
ಬೆಂಗಳೂರು: ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಬೇಕಿರುವ ಕನಿಷ್ಠ ಅಂಕವನ್ನು ಶೇ 33ಕ್ಕೆ ನಿಗದಿ ಮಾಡಿದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ವಿದ್ಯಾರ್ಥಿಗಳ ಭವಿಷ್ಯಕ್ಕೆ, ವ್ಯಕ್ತಿತ್ವ ವಿಕಸನಕ್ಕೆ ಈಗಿರುವ ಪರೀಕ್ಷಾ ಪದ್ಧತಿ ಉತ್ತಮವಾಗಿದೆ. ದೀರ್ಘ ಕಾಲದ ಪರೀಕ್ಷಾ ಮಾನದಂಡದ ಆಧಾರದಲ್ಲಿ ತೇರ್ಗಡೆಯ ಕನಿಷ್ಠ ಅಂಕವನ್ನು ಶೇ 35ಕ್ಕೆ ನಿಗದಿ ಮಾಡಲಾಗಿದೆ. ಅದು ಸಮಂಜಸವಾಗಿದೆ. ಇಂತಹ ಮಾನದಂಡವನ್ನು ಶೇ 33ಕ್ಕೆ ಇಳಿಕೆ ಮಾಡಿರುವುದು ಸರಿಯಾದ ಕ್ರಮವಲ್ಲ. ಇಂತಹ ನಿರ್ಧಾರಗಳು ವಿದ್ಯಾರ್ಥಿಗಳ ಸ್ಪರ್ಧಾ ಮನೋಭಾವಕ್ಕೆ ಪೆಟ್ಟು ನೀಡುತ್ತವೆ. ಮಾನಸಿಕ ದೃಢತೆಯ ಕೊರತೆ ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳ ಮಧ್ಯೆ ಶೇ 35 ಅಂಕದ ವರ್ಗ, ಶೇ 33 ಅಂಕದ ವರ್ಗಗಳಾಗಿ ವಿಂಗಡಣೆಯಾಗುತ್ತದೆ. ಹಾಗಾಗಿ, ಈಗಿರುವ ಪದ್ಧತಿಯನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇಂತಹ ವಿಷಯಗಳತ್ತ ಗಮನಹರಿಸುವ ಬದಲು ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.