ಕಾರ್ಮಿಕರು
– ಎ.ಐ ಚಿತ್ರ
ಬೆಂಗಳೂರು: ರಾಜ್ಯಮಟ್ಟದಲ್ಲಿ ನಾಲ್ಕು ಕಾರ್ಮಿಕ ಕಾಯ್ದೆಗಳನ್ನು ರೂಪಿಸಲು ಕಾರ್ಮಿಕ ಇಲಾಖೆ ಮುಂದಾಗಿದ್ದು, ಮೂರು ಕರಡುಗಳನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಸಲಹೆ, ತಿದ್ದುಪಡಿಗಳಿದ್ದಲ್ಲಿ 45 ದಿನಗಳ ಒಳಗೆ ತಿಳಿಸಲು ಸೂಚನೆ ನೀಡಿದೆ.
‘ರಾಜ್ಯ ಸರ್ಕಾರದ ಈ ಕರಡು ಕೇಂದ್ರ ಸರ್ಕಾರದ ನಾಲ್ಕು ಕಾಯ್ದೆಗಳಿಗಿಂತಲೂ ಕಠಿಣವಾಗಿವೆ. ಅಸಾಂವಿಧಾನಿಕ, ಅನಿಯಂತ್ರಿತ ನಿಬಂಧನೆಗಳಾಗಿವೆ’ ಎಂದು ಕಾರ್ಮಿಕ ಸಂಘಟನೆಗಳು ಕಿಡಿಕಾರಿವೆ.
ಕರ್ನಾಟಕ ಕೈಗಾರಿಕಾ ಸಂಬಂಧಗಳ ಸಂಹಿತೆ (ಐ.ಆರ್. ಕೋಡ್), ವೇತನ ಸಂಹಿತೆ (ವೇಜ್ ಕೋಡ್), ಸುರಕ್ಷತೆ ಮತ್ತು ಆರೋಗ್ಯ ಸಂಹಿತೆ (ಒಎಸ್‌ಎಚ್), ಸಾಮಾಜಿಕ ಭದ್ರತೆ ಸಂಹಿತೆಗಳನ್ನು(ಎಸ್‌ಎಸ್‌ಸಿ) ಕಾರ್ಮಿಕ ಇಲಾಖೆ ರಚಿಸಬೇಕಿದ್ದು, ಅದರಲ್ಲಿ ಸಾಮಾಜಿಕ ಭದ್ರತೆ ಸಂಹಿತೆ ಹೊರತುಪಡಿಸಿ ಉಳಿದ ಮೂರನ್ನು ಸಿದ್ಧಪಡಿಸಿ, ಜ.23ರಂದು ಪ್ರಕಟಿಸಿದೆ.
‘ಕೈಗಾರಿಕಾ ಸಂಬಂಧಗಳ ನಿಯಮಗಳಲ್ಲಿ ಸಂಘಟನಾ ಹಕ್ಕಿಗೆ ಅಡ್ಡಿ ಇದೆ. ಕಾರ್ಮಿಕ ಸಂಘದ ಮಾನ್ಯತೆಗೆ ಒಟ್ಟು ಕಾರ್ಮಿಕರಲ್ಲಿ ಶೇ 51ರಷ್ಟು ಮತಗಳನ್ನು ಕಡ್ಡಾಯಗೊಳಿಸಲಾಗಿದೆ. ಇದು ಸಾಧ್ಯವಿಲ್ಲದ ಮಿತಿ. ಮುಷ್ಕರ ಹಮ್ಮಿಕೊಳ್ಳುವುದಾದರೆ 6 ತಿಂಗಳು ‘ಕೂಲಿಂಗ್ ಆಫ್’ ಅವಧಿಯನ್ನು (ತೆಗೆದುಕೊಂಡ ನಿರ್ಧಾರದ ಬಗ್ಗೆ ಮರುಚಿಂತನೆ ಮಾಡುವ ಸಮಯ) ವಿಧಿಸಿರುವುದು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ನಿಯಮಗಳ ಉಲ್ಲಂಘನೆಯಾಗಿದೆ. ಒತ್ತಡ ಹೇರುವ ಪ್ರಕ್ರಿಯೆಯನ್ನು ಕಾರ್ಮಿಕರ ಅನುಚಿತ ವರ್ತನೆ ಎಂದು ವ್ಯಾಖ್ಯಾನಿಸಿರುವುದರಿಂದ ಶಾಂತಿಯುತ ಪ್ರತಿಭಟನೆಯನ್ನು ಅಪರಾಧವಾಗಿ ಕಾಣಲು ದಾರಿ ಮಾಡಿಕೊಡುತ್ತದೆ’ ಎಂದು ಸಿಐಟಿಯು ಅಧ್ಯಕ್ಷ ಮೀನಾಕ್ಷಿ ಸುಂದರಂ ಟೀಕಿಸಿದರು.
‘ವೇತನ ಸಂಹಿತೆ ನಿಯಮಗಳಲ್ಲಿಯೂ ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ. ವಸತಿ ಸೌಕರ್ಯದ ಹೆಸರಿನಲ್ಲಿ ಯಾವುದೇ ಮಾನದಂಡಗಳಿಲ್ಲದೆ ವೇತನ ಕಡಿತಗೊಳಿಸಲು ಮಾಲೀಕರಿಗೆ ಮುಕ್ತ ಅವಕಾಶ ನೀಡಲಾಗಿದೆ. ಬ್ಯಾಂಕೇತರ ಡಿಜಿಟಲ್ ವ್ಯಾಲೆಟ್‌ಗಳ ಮೂಲಕ ವೇತನ ಪಾವತಿಗೆ ಅವಕಾಶ ನೀಡಿರುವುದು ಕಾರ್ಮಿಕರನ್ನು ಶೋಷಣೆಗೆ ತಳ್ಳಲಿದೆ. ವೇತನ ಬಾಕಿ ಹಕ್ಕನ್ನು ಪಡೆಯಲು ಕೇವಲ 1 ವರ್ಷ ಮಿತಿ ನೀಡಿರುವುದು ಅನ್ಯಾಯ’ ಎಂದು ಅವರು ತಿಳಿಸಿದರು.
‘ಸುರಕ್ಷತೆ ಮತ್ತು ಆರೋಗ್ಯ ನಿಯಮಗಳಲ್ಲಿ ಹಲವು ರಾಜಿಗಳಿವೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸುರಕ್ಷಿತ ಸಾರಿಗೆಯನ್ನು ‘ಆರ್ಥಿಕ ಕಾರ್ಯಸಾಧ್ಯತೆ’ಯ ಮೇಲೆ ನಿಗದಿಪಡಿಸಲಾಗಿದೆ. ಇದು ಮಹಿಳೆಯರ ಸುರಕ್ಷತೆಯ ಹಕ್ಕನ್ನು ಕಸಿದುಕೊಂಡಂತಿದೆ. ವಲಸೆ ಕಾರ್ಮಿಕರನ್ನು ನಿರ್ಲಕ್ಷಿಸಲಾಗಿದೆ. ಉಚಿತ ಆರೋಗ್ಯ ತಪಾಸಣೆಯನ್ನು ನೇರ ಉದ್ಯೋಗಿಗಳಿಗೆ ಸೀಮಿತಗೊಳಿಸಿ, ಗುತ್ತಿಗೆ ಕಾರ್ಮಿಕರನ್ನು ಹೊರಗಿಡಲಾಗಿದೆ. ಇದು ತಾರತಮ್ಯದ ಕ್ರಮ. ಗಂಭೀರ ಸುರಕ್ಷತಾ ಲೋಪಗಳನ್ನು ಕೇವಲ ದಂಡ ಪಾವತಿಯ ಮೂಲಕ ಇತ್ಯರ್ಥಪಡಿಸಲು ಅವಕಾಶ ನೀಡಿರುವುದು ಕಾರ್ಮಿಕರ ಪ್ರಾಣಕ್ಕೆ ಅಪಾಯ ತಂದೊಡ್ಡಬಹುದು’ ಎಂದು ಕಾರ್ಮಿಕರ ನಾಯಕಿ ಎಸ್. ವರಲಕ್ಷ್ಮೀ ಆತಂಕ ವ್ಯಕ್ತಪಡಿಸಿದರು.
ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಾಯುವುದಾಗಿಯೂ ಮುಖ್ಯಮಂತ್ರಿ ಹೇಳುತ್ತಾ ಬಂದಿದ್ದರು. ಆದರೆ ಕರಡುಗಳನ್ನು ಸಿದ್ಧಪಡಿಸುವ ಮೊದಲು ಟ್ರೇಡ್ ಯೂನಿಯನ್‌ಗಳ ಅಭಿಪ್ರಾಯವನ್ನು ಪಡೆದಿಲ್ಲಎಸ್. ವರಲಕ್ಷ್ಮೀ ಕಾರ್ಮಿಕರ ನಾಯಕಿ
ಮಾಲೀಕರ ಪರ ನಿಯಮಗಳನ್ನು ರೂಪಿಸಿ ಕಾರ್ಮಿಕರಿಗೆ ಇರುವ ಅಲ್ಪಸ್ವಲ್ಪ ಹಕ್ಕುಗಳನ್ನೂ ಕಿತ್ತುಕೊಳ್ಳಲಾಗುತ್ತಿದೆ. ಯಾವುದೇ ಕರಡುಗಳು ಸರ್ಕಾರದ ಉದ್ದೇಶವನ್ನು ಪ್ರತಿಬಿಂಬಿಸುತ್ತದೆಮೀನಾಕ್ಷಿ ಸುಂದರಂ ಸಿಐಟಿಯು ಅಧ್ಯಕ್ಷ
ಕರಡು ತಿದ್ದುಪಡಿಗೆ ಅವಕಾಶವಿದೆ
ಕರ್ನಾಟಕ ಕೈಗಾರಿಕಾ ಸಂಬಂಧಗಳ ಸಂಹಿತೆ ವೇತನ ಸಂಹಿತೆ ಕೆಲಸದ ಭದ್ರತೆ ಮತ್ತು ಆರೋಗ್ಯ ಸಂಹಿತೆಗಳೇ ಸರಿ ಇಲ್ಲ ಎಂದು ಹೇಳಿಕೆ ನೀಡಿದರೆ ಏನೂ ಪ್ರಯೋಜನವಿಲ್ಲ. ಇದು ಕರಡು ಆಗಿರುವುದರಿಂದ 45 ದಿನಗಳ ಒಳಗೆ ತಿದ್ದುಪಡಿ ಮಾಡಲು ಅವಕಾಶವಿದೆ. ಹಾಗಾಗಿ ಯಾವುದು ಕಾರ್ಮಿಕರಿಗೆ ತೊಂದರೆಯಾಗುತ್ತದೆ ಎಂದು ನಿಖರವಾಗಿ ಗುರುತಿಸಿ ತಿಳಿಸಬೇಕು ಎಂದು ಕಾರ್ಮಿಕ ಇಲಾಖೆಯ ಹೆಚ್ಚುವರಿ ಆಯುಕ್ತ ಮಂಜುನಾಥ್ ಜಿ. ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.