ADVERTISEMENT

2 ತಿಂಗಳಿಗೊಮ್ಮೆ ಪೋಷಕರು–ಶಿಕ್ಷಕರ ಸಭೆ ಕಡ್ಡಾಯ: ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 16:07 IST
Last Updated 1 ಜನವರಿ 2026, 16:07 IST
ಮಧು ಬಂಗಾರಪ್ಪ  
ಮಧು ಬಂಗಾರಪ್ಪ      

ಬೆಂಗಳೂರು: ಸರ್ಕಾರಿ ಶಾಲಾ–ಕಾಲೇಜುಗಳಲ್ಲಿ ಇನ್ನು ಮುಂದೆ ಎರಡು ತಿಂಗಳಿಗೆ ಒಮ್ಮೆ ಪೋಷಕರು–ಶಿಕ್ಷಕರ ಮಹಾಸಭೆ ಆಯೋಜನೆ ಮಾಡುವುದು ಕಡ್ಡಾಯ. 

ರಾಜ್ಯದ 56 ಸಾವಿರ ಶಾಲಾ–ಕಾಲೇಜುಗಳಲ್ಲಿ ನ.14ರಂದು ಪೋಷಕರು–ಶಿಕ್ಷಕರ ಮಹಾಸಭೆ ಆಯೋಜಿಸಲಾಗಿತ್ತು. ಸಭೆಯು ಸಾಕಷ್ಟು ಯಶಸ್ಸು ಕಂಡಿತ್ತು. ಹೀಗಾಗಿ, ಪ್ರತಿ ಎರಡು ತಿಂಗಳಿಗೆ ಒಂದು ಸಭೆ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

2025–26ನೇ ಸಾಲಿನಲ್ಲಿ ಜ.3 ಹಾಗೂ ಫೆ.28ರಂದು ಮಹಾಸಭೆಗಳನ್ನು ನಿಗದಿ ಮಾಡಲಾಗಿದೆ. 2026–27ನೇ ಶೈಕ್ಷಣಿಕ ಸಾಲಿನಿಂದ ಪ್ರತಿ ಎರಡು ತಿಂಗಳಿಗೆ ಒಂದು ಸಭೆ ನಡೆಸಲಾಗುತ್ತದೆ. ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ) ಅಧ್ಯಕ್ಷರು ಮತ್ತು ಸದಸ್ಯರು ಸಭೆಯಲ್ಲಿ ಭಾಗವಹಿಸಸುವರು ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಪೋಷಕರು ಮತ್ತು ಶಿಕ್ಷಕರ ಸಹಭಾಗಿತ್ವದಲ್ಲಿ ಶಿಕ್ಷಣದ ಗುಣಮಟ್ಟ ವೃದ್ಧಿಸಲು, ಮಕ್ಕಳ ಕಲಿಕಾ ಪ್ರಗತಿ, ಹಾಜರಾತಿ ಮಾಹಿತಿ ವಿನಿಮಯ, ಮಕ್ಕಳ ಹಾಜರಾತಿ ಹೆಚ್ಚಳಕ್ಕಾಗಿ ಪೋಷಕ-ಶಿಕ್ಷಕರ ಸಭೆ ಆಯೋಜಿಸಲಾಗುತ್ತಿದೆ. ಸಭೆಗಳ ಆರಂಭದಲ್ಲಿ ಸಂವಿಧಾನ ಪೀಠಿಕೆಯ ಓದು ಕಡ್ಡಾಯ ಮಾಡಲಾಗಿದೆ. ಶಾಲೆಗಳ ಅಭಿವೃದ್ಧಿ, ಮಕ್ಕಳ ಕಲಿಕಾ ಪ್ರಗತಿಯಲ್ಲಿ ಪೋಷಕರ ಜವಾಬ್ದಾರಿಯನ್ನು ಮನವರಿಕೆ ಮಾಡಿಕೊಡಲಾಗುತ್ತದೆ. ಉತ್ತಮ ಸಾಧನೆ ತೋರಿದ ಮಕ್ಕಳನ್ನು ಅಭಿನಂದಿಸಲಾಗುತ್ತದೆ ಎಂದು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.