ADVERTISEMENT

ಸಮಾಧಿಗಳಲ್ಲಿ ಮತ್ತೆ ‘ಒಂದಾದ’ ಅಪ್ಪ–ಅಮ್ಮ

ತಾಯಿ ಸಮಾಧಿ ಸಮೀಪದಲ್ಲೇ ಮೂರುವರೆ ದಶಕದ ನಂತರ ತಂದೆಯ ಸಮಾಧಿ ನಿರ್ಮಿಸಿದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 23:30 IST
Last Updated 21 ಫೆಬ್ರುವರಿ 2026, 23:30 IST
 ರೆವರೆಂಡ್ ಅಲೆಕ್ಸಾಂಡ್ರಿಯೋಸ್ ಕೋರ್ ಎಪಿಸ್ಕೋಪ ಮತ್ತು ತಂಗಮ್ಮ ಅವರ ಸಮಾಧಿ 
 ರೆವರೆಂಡ್ ಅಲೆಕ್ಸಾಂಡ್ರಿಯೋಸ್ ಕೋರ್ ಎಪಿಸ್ಕೋಪ ಮತ್ತು ತಂಗಮ್ಮ ಅವರ ಸಮಾಧಿ    

ಮಂಗಳೂರು: ಕಾಲವಾದ ತಂದೆ ಮತ್ತು ತಾಯಿಯ ಸಮಾಧಿಗಳು ಹತ್ತಿರದಲ್ಲೇ ಇರಬೇಕು ಎಂಬ ಮಕ್ಕಳ ಆಸೆ ಕೊನೆಗೂ ಈಡೇರಿದೆ. ಮೂರೂವರೆ ದಶಕದ ಹಿಂದೆ ಕಾಸರಗೋಡು ಜಿಲ್ಲೆಯಲ್ಲಿ ಅಂತ್ಯಸಂಸ್ಕಾರ ಮಾಡಿದ್ದ ತಂದೆಯ ಶರೀರದ ಅವಶಿಷ್ಟಗಳನ್ನು ಕೋಟಯಂನಲ್ಲಿ ತಾಯಿಯ ಅಂತ್ಯಸಂಸ್ಕಾರ ಮಾಡಿದ ಜಾಗಕ್ಕೆ ತಲುಪಿಸಿದ್ದಾರೆ.

ಮಕ್ಕಳ ಬಯಕೆಯಂತೆ ಸಾವಿನ ನಂತರ ಕೋಟಯಂನ ಕೊಲ್ಲಾಡ್ ಸೇಂಟ್‌ ಪೋಲ್ಸ್ ಆರ್ಥೊಡಾಕ್ಸ್ ಚರ್ಚ್‌ನ ಸೆಮಿಟರಿಯಲ್ಲಿ ‘ಒಂದಾದವರು’ ರೆವರೆಂಡ್ ಅಲೆಕ್ಸಾಂಡ್ರಿಯೋಸ್ ಕೋರ್ ಎಪಿಸ್ಕೋಪ ಮತ್ತು ತಂಗಮ್ಮ. 

‘ಕೋಟಯಂನಿಂದ ಕೆಲಸದ ಸಲುವಾಗಿ 1945ರಲ್ಲಿ ಕಾಸರಗೋಡಿಗೆ ಬಂದಿದ್ದ ಅಜ್ಜ ನೀಲೇಶ್ವರದ ನರುಕ್ಕಿಲಕ್ಕಾಡ್ ಎಂಬಲ್ಲಿ ವಾಸವಾ‌ಗಿದ್ದರು. ಅವರ ಮಗ  ಅಲೆಕ್ಸಾಂಡ್ರಿಯೋಸ್ ಕುಟುಂಬದವರ ಕೋಟಮಲ ಎಂಜಿಎಂ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದರು. ಶಾಲೆಯನ್ನು ಆರ್ಥೊಡಾಕ್ಸ್ ಚರ್ಚ್‌ಗೆ ನೀಡಲಾಯಿತು. ಮದುವೆಯಾದ ನಂತರ ಧಾರ್ಮಿಕ ಚಟುವಟಿಕೆಯಲ್ಲೂ ತೊಡಗಿಸಿಕೊಂಡು ಸೇಂಟ್ ಮೇರೀಸ್ ಆರ್ಥೊಡಾಕ್ಸ್ ಚರ್ಚ್‌ ಸ್ಥಾಪಿಸಿದರು. ಅಲ್ಲೇ ಧರ್ಮಗುರು ಆದರು. 1989ರ ಫೆ.19 ರಂದು ತೀರಿಕೊಂಡರು’ ಎಂದು ಅಲೆಕ್ಸಾಂಡ್ರಿಯೋಸ್ ಅವರ ಪುತ್ರ ಶಿಬು ಕುರಿಯಾಕೋಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ತಂದೆಯ ಅಂತ್ಯಸಂಸ್ಕಾರ ನೀಲೇಶ್ವರದ ಸೇಂಟ್‌ ಮೇರೀಸ್ ಆರ್ಥೊಡಾಕ್ಸ್ ಚರ್ಚ್‌ ಆವರಣದಲ್ಲಿ ಮಾಡಲಾಗಿತ್ತು. 2018ರಲ್ಲಿ ನನ್ನಿಬ್ಬರ ಹೆಣ್ಣುಮಕ್ಕಳ ಶಿಕ್ಷಣದ ಅಗತ್ಯಕ್ಕಾಗಿ ಕುಟುಂಬದ ಮೂಲವಾದ ಕೋಟಯಂನ ಕೊಲ್ಲಾಡ್‌ಗೆ ತೆರಳಿದೆವು. ಅಲ್ಲಿ ಅಮ್ಮ 2021ರಲ್ಲಿ ಸಾವಿಗೀಡಾದರು. ಅಪ್ಪ ನಮ್ಮಿಂದಲೂ– ಅಮ್ಮನಿಂದಲೂ ದೂರ  ಇದ್ದಾರೆ ಎಂಬ ನೋವು ಕಾಡುತ್ತಿತ್ತು. ಹಾಗೆ, ಅಪ್ಪನ ಅವಶೇಷಗಳನ್ನು ಕೋಟಯಂಗೆ ಸಾಗಿಸಲು ಕಳೆದ ವರ್ಷ ನಿರ್ಧರಿಸಲಾಯಿತು. ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಅನುಮತಿ ಪಡೆಯಲು ಒಂದು ವರ್ಷ ಬೇಕಾಯಿತು. ಫೆ.14ರಂದು ತೆಗೆದುಕೊಂಡು ಹೋಗಿ 15ರಂದು ಅಮ್ಮನ ಸಮೀಪದಲ್ಲೇ ಮರು ಅಂತ್ಯಸಂಸ್ಕಾರ ಮಾಡಲಾಯಿತು’ ಎಂದು ಅವರು ವಿವರಿಸಿದರು. 

‘ಕೋಟಯಂನಲ್ಲಿರುವ ಸಹೋದರಿಯರೊಂದಿಗೆ ಸೇರಿಕೊಂಡು ಈ ಕಾರ್ಯವನ್ನು ನೆರವೇರಿಸಲಾಗಿದೆ. ಪೊಲೀಸರು, ವೈದ್ಯಾಧಿಕಾರಿಗಳು, ಸಬ್‌ ಕಲೆಕ್ಟರ್‌, ತಹಶೀಲ್ದಾರ್ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಮ್ಮುಖದಲ್ಲಿ ಶವಶರೀರದ ಅವಶೇಷಗಳನ್ನು ತೆಗೆಯಲಾಗಿದೆ. ಇಬ್ಬರಿಗೂ ಸಮಾಧಿಯನ್ನು ನಿರ್ಮಿಸಲಾಗಿದೆ. ಫೆ.22ರ ಭಾನುವಾರ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ಇದೆ. ಚರ್ಚ್‌ ಮತ್ತು ಸಮಾಜ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ಗೊತ್ತಿರಲಿಲ್ಲ. ಅಧಿಕಾರಿಗಳಿಂದ ಅನುಮತಿ ಸಿಗುತ್ತದೆಯೋ ಇಲ್ಲವೋ ಎಂಬ ಆತಂಕವೂ ಇತ್ತು. ಕೊನೆಗೆ ಎಲ್ಲವೂ ಸುಸೂತ್ರವಾಗಿ ನಡೆಯಿತು’ ಎಂದು ಶಿಬು ಹೇಳಿದರು. 

ರೆವರೆಂಡ್ ಅಲೆಕ್ಸಾಂಡ್ರಿಯೋಸ್ ಕೋರ್ ಎಪಿಸ್ಕೋಪ ಮತ್ತು ತಂಗಮ್ಮ 
ಶಿಬು ಕುರಿಯಾಕೋಸ್‌

ಮಂಗಳೂರಿನಲ್ಲೂ ಧಾರ್ಮಿಕ ಚಟುವಟಿಕೆ

ರೆವರೆಂಡ್ ಅಲೆಕ್ಸಾಂಡ್ರಿಯೋಸ್ ಕೋರ್ ಎಪಿಸ್ಕೋಪ ಅವರಿಗೆ ಮಂಗಳೂರು ಜೊತೆ ನಂಟಿತ್ತು. ಮಂಗಳೂರಿನಲ್ಲಿ ಆರ್ಥೊಡಾಕ್ಸ್ ಪಂಥದ ಚಟುವಟಿಕೆ ಹರಡಲು ಅವರು ಕಾರಣರಾಗಿದ್ದರು ಎಂದು ಪುತ್ರ ಶಿಬು ತಿಳಿಸಿದರು. ‘ಮಲಂಗರ ಆರ್ಥೊಡಾಕ್ಸ್ ಮುಖ್ಯ ಕಚೇರಿ ಇರುವುದು ಕೋಟಯಂನಲ್ಲಿ. ಕಾಸರಗೋಡಿನಲ್ಲಿ ಚರ್ಚ್ ಆರಂಭಿಸಿದ ತಂದೆ ತಿಂಗಳಲ್ಲಿ ಒಂದು ದಿನ ಮಂಗಳೂರಿಗೆ ಹೋಗಿ ಬಲ್ಮಠದ ಒಂದು ಸಭಾಂಗಣದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಮಂಗಳೂರಿಗೆ ಹೋಗಿ ಬಂದು ಮಾಡುತ್ತಿದ್ದ ಕಾರಣ ನನ್ನ ಶಿಕ್ಷಣವೂ ಅಲ್ಲೇ ಆಯಿತು. ಸೇಂಟ್ ಅಲೋಶಿಯಸ್‌ ಕಾಲೇಜಿನಲ್ಲಿ ಪಿಯುಸಿ ಮಾಡಿದೆ. ಮಣಿಪಾಲದ ಎಂಐಟಿಯಲ್ಲಿ ಎಂಜಿನಿಯರಿಂಗ್ ಮಾಡಿದೆ’ ಎಂದು ಶಾರ್ಜಾದಲ್ಲಿ ಎಂಜನಿಯರ್ ಆಗಿರುವ ಶಿಬು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.