ADVERTISEMENT

ಹೆಗಡೆ ಮಾತಿನಿಂದ ಲೋಕಸಭೆಯಲ್ಲಿ ಕೋಲಾಹಲ: ನಾವೇ ನಿಜವಾದ ಗಾಂಧಿ ಭಕ್ತರು ಎಂದ ಜೋಶಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 18:36 IST
Last Updated 4 ಫೆಬ್ರುವರಿ 2020, 18:36 IST
   

ನವದೆಹಲಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ ಅವರು ಗಾಂಧೀಜಿ ಅವರನ್ನು ಉಲ್ಲೇಖಿಸಿ ನೀಡಿದ್ದಾರೆ ಎನ್ನಲಾದ ವಿವಾದಿತ ಹೇಳಿಕೆಯು ಮಂಗಳವಾರ ಲೋಕಸಭೆ ಕಲಾಪಕ್ಕೆ ಅಡ್ಡಿ ಉಂಟು ಮಾಡಿತು.

ಅನಂತ್‌ ಕುಮಾರ್‌ ಅವರ ಹೇಳಿಕೆ ಖಂಡಿಸಿ ಕಾಂಗ್ರೆಸ್‌, ಡಿಎಂಕೆ, ಎನ್‌ಸಿಪಿ ಸದಸ್ಯರು ಸದನದಲ್ಲೇ ಪ್ರತಿಭಟನೆ ನಡೆಸಿದರು. ಕಲಾಪ ಬಹಿಷ್ಕರಿಸಿ ಹೊರ ನಡೆದರು. ‘ಬಿಜೆಪಿಯು ದೇಶದಲ್ಲಿ ಗೋಡ್ಸೆ ರಾಜಕಾರಣ ಮಾಡುತ್ತಿದೆ,’ ಎಂದು ವಿರೋಧ ಪಕ್ಷಗಳು ಆರೋಪಿಸಿದವು.

ಮಂಗಳವಾರ ಲೋಕಸಭೆಯ ಕಲಾಪ ಆರಂಭವಾಗುತ್ತಲೇ ಕಾಂಗ್ರೆಸ್‌ ಮತ್ತು ವಿರೋಧ ಪಕ್ಷಗಳು ಅನಂತಕುಮಾರ್‌ ಅವರ ಹೇಳಿಕೆಯನ್ನೇ ಹಿಡಿದು ಕೋಲಾಹಲ ಸೃಷ್ಟಿ ಮಾಡಿದರು. ಈ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು. ನಂತರ ಕಲಾಪ ಸೇರಿದಾಗ ಮತ್ತೆ ವಿಚಾರವನ್ನು ಪ್ರಸ್ತಾಪಿಸಿದ ಲೋಕಸಭೆ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌದರಿ, ’ ಇಡೀ ವಿಶ್ವವೇ ಗೌರವಿಸುವ ಗಾಂಧೀಜಿ ಅವರನ್ನು ಬಿಜೆಪಿ ಸಂಸದ ಅಪಮಾನಿಸಿದ್ದಾರೆ,’ ಎಂದು ಹೇಳಿದರು. ಅಲ್ಲದೆ, ಅನಂತ್‌ ಕುಮಾರ ಅವರ ವಿರುದ್ಧ ಚೌದರಿ ವಾಗ್ದಾಳಿ ನಡೆಸಿದರು. ಅವರ ಹೇಳಿಕೆಗಳು ಕಡತಕ್ಕೆ ಹೋಗದಂತೆ ಸ್ಪೀಕರ್‌ ಓಂ ಬಿರ್ಲಾ ಅವರು ಸೂಚಿಸಿದರು.

ADVERTISEMENT

ಚರ್ಚೆಯ ವೇಳೆಯೇ ವಿರೋಧ ಪಕ್ಷಗಳ ಕೆಲ ನಾಯಕರು ಬಾವಿಗಿಳಿದು ಪ್ರತಿಭಟಿಸಿದರು. ಬಿಜೆಪಿ ಗೋಡ್ಸೆ ರಾಜಕಾರಣ ಮಾಡುತ್ತಿದೆ ಎಂದು ಘೋಷಣೆ ಕೂಗಿದರು. ಸ್ಪೀಕರ್‌ ಅವರು ಪ್ರತಿಭಟನೆ ನಿಲ್ಲಿಸುವಂತೆ ಸೂಚಿಸಿದರಾದರೂ, ವಿಪಕ್ಷಗಳು ಜಗ್ಗಲಿಲ್ಲ.

‘ಅನಂತ್‌ ಕುಮಾರ ಅವರ ಹೇಳಿಕೆ ಕುರಿತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಅವರು ಪ್ರತಿಕ್ರಿಯಿಸಬೇಕು ಎಂದು ನಾವು ಬಯಸುತ್ತೇವೆ. ಆದರೆ, ವಾಸ್ತವ ಏನೆಂದರೆ, ಗಾಂಧೀಜಿಯನ್ನು ದ್ವೇಷಿಸುವವರನ್ನು ಅವರು ಬೆಂಬಲಿಸುತ್ತಿದ್ದಾರೆ,’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಾದ ನಂತರ ಕಲಾಪದಲ್ಲಿ ವಿಪಕ್ಷಗಳಿಗೆ ಉತ್ತರ ನೀಡಿದ ಸಚಿವ ಪ್ರಲ್ಹಾದ್‌ ಜೋಶಿ, ‘ಬಿಜೆಪಿಗರೇ ಗಾಂಧೀಜಿಯ ನಿಜವಾದ ಭಕ್ತರು. ನೀಜವಾದ ಅನುಯಾಯಿಗಳು. ಕಾಂಗ್ರೆಸ್ಸಿಗರು ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿಯವರಂತೆ ನಕಲಿ ಭಕ್ತರು,’ ಎಂದು ತಿರುಗೇಟು ನೀಡಿದರು.

ಸಮೃದ್ಧ ಸಾಹಿತ್ಯ ಹಾಗೂ ಸಾವರ್ಕರ್ ಸಾಹಿತ್ಯ ಸಂಘ ಜ.1 ಶನಿವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಮತ್ತೆ ಮತ್ತೆ ಸಾವರ್ಕರ್’ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅನಂತ ಕುಮಾರ ಹೆಗಡೆ ‘ಈ ದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಮೂರು ವಿಧವಿದೆ. ಚಂದ್ರಶೇಖರ ಆಜಾದ್, ಭಗತ್ ಸಿಂಗ್‌ ಅಂತಹ ಕ್ರಾಂತಿಕಾರಿಗಳು ಶಸ್ತ್ರಸಜ್ಜಿತರಾಗಿ ಹೋರಾಟ ಮಾಡಿದರು. ಇನ್ನೊಂದು ವರ್ಗ ಅತ್ಯಂತ ಪ್ರಖರ ರಾಷ್ಟ್ರೀಯ ವಿಚಾರಗಳೊಂದಿಗೆ ಶಿವಾಜಿ, ಹುಕ್ಕ–ಬುಕ್ಕರಂತಹ ನೂರಾರು ಮಂದಿಯನ್ನು ಮುಂದೆ ತಂದರು.

ಇನ್ನೊಂದು ರೀತಿಯ ಸ್ವಾತಂತ್ರ್ಯ ಹೋರಾಟಗಾರರು ಹೇಗೆ ಹೋರಾಟ ಮಾಡಬೇಕು ಎಂದು ಬ್ರಿಟಿಷರ ಬಳಿಯೇ ಕೇಳಿ, ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡರು. ಒಳಗಡೆ (ಜೈಲಿನಲ್ಲಿ) ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಮನವಿ ಮಾಡಿಕೊಂಡರು. ಪರಿಣಾಮ ಲಾಠಿ ನೋಡದ, ಏಟು ತಿನ್ನದವರನ್ನು ಇತಿಹಾಸದ ಪುಟಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಎಂದು ಬಿಂಬಿಸಲಾಯಿತು. ಇತಿಹಾಸದ ಪ್ರಕಾರ ಬ್ರಿಟಿಷರು ಉಪವಾಸಕ್ಕೆ ಹೆದರಿ, ಸ್ವಾತಂತ್ರ್ಯ ಕೊಟ್ಟು ಓಡಿ ಹೋದರು ಎಂಬುದನ್ನು ಕೇಳಿದರೆ ತಣ್ಣಗಿರುವ ರಕ್ತ ಹೆಪ್ಪುಗಟ್ಟಿ ಹೋಗುತ್ತದೆ’ ಎಂದು ಹೇಳಿದ್ದರು.

ಇನ್ನು ಈ ಕುರಿತು ಮಂಗಳವಾರ ಪ್ರತಿಕ್ರಿಯೆ ನೀಡಿರುವ ಸಂಸದ ಅನಂತಕುಮಾರ ಹೆಗಡ ‘ನನ್ನ ಹೇಳಿಕೆಯಲ್ಲಿ ಯಾವುದೇ ರಾಜಕೀಯ ಪಕ್ಷವನ್ನಾಗಲಿ, ಮಹಾತ್ಮಾ ಗಾಂಧೀಜಿ ಅವರನ್ನಾಗಲಿ ಅಥವಾ ಯಾವುದೇ ವ್ಯಕ್ತಿಯನ್ನಾಗಲಿ ಉಲ್ಲೇಖಿಸಿಲ್ಲ. ಸ್ವಾತಂತ್ರ್ಯ ಹೋರಾಟದ ಬಗೆಗಳನ್ನು ನಾನು ವಿಭಾಗಿಸಿ ಹೇಳಿದ್ದೆ. ನಾನು ಅಂದು ಏನು ಮಾತನಾಡಿದ್ದೆ ಎಂಬುದು ಎಲ್ಲೆಡೆ ಲಭ್ಯವಿದೆ. ನನ್ನ ವೆಬ್‌ಸೈಟ್‌ನಲ್ಲಿಯೂ ಇದೆ. ಅಂದಿನ ಭಾಷಣದಲ್ಲಿ ನಾನು ಗಾಂಧೀಜಿ ಅವರನ್ನಾಗಲಿ, ನೆಹರೂ ಅವರನ್ನಾಗಲಿ ಟೀಕಿಸಿಲ್ಲ. ದೇಶದ ಸ್ವಾತಂತ್ರ್ಯ ಹೋರಾಟದ ಕುರಿತು ಚರ್ಚೆ ಮಾಡಿದ್ದೆ,’ ಎಂದು ಹೇಳಿದ್ದಾರೆ.

ಕಠಿಣ ಶಿಕ್ಷೆ ಅಗತ್ಯ ಇತ್ತು: ಕಮಲ್‌ ನಾಥ್‌

ಭೋಪಾಲ್‌: ‘ ನಾಥೂರಾಮ್‌ ಗೋಡ್ಸೆಯನ್ನು ವೈಭವೀಕರಿಸಿದ್ದಕ್ಕಾಗಿ ಸಂಸದೆ ಪ್ರಜ್ಞಾ ಠಾಕೂರ್‌ ವಿರುದ್ಧ ಬಿಜೆಪಿ ಕಠಿಣ ಕ್ರಮ ಕೈಗೊಂಡಿದ್ದರೆ, ಅನಂತಕುಮಾರ ಹೆಗಡೆ, ಮಹಾತ್ಮ ಗಾಂಧಿ ಕುರಿತು ವಿವಾದಾತ್ಮಕ ಹೇಳಿಕೆ ನೀಡುವ ಧೈರ್ಯ ಮಾಡುತ್ತಿರಲಿಲ್ಲ’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್‌ ಮಂಗಳವಾರ ಇಲ್ಲಿ ಹೇಳಿದ್ದಾರೆ.

‘ಮಹಾತ್ಮ ಗಾಂಧಿ ಕುರಿತಂತೆ ಇಂತಹ ಹೇಳಿಕೆ ನೀಡಿರುವುದು ತೀರ ಶೋಚನೀಯ’ ಎಂದು ಅವರು ಸಂಸದ ಅನಂತಕುಮಾರ ಹೆಗಡೆ ಹೆಸರನ್ನು ಪ್ರಸ್ತಾಪಿಸದೇ ಹೇಳಿದ್ದಾರೆ.

‘ಮಹಾತ್ಮ ಗಾಂಧಿ ಮತ್ತು ಗೋಡ್ಸೆ ಪೈಕಿ ಯಾರ ಸಿದ್ಧಾಂತವನ್ನು ಅನುಸರಿಸಲಾಗುತ್ತಿದೆ ಎಂಬ ಬಗ್ಗೆ ಬಿಜೆಪಿ ಸ್ಪಷ್ಟನೆ ನೀಡಬೇಕಾದ ಸಂದರ್ಭ ಬಂದೊದಗಿದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.