ADVERTISEMENT

ತರಾತುರಿ ಸಮೀಕ್ಷೆ: ಪಿಬಿಆರ್ ವರದಿ ವಾಪಸ್

30 ಜಿಲ್ಲೆಗಳಿಗೆ ತಿದ್ದುಪಡಿಗೆ ಕಳುಹಿಸಿದ ಜೀವವೈವಿಧ್ಯ ಮಂಡಳಿ

ಸಂಧ್ಯಾ ಹೆಗಡೆ
Published 9 ನವೆಂಬರ್ 2020, 20:29 IST
Last Updated 9 ನವೆಂಬರ್ 2020, 20:29 IST
ಪಶ್ಚಿಮ ಘಟ್ಟದ ಜೀವವೈವಿಧ್ಯ (ಸಾಂದರ್ಭಿಕ ಚಿತ್ರ)
ಪಶ್ಚಿಮ ಘಟ್ಟದ ಜೀವವೈವಿಧ್ಯ (ಸಾಂದರ್ಭಿಕ ಚಿತ್ರ)   

ಮಂಗಳೂರು: ಕರ್ನಾಟಕ ಜೀವವೈವಿಧ್ಯ ಮಂಡಳಿಗೆ ರಾಜ್ಯದ ಎಲ್ಲ 30 ಜಿಲ್ಲೆಗಳಿಂದ ಸಲ್ಲಿಕೆಯಾಗಿದ್ದ ಜನತಾ ಜೀವವೈವಿಧ್ಯ ದಾಖಲಾತಿ (ಪಿಬಿಆರ್) ವರದಿಗಳು ವಾಪಸ್ ಬಂದಿವೆ. ವರದಿ ಸಮರ್ಪಕವಾಗಿಲ್ಲ ಎಂಬ ಕಾರಣ ನೀಡಿರುವ ಮಂಡಳಿಯು, ತಿದ್ದುಪಡಿ ಮಾಡಿ ಕಳುಹಿಸುವಂತೆ ಸೂಚಿಸಿದೆ.

ವರದಿ ತಯಾರಿಕೆಯ ಉಸ್ತುವಾರಿ ನಿರ್ವಹಿಸುತ್ತಿರುವ ಆಯಾ ಜಿಲ್ಲೆಯ ಸಾಮಾಜಿಕ ಅರಣ್ಯ ವಿಭಾಗಕ್ಕೆ, ಮಂಡಳಿಯ ಸದಸ್ಯ ಕಾರ್ಯದರ್ಶಿ ಕೆಲ ದಿನಗಳ ಹಿಂದೆ ಈ ಸಂಬಂಧ ಪತ್ರವೊಂದನ್ನು ಕಳುಹಿಸಿದ್ದಾರೆ. ‘ವರದಿ ತಯಾರಿಕೆ ಸಂಬಂಧ ಹಲವಾರು ಬಾರಿ ಮಾಹಿತಿ ನೀಡಿದ್ದರೂ, ದಾಖಲಾತಿಯಲ್ಲಿ ತಿದ್ದುಪಡಿಗಳು ಕಂಡುಬಂದಿವೆ. ಇದನ್ನು ಸರಿಪಡಿಸಿ, ಪುನಃ ವರದಿ ಸಲ್ಲಿಸಬೇಕು’ ಎಂದು ಪತ್ರದಲ್ಲಿ ಸೂಚಿಸಲಾಗಿದೆ.

‘ಹಸಿರು ನ್ಯಾಯ ಮಂಡಳಿ ಸೂಚನೆಯಂತೆ, ರಾಷ್ಟ್ರೀಯ ಜೀವವೈವಿಧ್ಯ ಮಂಡಳಿಯು, ರಾಜ್ಯ ಮಂಡಳಿಯ ಮೂಲಕ ಪಿಬಿಆರ್‌ ನಡೆಸಿ, ನಿಗದಿತ ಅವಧಿಯಲ್ಲಿ ವರದಿ ಸಲ್ಲಿಸುವಂತೆ ಜುಲೈನಲ್ಲಿ ಎಲ್ಲ ಜಿಲ್ಲೆಗಳಿಗೆ ಆದೇಶಿಸಿತ್ತು. ಕೋವಿಡ್–19 ಲಾಕ್‌ಡೌನ್ ಅವಧಿಯಲ್ಲಿ 15 ದಿನಗಳ ಕಾಲಾವಕಾಶ ನೀಡಿದ್ದ
ರಿಂದ ಸಂಯೋಜಕರಿಗೆ ಸಮರ್ಪಕವಾಗಿ ಸಮೀಕ್ಷೆ ನಡೆಸಲು ಸಾಧ್ಯವಾಗಿಲ್ಲ' ಎನ್ನುತ್ತಾರೆ ಗ್ರಾಮ ಜೀವವೈವಿಧ್ಯ ಸಮಿತಿ ಪ್ರಮುಖರೊಬ್ಬರು.

ADVERTISEMENT

‘ಕೆಲವು ಜಿಲ್ಲೆಗಳಲ್ಲಿ ಒಬ್ಬರೇ ಸಂಯೋಜಕರು ನಾಲ್ಕೈದು ಗ್ರಾಮಪಂಚಾಯಿತಿಗಳ ವರದಿಯನ್ನು ಸಿದ್ಧಪಡಿಸಿ ನೀಡಿದ್ದರು’ ಎಂದು ತಿಳಿಸಿದರು.

‘ಎಂಎಸ್ಸಿ ಪದವೀಧರರು, ಅತಿಥಿ ಉಪನ್ಯಾಸಕರು ಸೇರಿದಂತೆ ಕೆಲಸ ಕಳೆದುಕೊಂಡಿದ್ದ ಅನೇಕರು ಸಮೀಕ್ಷೆ ನಡೆಸಿದ್ದರು. ಅವರಿಗೆ ಈವರೆಗೆ ಗೌರವಧನ ಪಾವತಿಯಾಗಿಲ್ಲ. ಹೀಗಾಗಿ ಅವರು ತಿದ್ದುಪಡಿ ಕಾರ್ಯದಲ್ಲಿ ಭಾಗಿಯಾಗಲು ನಿರಾಸಕ್ತರಾಗಿದ್ದಾರೆ’ ಎಂದು ಅವರು ತಿಳಿಸಿದರು.

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಸಮೀಕ್ಷೆ ನಡೆಸಿ, ವರದಿ ಸಲ್ಲಿಸಿದ್ದೇವೆ. ವರದಿಯಲ್ಲಿ ತಿದ್ದುಪಡಿಗೆ ಸೂಚನೆ ಬಂದಿದ್ದರೂ, ಈವರೆಗೆ ವರದಿ ವಾಪಸ್ ಬಂದಿಲ್ಲ. ಸಣ್ಣಪುಟ್ಟ ತಾಂತ್ರಿಕ ದೋಷಗಳಿದ್ದರೆ ತಿದ್ದುಪಡಿ ಮಾಡಿ ಕಳುಹಿಸಲಾಗುವುದು’ ಎಂದು ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ ಸುಬ್ರಹ್ಮಣ್ಯ ಎಚ್.ಆರ್. ಪ್ರತಿಕ್ರಿಯಿಸಿದರು.

‘ವಿವಿಧ ಜಿಲ್ಲೆಗಳಿಂದ ಸಲ್ಲಿಕೆಯಾಗಿರುವ ವರದಿಗಳ ಪರಿಶೀಲನೆ ನಡೆಯುತ್ತಿದೆ. ಲೋಪದೋಷಗಳು ಕಂಡುಬಂದ ಕಾರಣ ವಾಪಸ್ ಕಳುಹಿಸಲಾಗುತ್ತಿದೆ. ಜೀವವೈವಿಧ್ಯ ದಾಖಲಾತಿ ನಿರಂತರ ಪ್ರಕ್ರಿಯೆಯಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ದಾಖಲಾತಿ ನಡೆಯಬೇಕು. ಸಂಯೋಜಕರ ಗೌರವಧನದ ಅನುದಾನ ಹಂತಹಂತವಾಗಿ ಬಿಡುಗಡೆಯಾಗುತ್ತಿದೆ’ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.