
ನವದೆಹಲಿ: ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆಯನ್ನು (ಎಸ್‌ಐಆರ್) ವಿರೋಧಿಸುತ್ತಿರುವ ‘ಇಂಡಿಯಾ‘ ಮೈತ್ರಿಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, 'ಚುನಾವಣೆಗಳಲ್ಲಿ ಗೆಲ್ಲಲು ನಾವು ಯಾವತ್ತೂ ಮತ ಕಳವು ಮಾಡಿಲ್ಲ. ಆದರೆ, ಕಾಂಗ್ರೆಸ್ ಪಕ್ಷವು ಮೂರು ಸಲ ಮತ ಕಳವು ನಡೆಸಿದೆ‘ ಎಂದು ಆರೋಪಿಸಿದರು.
ಚುನಾವಣೆ ವ್ಯವಸ್ಥೆ ಸುಧಾರಣೆ ಕುರಿತು ಲೋಕಸಭೆಯಲ್ಲಿ ಎರಡು ದಿನಗಳ ಕಾಲ ನಡೆದ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರ ನೀಡಿದ ಅವರು, ‘ಭ್ರಷ್ಟಾಚಾರದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ವಿಪಕ್ಷದ ಮುಖಂಡರು ಚಿಂತಿತರಾಗಿದ್ದಾರೆ. ಮತದಾರರ ಪಟ್ಟಿಯಲ್ಲಿ ಅಕ್ರಮ ನುಸುಳುಕೋರರನ್ನು ಇರಿಸಿಕೊಳ್ಳಲು ವಿರೋಧ ಪಕ್ಷವು ಎಸ್‌ಐಆರ್‌ಗೆ ವಿರೋಧ ವ್ಯಕ್ತಪಡಿಸುತ್ತಿದೆ‘ ಎಂದು ದೂರಿದರು.
ಶಾ ಮಾತಿಗೆ ವಿಪಕ್ಷಗಳ ಸದಸ್ಯರು ಪದೇ ಪದೇ ಅಡ್ಡಿಪಡಿಸಿದರು. ಬಳಿಕ ಅವರು ಸಭಾತ್ಯಾಗ ಮಾಡಿದರು. ‘ವಿರೋಧ ಪಕ್ಷಗಳು ಎಷ್ಟೇ ಬಾರಿ ಬಹಿಷ್ಕರಿಸಿದರೂ, ಎನ್‌ಡಿಎ ಮೈತ್ರಿಕೂಟವು ಅಕ್ರಮ ನುಸುಳುಕೋರರನ್ನು ಪತ್ತೆ ಹಚ್ಚಿ ಗಡೀಪಾರು ಮಾಡುವ ತನ್ನ ನೀತಿಯನ್ನು ಮುಂದುವರಿಸುತ್ತದೆ‘ ಎಂದು ಶಾ ಘೋಷಿಸಿದರು. ಪ್ರಧಾನಿ ಮತ್ತು ಮುಖ್ಯಮಂತ್ರಿ ಯಾರಾಗಬೇಕು ಎಂದು ಅಕ್ರಮ ನುಸುಳುಕೋರರು ನಿರ್ಧರಿಸಿದರೆ ದೇಶದ ಪ್ರಜಾಪ್ರಭುತ್ವ ಸುರಕ್ಷಿತವಾಗಿರಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
‘ಸ್ವಾತಂತ್ರ್ಯ ನಂತರ ಪ್ರಧಾನಿ ಆಯ್ಕೆಗೆ ಕಾಂಗ್ರೆಸ್ ಸಭೆ ನಡೆದಿತ್ತು. ಈ ಸಭೆಯಲ್ಲಿ 28 ಮಂದಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರನ್ನು ಬೆಂಬಲಿಸಿದರು. ನೆಹರೂ ಅವರಿಗೆ ಬೆಂಬಲ ಸಿಕ್ಕಿದ್ದು ಇಬ್ಬರದ್ದೇ. ಆದರೆ, ಪ್ರಧಾನಿ ಆಗಿದ್ದು ನೆಹರೂ. ಇದು ಮತ ಕಳವು ಅಲ್ಲವೇ‘ ಎಂದು ಶಾ ಛೇಡಿಸಿದರು.
‘ರಾಯ್‌ಬರೇಲಿ ಕ್ಷೇತ್ರದಲ್ಲಿ ಗೆದ್ದಿದ್ದ ಇಂದಿರಾ ಗಾಂಧಿ ಆಯ್ಕೆಯನ್ನು ನ್ಯಾಯಾಲಯ ರದ್ದುಗೊಳಿಸಿತ್ತು. ಆಗ ವಿಶೇಷ ವಿನಾಯಿತಿ ಪಡೆದು ಇಂದಿರಾ ಸಂಸದರಾದರು. ಇದು ಎರಡನೇ ಮತ ಕಳವು. ಸೋನಿಯಾ ಗಾಂಧಿ ದೇಶದ ಪೌರತ್ವ ಪಡೆಯುವ ಮೊದಲೇ ಮತದಾರರಾದರು. ಈ ಪ್ರಕರಣದಲ್ಲಿ ಸೋನಿಯಾ ಅವರಿಗೆ ನ್ಯಾಯಾಲಯ ನೋಟಿಸ್ ನೀಡಿದೆ. ಇದು ಮೂರನೇ ಮತ ಕಳವು‘ ಎಂದು ಶಾ ಹೇಳಿದರು.
ಈ ಮಾತಿಗೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ಈ ಪ್ರಕರಣವನ್ನು ರೋಸ್ ಅವೆನ್ಯೂ ನ್ಯಾಯಾಲಯ ವಜಾಗೊಳಿಸಿದೆ. ಪೌರತ್ವ ಪಡೆಯುವ ಮೊದಲೇ ಸೋನಿಯಾ ಮತ ಚಲಾಯಿಸಿದ್ದರು ಎಂಬುದಕ್ಕೆ ನಿಮ್ಮ ಬಳಿ ದಾಖಲೆಗಳು ಇವೆಯೇ‘ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಪ್ರಶ್ನಿಸಿದರು. ‘ನ್ಯಾಯಾಲಯ ನೋಟಿಸ್ ನೀಡಿದ್ದನ್ನು ನಾನು ಪ್ರಸ್ತಾಪಿಸಿದೆ‘ ಎಂದು ಶಾ ಸಮಜಾಯಿಷಿ ನೀಡಿದರು.
ಶಾ ಹೇಳಿದ್ದೇನು?
* ನೆಹರೂ ಪ್ರಧಾನಿಯಾಗಿದ್ದಾಗ 1952ರಲ್ಲಿ ಮೊದಲ ಬಾರಿ ಎಸ್‌ಐಆರ್ ನಡೆಯಿತು. 1957, 1961, 1965-66, 1983-84 ರಲ್ಲಿ ಈ ಪ್ರಕ್ರಿಯೆ ನಡೆಯಿತು. ಆಗ ಕಾಂಗ್ರೆಸ್ ಆಡಳಿತದಲ್ಲಿತ್ತು. ಎನ್‌ಡಿಎ ಅಧಿಕಾರದಲ್ಲಿದ್ದಾಗ (2002–03) ಒಂದೇ ಸಲ ಎಸ್ಐಆರ್ ನಡೆದಿದೆ. ಆಗ ಈ ಪ್ರಕ್ರಿಯೆಯನ್ನು ಯಾವುದೇ ಪಕ್ಷ ವಿರೋಧಿಸಲಿಲ್ಲ. ಏಕೆಂದರೆ, ಇದು ಚುನಾವಣೆಗಳನ್ನು ಸ್ವಚ್ಛವಾಗಿಡುವ ಮತ್ತು ಪ್ರಜಾಪ್ರಭುತ್ವವನ್ನು ಆರೋಗ್ಯಕರವಾಗಿಡುವ ಪ್ರಕ್ರಿಯೆ.
* ಮರಣ ಹೊಂದಿದವರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವುದು, 18 ವರ್ಷ ತುಂಬಿದವರ ಹೆಸರುಗಳನ್ನು ಸೇರಿಸುವುದು ಮತ್ತು ವಿದೇಶಿ ಪ್ರಜೆಗಳನ್ನು ಒಂದೊಂದಾಗಿ ಅಳಿಸುವುದು ಎಸ್‌ಐಆರ್‌ನ ಉದ್ದೇಶ. ಸತತ ಸೋಲಿನಿಂದ ಕಂಗೆಟ್ಟ ಬಳಿಕ ಕಾಂಗ್ರೆಸ್ ಪಕ್ಷವು ನಾಲ್ಕು ತಿಂಗಳಿಂದ ಎಸ್‌ಐಆರ್ ಬಗ್ಗೆ ಅಪಪ್ರಚಾರ ನಡೆಸುತ್ತಿದೆ.
* ಬಿಹಾರ ಚುನಾವಣೆಗೆ ಮೊದಲು ಕಾಂಗ್ರೆಸ್‌ನವರು ವೋಟ್ ಚೋರಿ ವಿರುದ್ಧ ಹೋರಾಟ ನಡೆಸಿದರು. ಅಕ್ರಮ ನುಸುಳುಕೋರರನ್ನು ರಕ್ಷಿಸುವ ಯಾತ್ರೆ ನಡೆಸಿದರು. ಆದರೆ, ನಾವು ಬಿಹಾರದಲ್ಲಿ ಮೂರನೇ ಎರಡು ಬಹುಮತದಿಂದ ಗೆದ್ದಿದ್ದೇವೆ.
* ನಾವು ಬಹುಕಾಲ ವಿರೋಧ ಪಕ್ಷದಲ್ಲೇ ಇದ್ದವು. ಗೆಲುವಿಗಿಂತ ಹೆಚ್ಚು ಸೋಲೇ ಕಂಡಿದ್ದೇವೆ. ಆದರೆ, ಯಾವತ್ತೂ ಚುನಾವಣಾ ಆಯೋಗದ ವಿರುದ್ಧ ಟೀಕೆ ಮಾಡಲಿಲ್ಲ.
* ದೇಶದಲ್ಲಿ ಇವಿಎಂ ವ್ಯವಸ್ಥೆ ಪರಿಚಯಿಸಿದ್ದು ರಾಜೀವ್ ಗಾಂಧಿ. ಇವಿಎಂ ಬಳಸಿ 2004 ಹಾಗೂ 2009ರಲ್ಲಿ ಚುನಾವಣೆಗಳು ನಡೆದವು. ಆಗ ಗೆದ್ದಿದ್ದು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ. 2014ರಲ್ಲಿ ಹೀನಾಯವಾಗಿ ಸೋತ ಬಳಿಕ ಇವಿಎಂ ವಿರುದ್ಧ ಟೀಕೆ ಆರಂಭಿಸಿದರು. ಹೊಸ ಸಂಪ್ರದಾಯವೆಂದರೆ ಅವರು ಸೋತರೆ, ಚುನಾವಣಾ ಆಯೋಗ ಮತ್ತು ಮತದಾರರ ಪಟ್ಟಿಗಳನ್ನು ದೂಷಿಸುತ್ತಾರೆ, ಇದು ದೇಶದ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಮತದಾರರ ಪಟ್ಟಿಗಳು ಭ್ರಷ್ಟವಾಗಿದ್ದರೆ, ವಿಪಕ್ಷಗಳು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದು ಏಕೆ.
ಶಾ–ರಾಹುಲ್ ಜಟಾಪಟಿ
ಸುಧಾರಣಾ ವ್ಯವಸ್ಥೆ ಚರ್ಚೆ ಸಂದರ್ಭದಲ್ಲಿ ಅಮಿತ್ ಶಾ ಹಾಗೂ ವಿಪಕ್ಷ ನಾಯಕ ರಾಹುಲ್ ಗಾಂಧಿ ನಡುವೆ ಜಟಾಪಟಿ ನಡೆಯಿತು. ಸರ್ಕಾರದ ಪರವಾಗಿ ಶಾ ಉತ್ತರ ನೀಡುತ್ತಿದ್ದಾಗ ಮಧ್ಯಪ್ರವೇಶಿಸಿದ ರಾಹುಲ್, ‘ನಾನು ನಿನ್ನೆ ಒಂದು ಪ್ರಶ್ನೆ ಕೇಳಿದ್ದೆ. ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಚುನಾವಣಾ ಆಯುಕ್ತರಿಗೆ ಪೂರ್ಣ ವಿನಾಯಿತಿ ನೀಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರ ಹಿಂದಿನ ಚಿಂತನೆ ಬಗ್ಗೆ ಶಾ ಉತ್ತರ ನೀಡಿದರು. ಅವರು ಹರಿಯಾಣದ ಬಗ್ಗೆ ಮಾತನಾಡಿ ಒಂದು ಉದಾಹರಣೆ ನೀಡಿದರು. ಆದರೆ, ಮತ ಕಳವಿನ ಕುರಿತು ಹಲವಾರು ಉದಾಹರಣೆಗಳಿವೆ‘ ಎಂದರು.
‘ನನ್ನ ಮೂರು ಪತ್ರಿಕಾಗೋಷ್ಠಿಗಳ ಬಗ್ಗೆಯೇ ಸದನದಲ್ಲಿ ಚರ್ಚೆ ನಡೆಯಲಿ. ನನ್ನ ಪ್ರಶ್ನೆಗಳಿಗೆ ಸರ್ಕಾರ ಮೊದಲು ಉತ್ತರ ನೀಡಲಿ‘ ಎಂದು ಸವಾಲು ಎಸೆದರು. ಆಗ ಅಮಿತ್ ಶಾ, ‘ನಾನು ಏನು ಮಾತನಾಡಬೇಕು ಎಂಬುದನ್ನು ರಾಹುಲ್ ನಿರ್ಧರಿಸಬೇಕಿಲ್ಲ. ಅವರು ತಾಳ್ಮೆಯಿಂದ ಇರಲು ಕಲಿಯಬೇಕು. ರಾಹುಲ್ ಇಚ್ಛೆಗೆ ತಕ್ಕಂತೆ ಸದನ ನಡೆಸಲು ಸಾಧ್ಯವಿಲ್ಲ‘ ಎಂದು ತಿರುಗೇಟು ನೀಡಿದರು
‘ಶಾ ರಕ್ಷಣಾತ್ಮಕ ಪ್ರತಿಕ್ರಿಯೆ ನೀಡಿದರು. ಇದು ಗಲಿಬಿಲಿಯಿಂದ ಕೂಡಿದ ಭಯದ ಪ್ರತಿಕ್ರಿಯೆ‘ ಎಂದು ರಾಹುಲ್ ವ್ಯಂಗ್ಯವಾಡಿದರು.
ಕಾರ್ಯಕರ್ತರೇ ರಾಹುಲ್‌ರಿಂದ ವಿವರಣೆ ಕೇಳಲಿದ್ದಾರೆ: ಶಾ
ಕಾಂಗ್ರೆಸ್ ಪಕ್ಷದ ಚುನಾವಣಾ ಸೋಲಿಗೆ ರಾಹುಲ್ ನಾಯಕತ್ವವೇ ಕಾರಣ, ಇವಿಎಂ ಅಲ್ಲ ಎಂದು ಅಮಿತ್ ಶಾ ಟೀಕಿಸಿದರು.
‘ಬಿಹಾರದಲ್ಲಿ ನಡೆದ ಚುನಾವಣಾ ರ‍್ಯಾಲಿಗಳಲ್ಲಿ ನೀವು ಮತಕಳವು ವಿಷಯ ಎತ್ತಿದ್ದೀರಿ. ಆದರೂ ನೀವು ಚುನಾವಣೆಯಲ್ಲಿ ಸೋತಿದ್ದೀರಿ. 2014ರ ಲೋಕಸಭಾ ಚುನಾವಣೆ ಬಳಿಕ ನಿಮ್ಮ ನಾಯಕತ್ವದಲ್ಲಿ ಪಕ್ಷ ಸೋಲುತ್ತಲೇ ಬಂದಿದೆ. ಕಾಂಗ್ರೆಸ್ ಸೋಲಿಗೆ ಕಾರಣ ನಿಮ್ಮ ನಾಯಕತ್ವವೇ ಹೊರತು ಇವಿಎಂ ಅಥವಾ ಮತದಾರರ ಪಟ್ಟಿ ಅಲ್ಲ... ನಾನು ತಪ್ಪಾಗಿ ಹೇಳಬಹುದು. ಆದರೆ, ಕಾಂಗ್ರೆಸ್ ಕಾರ್ಯಕರ್ತರು ಒಂದು ದಿನ ನೀವು ಇಷ್ಟು ಚುನಾವಣೆಗಳಲ್ಲಿ ಹೇಗೆ ಸೋತಿದ್ದೀರಿ ಎಂಬುದರ ಕುರಿತು ವಿವರಣೆ ಕೇಳಲಿದ್ದಾರೆ‘ ಎಂದು ಅವರು ಹೇಳಿದರು.
ಚುನಾವಣೆಗಳಲ್ಲಿ ಪ್ರತಿ ಬಾರಿ ಸೋತಾಗಲೂ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗದ ಮೇಲೆ ಆರೋಪ ಹೊರಿಸುತ್ತದೆ. ಆದಾಗ್ಯೂ ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಇದೇ ಚುನಾವಣಾ ಆಯೋಗ ಚುನಾವಣೆ ನಡೆಸಿತ್ತು. ಆದರೆ ಆಗ ಯಾವುದೇ ಆಕ್ಷೇಪ ವ್ಯಕ್ತವಾಗಿರಲಿಲ್ಲ. ಸಾಮಾನ್ಯ ಜನರ ವಿಶ್ವಾಸ ಗಳಿಸಿರುವ ಬಿಜೆಪಿಯು ಚುನಾವಣೆಗಳಲ್ಲಿ ಗೆಲ್ಲುತ್ತಿದೆ. ನಮ್ಮ ಪಕ್ಷವು ದೀರ್ಘಕಾಲ ಅಧಿಕಾರದಲ್ಲಿ ಉಳಿಯಲಿದೆ.– ರವಿಶಂಕರ್ ಪ್ರಸಾದ್, ಬಿಜೆಪಿ ಸಂಸದ
ಕೇಂದ್ರದ ಬಿಜೆಪಿ ಸರ್ಕಾರವು ಚುನಾವಣಾ ಆಯೋಗದ ಸ್ವಾತಂತ್ರ್ಯವನ್ನು ವ್ಯವಸ್ಥಿತವಾಗಿ ನಾಶಪಡಿಸುತ್ತಿದೆ. ನಿಷ್ಪಕ್ಷಪಾತ ಚುನಾವಣಾ ಅಂಪೈರ್ ಕಲ್ಪನೆಯನ್ನು ಬಹಿರಂಗವಾಗಿ ಪುಡಿಪುಡಿ ಮಾಡಲಾಗಿದೆ. ಚುನಾವಣಾ ಆಯೋಗವು ಈಗ ರಾಜಕೀಯ ಒತ್ತಡದಲ್ಲಿ ಕುಸಿದು ಬಿದ್ದು ಪಕ್ಷಪಾತಿಯಾಗಿದೆ. ಮತದಾನದ ಹಕ್ಕು ಯಾವುದೇ ಸರ್ಕಾರವು ನೀಡುವ ದಯೆಯಲ್ಲ. ಅದು ಪ್ರಜಾಪ್ರಭುತ್ವದ ಮೂಲಭೂತ ತತ್ವ.– ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ಸಂಸದ
ಪ್ರಧಾನಿ ನರೇಂದ್ರ ಮೋದಿ ಅವರು ಇವಿಎಂಗಳನ್ನು ಹ್ಯಾಕ್ ಮಾಡಿಲ್ಲ. ಅವರು ಜನರ ಹೃದಯಗಳನ್ನು ಕದ್ದಿದ್ದಾರೆ. ಕಾಂಗ್ರೆಸ್ ನಾಯಕರು ಚುನಾವಣಾ ಸೋಲುಗಳನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಹೀಗಾಗಿ ಅವರು ಸದನದ ಕಲಾಪಗಳಿಗೆ ನಿರಂತರ ಅಡ್ಡಿ ಮಾಡುತ್ತಿದ್ದಾರೆ. ವಿರೋಧ ಪಕ್ಷದ ಸಂಸದರು ಪ್ರತಿ ಅಧಿವೇಶನವನ್ನು ರಂಗಮಂದಿರವಾಗಿ ಪರಿವರ್ತಿಸುತ್ತಿದ್ದಾರೆ.– ಕಂಗನಾ ರನೌತ್, ಬಿಜೆಪಿ ಸಂಸದೆ
ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆಯು ಹಿಂಬಾಗಿಲಿನ ಎನ್‌ಆರ್‌ಸಿ. ಧರ್ಮದ ಆಧಾರದಲ್ಲಿ ಜನರನ್ನು ಮತದಾನದ ಹಕ್ಕನ್ನು ಕಸಿದುಕೊಳ್ಳುವ ದುರುದ್ದೇಶಪೂರಿತವಾದ ಕೆಟ್ಟ ಪ್ರಕ್ರಿಯೆ. ಭಾರತದ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್ ಮತ್ತು ಸಂಸತ್ತಿಗಿಂತ ದೊಡ್ಡದಾಗಿ ಇರಲು ಸಾಧ್ಯವಿಲ್ಲ.– ಅಸಾದುದ್ದೀನ್ ಓವೈಸಿ, ಎಐಎಂಐಎಂ ಸಂಸದ