ADVERTISEMENT

ಮೀಸಲಾತಿ ಹೋರಾಟದಲ್ಲಿ ಒಂದಾದ ಪಂಚಮಸಾಲಿ ಪೀಠಗಳು

ಹರಪನಹಳ್ಳಿಯಲ್ಲಿ ಕೂಡಲಸಂಗಮ, ಹರಿಹರದ ಶ್ರೀಗಳ ಸಂಗಮ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 16:26 IST
Last Updated 25 ಜನವರಿ 2021, 16:26 IST
ಹರಪನಹಳ್ಳಿಯಲ್ಲಿ ಸೋಮವಾರ ನಡೆದ ಪಂಚಮಸಾಲಿ ಜನಾಂಗಕ್ಕೆ 2 ‘ಎ’ ಮೀಸಲಾತಿ ಹೋರಾಟದ ಪಾದಯಾತ್ರೆಯ ಸಭೆಯಲ್ಲಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು
ಹರಪನಹಳ್ಳಿಯಲ್ಲಿ ಸೋಮವಾರ ನಡೆದ ಪಂಚಮಸಾಲಿ ಜನಾಂಗಕ್ಕೆ 2 ‘ಎ’ ಮೀಸಲಾತಿ ಹೋರಾಟದ ಪಾದಯಾತ್ರೆಯ ಸಭೆಯಲ್ಲಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು   

ಹರಪನಹಳ್ಳಿ: 2 ‘ಎ’ ಮೀಸಲಾತಿಗಾಗಿ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನಡೆಸುತ್ತಿರುವ ಪಾದಯಾತ್ರೆ ಸೋಮವಾರ ಹರಪನಹಳ್ಳಿಗೆ ಬಂದಾಗ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಪಾಲ್ಗೊಳ್ಳುವ ಮೂಲಕ ಮೀಸಲಾತಿ ಹಕ್ಕು ಪಡೆಯಲು ಒಗ್ಗಟ್ಟು ಪ್ರದರ್ಶಿಸಿದರು.

ಪಂಚಮಸಾಲಿ ಸಮುದಾಯದ ಇಬ್ಬರು ಸ್ವಾಮೀಜಿಗಳು ಸಂಗಮ ಆಗುವ ಮೂಲಕ ‘ಎರಡು ಪೀಠಗಳಲ್ಲಿ ಗೊಂದಲವಿಲ್ಲ. ನಾವು ಎಲ್ಲೇ ಇದ್ದರೂ ಒಂದೇ’ ಎನ್ನುವ ಸಂದೇಶವನ್ನು ತಮ್ಮ ಸಮಾಜಕ್ಕೆ ಸಾರಿದರು.

‘ಕೊನೆಗೂ ಇಬ್ಬರು ಶ್ರೀಗಳು ಒಂದೇ ಕಡೆ ನೋಡುವ ಭಾಗ್ಯ ನಮ್ಮದಾಯಿತು. ನಮ್ಮ ಜನಾಂಗಕ್ಕೆ ಖಂಡಿತ ಮೀಸಲಾತಿ ಸಿಗುತ್ತದೆ’ ಎಂದು ಭಕ್ತರು ಸಂತೋಷದಿಂದ ಚರ್ಚಿಸುತ್ತಿದ್ದರು.

ADVERTISEMENT

ರಾತ್ರಿ 7.30ಕ್ಕೆ ವೇದಿಕೆಗೆ ಬಂದ ವಚನಾನಂದ ಸ್ವಾಮೀಜಿ, ಬಸವ ಜಯಮೃತ್ಯುಂಜಯ ಸ್ವಾಮೀಜಿಗೆ ಹೂವಿನ ಹಾರ ಹಾಕಿ ಸ್ವಾಗತಿಸಿದರು.

ಬಸವ ಜಯಮೃತ್ಯುಂಜಯ ಸ್ವಾಮೀಜಿ, ‘ಹೋರಾಟ ನಿಲ್ಲಿಸಿ ಎಂದು ಬೆದರಿಕೆ ಹಾಕುತ್ತಿರುವ ಕಿಡಿಗೇಡಿಗಳಿಗೆ ತಕ್ಕಪಾಠ ಕಲಿಸುತ್ತೇವೆ. ಜ.28ರೊಳಗೆ ಸರ್ಕಾರ ನಿರ್ಧಾರ ಪ್ರಕಟಿಸದಿದ್ದರೆ ಹೋರಾಟ ತೀವ್ರಗೊಳ್ಳಲಿದೆ’ ಎಂದು ಎಚ್ಚರಿಸಿದರು.

ವಚನಾನಂದ ಸ್ವಾಮೀಜಿ ಮಾತನಾಡಿ, ‘ಇದೊಂದು ಐತಿಹಾಸಿಕ ಘಟನೆ. ಗಂಗಾ–ಯಮುನಾ ನದಿಗಳು ವಿರುದ್ಧ ದಿಕ್ಕಿನಲ್ಲಿ ಹರಿದು ಪ್ರಯಾಗದಲ್ಲಿ ಸಂಗಮವಾಗುತ್ತವೆ. ಅದೇ‌ ರೀತಿ ಎರಡು ಪೀಠಗಳು ಸಂಗಮವಾಗಿವೆ. ನಾವು ಕಾಡಿ, ಕೂಡಿದ್ದೇವೆ. ಈಗ ಕೂಡಿ ಕಾಡುವುದು ಬೇಡ’ ಎಂದರು.

‘ಮೀಸಲಾತಿ ಸಂಬಂಧ ಸಚಿವರು, ಶಾಸಕರ ಬಳಿ ಅನೇಕ ಬಾರಿ ಚರ್ಚಿಸಿದ್ದೇನೆ. ದೆಹಲಿಗೆ ತೆರಳಿ ಸಚಿವರಿಗೆ‌ ಮನವಿ ಸಲ್ಲಿಸಿದ್ದೇವೆ. ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಹಾರ್ಡ್‌ವೇರ್, ನಾನು ಸಾಫ್ಟ್‌ವೇರ್‌ ಆಗಿ ಸರ್ಕಾರವನ್ನು ಒತ್ತಾಯಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದರು.

***

ಪಂಚಮಸಾಲಿ ಜನಾಂಗದ ಬಹುದಿನಗಳ ಬೇಡಿಕೆಯಂತೆ ಇಂದು ಎರಡು ಪೀಠಗಳು ಒಗ್ಗೂಡಿವೆ. ಹರಿಹರ ಪೀಠದ ಪೂಜ್ಯರು ಪಾದಯಾತ್ರೆಗೆ ಬಂದ ಬೆಂಬಲ ಸೂಚಿಸಿದ್ದು, ಹೋರಾಟಕ್ಕೆ ಆನೆಬಲ ಬಂದಿದೆ.

- ಬಸವ ಜಯಮೃತ್ಯುಂಜಯ ಸ್ವಾಮೀಜಿ

***

ನಮ್ಮಲ್ಲಿ ತಾತ್ವಿಕ ಭಿನ್ನಾಭಿಪ್ರಾಯಗಳಿವೆ. ಆದರೆ, ಸಮಾಜದ ವಿಷಯದಲ್ಲಿ ಭಿನ್ನಾಭಿಪ್ರಾಯವಿಲ್ಲ. ಹರಿಹರ ಹಾಗೂ ಕೂಡಲಸಂಗಮ ಪಂಚಮಸಾಲಿ ಪೀಠಗಳು ನಮ್ಮೆರಡು ಕಣ್ಣುಗಳು ಎಂದು ವ್ಯಂಗ್ಯ ಮಾಡುವವರಿಗೆ ಹೇಳಿ.

–ವಚನಾನಂದ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.