ಬೆಂಗಳೂರು: ಪರಿಸರವಾದಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತುಳಸಿ ಗೌಡ ಅವರು ವಯೋ ಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ತುಳಸಿ ಗೌಡ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಇತರ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕರ್ನಾಟಕದ ಪರಿಸರವಾದಿ ಮತ್ತು ಪದ್ಮ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ತುಳಸಿ ಗೌಡ ಅವರ ನಿಧನ ತೀವ್ರ ದುಃಖ ತಂದಿದೆ. ಅವರು ತಮ್ಮ ಇಡೀ ಬದುಕನ್ನು ಪ್ರಕೃತಿ ಪೋಷಣೆಗಾಗಿ ಮುಡಿಪಾಗಿಟ್ಟು, ಸಾವಿರಾರು ಗಿಡಗಳನ್ನು ನೆಟ್ಟು ಬೆಳೆಸಿ ನಮ್ಮ ಪರಿಸರವನ್ನು ಸಂರಕ್ಷಿಸಿದವರು. ಪರಿಸರ ರಕ್ಷಣೆಗೆ ಸದಾ ಮಾರ್ಗದರ್ಶನ ನೀಡುವ ಬೆಳಕಾಗಿ ಅವರು ಉಳಿಯುತ್ತಾರೆ. ಅವರ ಕೆಲಸಗಳು ನಮ್ಮ ಭೂಗ್ರಹವನ್ನು ರಕ್ಷಿಸಲು ತಲೆಮಾರುಗಳಿಗೆ ಪ್ರೇರಣೆ ನೀಡುತ್ತಿರುತ್ತವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಲಕ್ಷಾಂತರ ಗಿಡಗಳನ್ನು ನೆಟ್ಟು, ನೀರೆರೆದ ಅಂಕೋಲಾ ತಾಲ್ಲೂಕು ಹೊನ್ನಳ್ಳಿಯ ಪರಿಸರಪ್ರೇಮಿ ತುಳಸಿಗೌಡ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಜೀವನ ನಿರ್ವಹಣೆಗಾಗಿ ಅರಣ್ಯ ಇಲಾಖೆಯಲ್ಲಿ ದಿನಗೂಲಿ ಕೆಲಸಕ್ಕೆ ಸೇರಿದ್ದ ತುಳಸಿಗೌಡ ಅವರು ನಿವೃತ್ತಿಯ ನಂತರವೂ ತಮ್ಮ ಪರಿಸರ ಕಾಳಜಿಯಿಂದ ವಿಮುಖರಾಗದೆ ಗಿಡನೆಡುವುದನ್ನು ಮುಂದುವರೆಸಿ, ಪದ್ಮಶ್ರೀಯಂತಹ ಅತ್ಯುನ್ನತ ಗೌರವಕ್ಕೆ ಪಾತ್ರರಾದವರು. ತುಳಸಿಗೌಡ ಅವರ ಪರಿಸರದ ಬಗೆಗಿನ ಪ್ರೀತಿ - ಕಾಳಜಿಯನ್ನು ಸ್ಮರಿಸುತ್ತ, ಅಗಲಿದ ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ‘ಲಕ್ಷಾಂತರ ಮರಗಳನ್ನು ನೆಟ್ಟು ಪೋಷಿಸಿದ ಮಹಾತಾಯಿ, ವೃಕ್ಷಮಾತೆ ಎಂದೇ ಗುರುತಿಸಿಕೊಂಡಿದ್ದ ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಅವರ ನಿಧನದ ಸಂಗತಿ ತಿಳಿದು ಮನಸ್ಸಿಗೆ ಅಪಾರ ನೋವುಂಟಾಯಿತು. ಶಿಕ್ಷಿತರಲ್ಲದಿದ್ದರೂ ಪ್ರಕೃತಿಯ ವಿಶ್ವಕೋಶದಂತೆ ಅವರು ಬದುಕಿದರು. ಲಕ್ಷಾಂತರ ಗಿಡಗಳನ್ನು ನೆಟ್ಟು ಪೋಷಿಸುವ ಜೊತೆಗೆ ಅಳಿವಿನಂಚಿನಲ್ಲಿರುವ ಹಲವು ಕಾಡು ಗಿಡಗಳ ಬೀಜ ಸಂಗ್ರಹಿಸಿ, ಸಸಿಗಳನ್ನು ಮಾಡಿ ಕಾಡಿನಲ್ಲಿ ನೆಡುವ ಮೂಲಕ ಸದ್ದಿಲ್ಲದೇ ಹಸಿರು ಕ್ರಾಂತಿ ಮಾಡಿದ ಅವರ ಬದುಕು ಸ್ಫೂರ್ತಿದಾಯಕ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದವರು ಹಾಗೂ ಹಿತೈಷಿಗಳಿಗೆ ನನ್ನ ಸಂತಾಪಗಳು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪದ್ಮಶ್ರೀ ಪುರಸ್ಕೃತರು, ಪರಿಸರ ಪ್ರೇಮಿ ‘ವೃಕ್ಷಮಾತೆ’ ತುಳಸಿ ಗೌಡ ಅವರು ನಿಧನರಾದ ಸುದ್ದಿ ತಿಳಿದು ತೀವ್ರ ದುಃಖಿತನಾಗಿದ್ದೇನೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಿ ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಪದ್ಮಶ್ರೀ ಪುರಸ್ಕೃತೆ ಪರಿಸರದ ಗಟ್ಟಿ ಧ್ವನಿ ತುಳಸಿ ಗೌಡ ಅವರು ಇನ್ನಿಲ್ಲವಾಗಿರುವುದು ನಿಜಕ್ಕೂ ಪರಿಸರ ಕಾಳಜಿಯ ಮನಸ್ಸುಗಳಿಗೆ ಆಘಾತ ತಂದಿದೆ. ಅವರ ಅಗಲಿಕೆಗೆ ತೀವ್ರ ಸಂತಾಪ ಕೋರುತ್ತೇನೆ. ಹಸಿರು ಕ್ರಾಂತಿಯ ಮೂಲಕ ಪರಿಸರ ಉಳಿಸುವ ನಿಟ್ಟಿನಲ್ಲಿ ಅವರ ಅಹರ್ನಿಶಿ ಕಾಳಜಿಯನ್ನು ಹಾಗೂ ಪರಿಸರ ಕ್ರಾಂತಿಯನ್ನು ಗೌರವಿಸಿ ನಮ್ಮ ಕೇಂದ್ರ ಸರ್ಕಾರ ಕಳೆದ ಸಾಲಿನಲ್ಲಿ ಗೌರವಾನ್ವಿತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ವರ್ಷಕ್ಕೆ 30 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸಿ ಪರಿಸರ ಪ್ರೇಮಿ ಎಂದು ಹೆಸರಾಗಿ, ಕಳೆದ 14 ವರ್ಷಕ್ಕೂ ಹೆಚ್ಚು ಕಾಲ ಗಿಡ ನೆಟ್ಟು ಬೆಳೆಸುವ ಕಾಯಕದಲ್ಲಿ ತೊಡಗಿದ್ದ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಸಂತಾಪ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.