ADVERTISEMENT

ಆಸ್ತಿ ವಿವರ ಮುಚ್ಚಿಟ್ಟ ಸಂಸದ ಪಿ.ಸಿ. ಮೋಹನ್?

ದೇವನಹಳ್ಳಿ ಬಳಿಯ ₹92 ಕೋಟಿ ಮೌಲ್ಯದ ಭೂಮಿ

ವಿಜಯಕುಮಾರ್ ಎಸ್.ಕೆ.
Published 31 ಆಗಸ್ಟ್ 2019, 19:48 IST
Last Updated 31 ಆಗಸ್ಟ್ 2019, 19:48 IST
ಪಿ.ಸಿ.ಮೋಹನ್‌
ಪಿ.ಸಿ.ಮೋಹನ್‌   

ಬೆಂಗಳೂರು: ಬೆಂಗಳೂರು ಕೇಂದ್ರ ಕ್ಷೇತ್ರದ ಬಿಜೆಪಿ ಸಂಸದ ಪಿ.ಸಿ. ಮೋಹನ್ ದೇವನಹಳ್ಳಿ ಬಳಿ ಬಹುಕೋಟಿ ಮೌಲ್ಯದ 42 ಎಕರೆ ಜಮೀನನ್ನು 2012 ಮತ್ತು 2013ರಲ್ಲಿ ಖರೀದಿಸಿದ್ದು, ಈ ವಿವರ ಚುನಾವಣಾ ವೇಳೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ನಮೂದಿಸದಿರುವುದು ಬಯಲಾಗಿದೆ.

ದೇವನಹಳ್ಳಿಯ ಲಕ್ಷ್ಮೀಪುರ ವ್ಯಾಪ್ತಿಯಲ್ಲಿ ಮೋಹನ್, ಆಸ್ತಿ ಖರೀದಿಸಿದ ಕ್ರಯ ಪತ್ರಗಳು ‘ಪ‍್ರಜಾವಾಣಿ’ಗೆ ಲಭ್ಯ
ವಾಗಿವೆ. ಈ ಪ್ರದೇಶದಲ್ಲಿ ಪ್ರತಿ ಎಕರೆಗೆ ಮಾರ್ಗಸೂಚಿ ದರ ₹1.10 ಕೋಟಿಯಷ್ಟಿದ್ದು, ಮಾರುಕಟ್ಟೆ ಮೌಲ್ಯ ₹2.20 ಕೋಟಿಯಷ್ಟಿದೆ. ಈ ಲೆಕ್ಕದಲ್ಲಿ ಭೂಮಿಯ ಮಾರುಕಟ್ಟೆ ಮೌಲ್ಯ ₹92 ಕೋಟಿಯಾಗುತ್ತದೆ.

2014ರ ಲೋಕಸಭಾ ಚುನಾವಣೆ ವೇಳೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ‘ಪಿ.ಸಿ. ರಿಯಾಲ್ಟಿ’ ಸಂಸ್ಥೆಯಲ್ಲಿ ₹14.65 ಕೋಟಿ ಹೂಡಿರುವುದಾಗಿ ಮೋಹನ್ ತೋರಿಸಿದ್ದಾರೆ. ಆದರೆ, ದೇವನಹಳ್ಳಿ ಆಸ್ತಿಗೆ ಸಂಬಂಧಿಸಿದಂತೆ ಆಸ್ತಿ ಮತ್ತು ಋಣಭಾರದಲ್ಲಿ ವಿವರ ಉಲ್ಲೇಖಿಸಿಲ್ಲ.

ADVERTISEMENT

2019ರ ಚುನಾವಣೆ ವೇಳೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ‘ಇದೇ ಸಂಸ್ಥೆಯಿಂದ ನನಗೆ ₹12.63 ಲಕ್ಷ, ಪತ್ನಿ ಶೈಲಾ ಅವರಿಗೆ ₹8.75 ಕೋಟಿ ಬರಬೇಕಿದೆ’ ಎಂದು ಮೋಹನ್ ಹೇಳಿಕೊಂಡಿದ್ದಾರೆ.

‘ಕಂದಾಯ ಇಲಾಖೆಯ ಎಲ್ಲ ದಾಖಲೆಗಳಲ್ಲಿ ಅವರ ಹೆಸರೇ ಇದೆ. ಪಿ.ಸಿ. ರಿಯಾಲ್ಟಿ ಹೆಸರಿಗೆ ಆಸ್ತಿ ವರ್ಗಾವಣೆ ಆಗಿರುವ ಬಗ್ಗೆ ಉಲ್ಲೇಖವಿಲ್ಲ. 2019ರ ಆ.16ರಂದು ಪಡೆದಿರುವ ಋಣಭಾರ ಪ್ರಮಾಣ ಪತ್ರದಲ್ಲಿ(ಇ.ಸಿ) ಮೋಹನ್ ಹೆಸರಿದೆ. ಈ ದಾಖಲೆಗಳು ಆಸ್ತಿಯ ಮಾಲೀಕತ್ವ ಮೋಹನ್ ಬಳಿಯೇ ಇರುವುದನ್ನು ದೃಢಪಡಿಸುತ್ತವೆ. ರಿಯಾಲ್ಟಿ ಸಂಸ್ಥೆಗೆ ವರ್ಗಯಿಸಿದ್ದರೆ, ಇ.ಸಿಯಲ್ಲಿ ಉಲ್ಲೇಖವಾಗಬೇಕಿತ್ತು’ ಎಂದು ಈ ದಾಖಲೆಗಳನ್ನುಆರ್‌ಟಿಐನಲ್ಲಿ ಟಿ.ಆರ್. ಆನಂದ್ ಅವರ ಪ್ರತಿ‍ಪಾದನೆ.

‘42 ಎಕರೆಯಲ್ಲಿ 4 ಎಕರೆ 4 ಗುಂಟೆ ಶೃಂಗೇರಿ ಶಿವಗಂಗೆ ಪೀಠದ ಆಸ್ತಿಯೂ ಸೇರಿದೆ.ಅಕ್ರಮವಾಗಿ ಮಾರಾಟ ಮಾಡಿದ್ದ ಮಠದ ಜಾಗವನ್ನು ಮೋಹನ್ ಖರೀದಿಸಿದ್ದಾರೆ. ಹೀಗಾಗೇ ವಿವರ ಮುಚ್ಚಿಟ್ಟಿದ್ದಾರೆ’ ಎಂದು ಆನಂದ್ ಹೇಳಿದರು.

ಮುಚ್ಚಿಟ್ಟಿಲ್ಲ: ಮೋಹನ್
‘ಖರೀದಿಸಿದ ಆಸ್ತಿಯನ್ನು ಪಿ.ಸಿ. ರಿಯಾಲ್ಟಿ ಸಂಸ್ಥೆಗೆ ವರ್ಗಾಯಿಸಲಾಗಿದೆ. ಈ ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವ ವಿಷಯವನ್ನು ಅಫಿಡವಿಟ್‌ನಲ್ಲಿ ಸಲ್ಲಿಸಿದ್ದೇನೆ. ನಾನು ಆಸ್ತಿ ವಿವರ ಮುಚ್ಚಿಟ್ಟಿಲ್ಲ’ ಎಂದು ಪಿ.ಸಿ. ಮೋಹನ್ ಪ್ರತಿಪಾದಿಸಿದ್ದಾರೆ.

‘ಈ ಸಂಸ್ಥೆಯಲ್ಲಿ ನಾನೂ ಭಾಗೀದಾರ.ಆಸ್ತಿಯನ್ನು ಸಂಸ್ಥೆಗೆ ವರ್ಗಾಯಿಸಿದ ಬಳಿಕ ಅದರ ಮೇಲಿನ ಹಕ್ಕನ್ನು ನಾನು ಕಳೆದುಕೊಳ್ಳುತ್ತೇನೆ. ಹಾಗಿದ್ದರೂಪಿ.ಸಿ. ರಿಯಾಲ್ಟಿಯಲ್ಲಿ ಹೂಡಿಕೆ ಮಾಡಿರುವುದು,ಆ ಸಂಸ್ಥೆಯಿಂದ ನನಗೆ ಬಾಕಿ ಬರಬೇಕಿರುವುದನ್ನು ಅಫಿಡವಿಟ್‌ನಲ್ಲಿ ದಾಖಲಿಸಿದ್ದೇನೆ. ಈ ಜಮೀನಿನಲ್ಲಿ ಬಡಾವಣೆ ನಿರ್ಮಿಸಿ ನಿವೇಶನಗಳನ್ನೂ ಮಾರಾಟ ಮಾಡಲಾಗಿದೆ. ಪಿ.ಸಿ ರಿಯಾಲ್ಟಿ ಹೆಸರಿನಲ್ಲಿ ಖಾತಾ ಕೂಡ ಆಗಿದೆ’ ಎಂದಿದ್ದಾರೆ.

ನೋಟಿಸ್‌
‘ಮೋಹನ್ ಹೊಂದಿರುವ ಜಮೀನಿನಲ್ಲಿ ಶೃಂಗೇರಿ ಶಿವಗಂಗೆ ಪೀಠದ ಆಸ್ತಿಯೂ ಇದೆ. ಈ ವಿವಾದಿತ ಜಮೀನಿನ ವಿನ್ಯಾಸ ನಕ್ಷೆಗೆ ನೀಡಿರುವ ಅನುಮೋದನೆ ರದ್ದುಗೊಳಿಸಬೇಕು’ ಎಂದು ಉಪನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರಕ್ಕೆ (ಎಸ್‌ಟಿಆರ್‌ಆರ್‌) ಟಿ.ಆರ್. ಆನಂದ್ ದೂರು ನೀಡಿದ್ದಾರೆ. ಈ ಸಂಬಂಧ ಮೋಹನ್‌ಗೆ ನೋಟಿಸ್‌ ನೀಡಿರುವ ಎಸ್‌ಟಿಆರ್‌ಆರ್‌, 30ದಿನದೊಳಗೆ ಉತ್ತರ ನೀಡುವಂತೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.