ADVERTISEMENT

ಪಶ್ಚಿಮ ಪದವೀಧರ ಕ್ಷೇತ್ರ| ವೈಯಕ್ತಿಕ ವರ್ಚಸ್ಸು ಜಯದ ಸೋಪಾನ: ಬಿಜೆಪಿಯ ಸಂಕನೂರ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 1:27 IST
Last Updated 23 ಅಕ್ಟೋಬರ್ 2020, 1:27 IST
ಎಸ್‌.ವಿ ಸಂಕನೂರ
ಎಸ್‌.ವಿ ಸಂಕನೂರ   

* ಕಳೆದೆರಡು ಅವಧಿಯಿಂದಲೂ ಈ ಸ್ಥಾನದಲ್ಲಿರುವಿರಿ. ಈ ಸಲ ಹೊಸತೇನಿದೆ?

ಉದ್ಯೋಗ ಸೃಷ್ಟಿ ಮತ್ತು ಉದ್ಯೋಗಾವಕಾಶಗಳನ್ನು ನೀಡಲು ಈ ಎರಡು ಅವಧಿಯಲ್ಲಿ ಹೋರಾಡಿದ್ದಾಗಿದೆ. ಈ ಸಲ ಕೇಂದ್ರ ಸರ್ಕಾರದ ಯೋಜನೆಗಳೊಂದಿಗೆ ಸ್ವಯಂ ಉದ್ಯೋಗಕ್ಕೆ ಹೆಚ್ಚು ಒತ್ತು ನೀಡಲಾಗುವುದು. ಕೈಗಾರಿಕಾ ಸಚಿವರೂ ಈ ಭಾಗದವರೇ ಆಗಿರುವುದರಿಂದ ಲಭ್ಯ ಇರುವ ಮಾನವ ಸಂಪನ್ಮೂಲ, ನೈಸರ್ಗಿಕ ಸಂಪನ್ಮೂಲ ಬಳಸಿ ಹೊಸ ಉದ್ದಿಮೆಗಳನ್ನು ಸ್ಥಾಪಿಸುವ ಯೋಜನೆ ಇದೆ.

*ಈ ಸಲ ನಿಮ್ಮ ಆಯ್ಕೆ ಸುಲಭವಾಗಿದೆಯೇ?

ADVERTISEMENT

ಬಿಜೆಪಿಯ ವರ್ಚಸ್ಸು, ವೈಯಕ್ತಿಕ ವರ್ಚಸ್ಸು ಇವೆರಡೂ ಆಯ್ಕೆ ಸುಲಭಗೊಳಿಸುತ್ತವೆ. ಕಳೆದ ಕೆಲವು ವರ್ಷಗಳಿಂದ ಈ ಕ್ಷೇತ್ರದಲ್ಲಿರುವೆ.ಕಳೆದೆರಡು ಅವಧಿಯಲ್ಲಿ ನೀಡಿರುವ ಆಶ್ವಾಸನೆಗಳು, ಒಣ ಭರವಸೆ ಅಲ್ಲ ಎಂಬುದು ನನ್ನ ಕ್ಷೇತ್ರದ ಮತದಾರರಿಗೆ ತಿಳಿದಿದೆ. ಬಿಜೆಪಿಯ ಮೇಲೆ ಜನರಿಗೆ ಪೂರ್ಣ ಭರವಸೆ ಇದೆ. ಶಿಕ್ಷಕರು ಮತ್ತಿತರ ಇಲಾಖೆಗಳ ಸಿಬ್ಬಂದಿ ಸಮಸ್ಯೆಗಳತ್ತ ಸದನದ ಗಮನ ಸೆಳೆದು, ಪರಿಹಾರ ಪಡೆದಿರುವೆ. ಜನರಿಗೆ ನನ್ನ ಕ್ರಿಯಾಶಕ್ತಿಯ ಮೇಲೆ ನಂಬಿಕೆ ಇದೆ. ಆಯ್ಕೆ ಕಷ್ಟವೇನಲ್ಲ.

*ಕ್ಷೇತ್ರದಲ್ಲಿ ಹೊಸತನ ಬೇಕು ಎನ್ನುವ ಮಾತು ಕೇಳುತ್ತಿದೆಯಲ್ಲ?

ಇಲ್ಲ. ನಾನೀಗ 32 ತಾಲ್ಲೂಕುಗಳಲ್ಲಿ ಬಹುತೇಕ ಎಲ್ಲ ತಾಲ್ಲೂಕುಗಳನ್ನೂ ಸುತ್ತುಹಾಕಿರುವೆ. ಒಂದೆರಡು ಉಳಿದಿರಬಹುದು. ಎಲ್ಲಿಯೂ ಯಾರೂ ಹೊಸತನಕ್ಕೆ ತುಡಿಯುತ್ತಿಲ್ಲ. ಸದನದಲ್ಲಿ ನಾನು ನನ್ನ ಮತದಾರರ ಧ್ವನಿಯಾಗಿರುವೆ. ನಿವೃತ್ತಿಯಿಂದ, ಅಕಾಲಿಕ ಮರಣದಿಂದ ಖಾಲಿಯಾದ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯಿಸಿರುವುದು ಎಲ್ಲರಿಗೂ ತಿಳಿದಿದೆ. ನಿರುದ್ಯೋಗ ನಿವಾರಣೆಗೆ ಉದ್ಯೋಗ ಮೇಳಗಳನ್ನೂ ಆಯೋಜಿಸಿದ್ದೆ. ಹಾಗಾಗಿ ಹೊಸತನ ಬೇಕೆನ್ನುವುದು ಪದವೀಧರರ ಸಮಸ್ಯೆಗಳಿಗೆ ಪರಿಹಾರ ಸ್ವರೂಪ ಆಗಿರಬಹುದು ಅಷ್ಟೆ. ವ್ಯಕ್ತಿ ಬದಲಾವಣೆಯಲ್ಲಿ ಯಾರಿಗೂ ನಂಬಿಕೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.