ADVERTISEMENT

ಪಂಚಮಸಾಲಿ ಮೀಸಲಾತಿಗೆ ಅಂತಿಮ ಗಡುವು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2022, 21:59 IST
Last Updated 15 ಮಾರ್ಚ್ 2022, 21:59 IST
ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು
ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು   

ಬೆಂಗಳೂರು: ‘ಪಂಚಮಸಾಲಿ ಸಮು ದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ಸಂಬಂಧ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಮಾ.31ರೊಳಗೆ ವರದಿ ಪಡೆದು, ಏಪ್ರಿಲ್ 14ರಂದು ಘೋಷಣೆ ಮಾಡಬೇಕು’ ಎಂದು ಲಿಂಗಾ ಯತ ಪಂಚಮಸಾಲಿ ಸಮಾಜವು ಸರ್ಕಾರಕ್ಕೆ ಅಂತಿಮ ಗಡುವು ನೀಡಿದೆ.

ಮುಂದಿನ ಹೋರಾಟದ ಬಗ್ಗೆ ಮಂಗಳವಾರ ದುಂಡು ಮೇಜಿನ ಸಭೆ ನಡೆಸಿದ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಈ ವಿಷಯ ಪ್ರಕಟಿಸಿದರು.

‘ಬಿ.ಎಸ್.ಯಡಿಯೂರಪ್ಪ ಅವರು 2021ರ ಮಾ.15ರಂದು ಆರು ತಿಂಗಳ ಸಮಯ ಕೇಳಿದ್ದರು. ಬಳಿಕ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಅವರು ಮೂರು ತಿಂಗಳ ಸಮಯವನ್ನು ಎರಡು ಬಾರಿ ಕೇಳಿದರು. ಎರಡೂ ಗಡುವು ಪೂರ್ಣಗೊಂಡು ಒಟ್ಟಾರೆ ಒಂದು ವರ್ಷ ಪೂರೈಸಿದೆ. ಆದರೆ ಘೋಷಣೆ ಮಾಡುವ ಲಕ್ಷಣಗಳು ಕಾಣಿ ಸುತ್ತಿಲ್ಲ’ ಎಂದರು.

ADVERTISEMENT

‘12ನೇ ಶತಮಾನದ ಬಸವಣ್ಣನನ್ನು ಹೇಗೆ ನಂಬಿದ್ದೆವೋ, ಅದೇ ರೀತಿ ಮುಖ್ಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಂಬಿದ್ದೇವೆ. ಆದ್ದರಿಂದ ದಿಢೀರ್ ಹೋರಾಟಕ್ಕೆ ಇಳಿಯದೆ ಮಾ.31ರೊಳಗೆ ಆಯೋಗದಿಂದ ವರದಿ ಪಡೆಯಬೇಕು. ಮೀಸಲಾತಿಯ ಹರಿಕಾರ ಅಂಬೇಡ್ಕರ್ ಜಯಂತಿ ದಿನವೇ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಘೋಷಣೆ ಮಾಡಬೇಕು’ ಎಂದರು.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಶಾಸಕ ಅರವಿಂದ ಬೆಲ್ಲದ್ಯ ಇದ್ದರು

ವಚನಾನಂದ ಸ್ವಾಮೀಜಿ ವಿರುದ್ಧ ಯತ್ನಾಳ್ ವಾಗ್ದಾಳಿ
‘ಮಂತ್ರಿ ಮಾಡಿ, ಮುಖ್ಯಮಂತ್ರಿ ಮಾಡಿ ಎಂದು ಯಾರ ಮನೆಗೂ ಹೋಗಿ ಬೇಡುವ ಜಾಯಮಾನ ನನ್ನದಲ್ಲ. ಉಪಮುಖ್ಯಮಂತ್ರಿ ಸ್ಥಾನ ತಪ್ಪಿಸಲು ಸ್ವಾಮೀಜಿಯೊಬ್ಬ ದೆಹಲಿಗೆ ಹೋಗಿ ಕೂತಿದ್ದಾನೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.

‘ಸಚಿವ ಸಂಪುಟ ಪುನರ್ ರಚನೆ ಪಟ್ಟಿ ಸಿದ್ಧವಾಗಿದೆ. ಒಳ್ಳೆಯ ಸುದ್ದಿ ಬರಲಿದೆ ಎಂದು ಕೆಲವರು ಹೇಳುತ್ತಿದ್ದಾರೆ. ನನ್ನ ಹಣೆಯಲ್ಲಿ ಉಪಮುಖ್ಯಮಂತ್ರಿ ಅಥವಾ ಮುಖ್ಯಮಂತ್ರಿ ಆಗಬೇಕು ಎಂದು ಬರೆದಿದ್ದರೆ ಆಗೇ ಆಗುತ್ತೇನೆ. ಇಲ್ಲದಿದ್ದರೆ ಇಲ್ಲ. ಆದರೆ, ಸಮುದಾಯಕ್ಕೆ 2ಎ ಮೀಸಲಾತಿ ಸಿಗಬೇಕು ಎಂಬುದಷ್ಟೇ ನಮ್ಮ ಮುಂದಿರುವ ದೊಡ್ಡ ಬೇಡಿಕೆ’ ಎಂದರು.

‘ಮೀಸಲಾತಿ ವಿಷಯದಲ್ಲಿ ಗಡಿಬಿಡಿಯ ನಿರ್ಧಾರ ಬೇಡ, ಮರಾಠಿಗರಿಗೆ ಆದ ಸ್ಥಿತಿ ಆಗಲಿದೆ ಎಂದು ಅದೇ ಸ್ವಾಮೀಜಿ, ಮುಖ್ಯಮಂತ್ರಿ ಅವರಿಗೆ ಸಲಹೆ ನೀಡಿದ್ದಾನೆ. ಇದೆಲ್ಲವೂ ಹೋರಾಟವನ್ನು ದಿಕ್ಕುತಪ್ಪಿಸುವ ಪ್ರಯತ್ನ. ಇವನ ಹಿಂದೆ ದೊಡ್ಡ ಶಕ್ತಿಯೇ ಕೆಲಸ ಮಾಡುತ್ತಿದೆ’ ಎಂದು ವಚನಾನಂದ ಸ್ವಾಮೀಜಿ ಅವರ ಹೆಸರು ಹೇಳದೆ ಯತ್ನಾಳ್ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

‘ಅವನ ಮಾತನ್ನು ಬಸವರಾಜ ಬೊಮ್ಮಾಯಿ ಅವರು ಕೇಳಿದರೆ ಇಡೀ ಸಮುದಾಯ ಕೆಂಗಣ್ಣಿಗೆ ಗುರಿಯಾಗುತ್ತದೆ. ಈ ಬಗ್ಗೆ ಅವರಿಗೂ ಮನವರಿಕೆ ಮಾಡಿ ದೂರ ಇಡುವಂತೆಯೂ ತಿಳಿಸಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.