿಶ್ವವಿದ್ಯಾಲಯ ಸ್ಥಾಪಿಸಲು ಮುಂದಾಗಿತ್ತು. ಇದರ ಮಹತ್ವ ಇಷ್ಟಿರುವಾಗ ಬೀದರ್ ಪಶು ವಿವಿ ವಿಲೀನಕ್ಕೆ ಮುಂದಾಗಿರುವುದು ಸರಿಯಲ್ಲ.– ವೀರಭದ್ರಪ್ಪ, ಉಪ್ಪಿನ ಸದಸ್ಯ ಅಖಿಲ ಭಾರತೀಯ ವಿಶ್ವವಿದ್ಯಾಲಯಗಳ ನೌಕರರ ಒಕ್ಕೂಟದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ
ದೊಡ್ಡ ಅನ್ಯಾಯ ಹಿಂದುಳಿದ ಪ್ರದೇಶ ಎಂಬ ಕಾರಣಕ್ಕೆ ಸರ್ಕಾರ ಈ ಭಾಗಕ್ಕೆ ವಿಶ್ವವಿದ್ಯಾಲಯ ಕೊಟ್ಟಿದೆ. ಈಗ ಕಸಿದುಕೊಂಡರೆ ಅದಕ್ಕೆ ಅರ್ಥವೇ ಇರುವುದಿಲ್ಲ. ಹಾಗೆ ಮಾಡಿದರೆ ಈ ಭಾಗಕ್ಕೆ ದೊಡ್ಡ ಅನ್ಯಾಯವಾಗಲಿದೆ.– ಶಿವಯ್ಯ ಸ್ವಾಮಿ, ಸದಸ್ಯ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ
ಮಾಹಿತಿ ವಿನಿಮಯ ಕೃಷಿ ತೋಟಗಾರಿಕೆ ಹಾಗೂ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಪುನರ್ ಸಂಘಟನೆ ಉನ್ನತಾಧಿಕಾರ ಸಮಿತಿ ನಮ್ಮ ವಿಶ್ವವಿದ್ಯಾಲಯಕ್ಕೆ ಭೇಟಿ ಕೊಟ್ಟಿದೆ. ವಿವಿಗೆ ಸಂಬಂಧಿಸಿದಂತೆ ಕೇಳಿದ ಮಾಹಿತಿ ನೀಡಲಾಗಿದೆ.– ಪ್ರೊ.ಕೆ.ಸಿ. ವೀರಣ್ಣ, ಕುಲಪತಿ ಪಶು ವೈದ್ಯಕೀಯ ವಿವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.