ADVERTISEMENT

ಪಿಎಫ್‌ಐ ನಿಷೇಧಕ್ಕೆ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದರೇ?: ಎನ್‌.ರವಿಕುಮಾರ್

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 16:10 IST
Last Updated 2 ನವೆಂಬರ್ 2025, 16:10 IST
ಎನ್‌.ರವಿಕುಮಾರ್
ಎನ್‌.ರವಿಕುಮಾರ್   

ಬೆಂಗಳೂರು: ‘ಪಿಎಫ್‌ಐ ಮತ್ತು ಎಸ್‌ಡಿಪಿಐನಂತಹ ಸಮಾಜಘಾತುಕ ಸಂಘಟನೆಗಳನ್ನು ನಿಷೇಧ ಮಾಡಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಎಂದಾದರೂ ಕೇಳಿದ್ದಾರೆಯೇ’ ಎಂದು ವಿಧಾನ ಪರಿಷತ್ತಿನ ವಿರೋಧಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್ ಪ್ರಶ್ನಿಸಿದ್ದಾರೆ.

ಭಾನುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಆರ್‌ಎಸ್‌ಎಸ್‌ ನಿಷೇಧಿಸಬೇಕು ಎಂಬ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಖಂಡನೀಯ. ಸಮಾಜಘಾತುಕ ಸಂಘಟನೆಗಳಾದ ಪಿಎಫ್‌ಐ ಮತ್ತು ಎಸ್‌ಡಿಪಿಐ ಅನ್ನು ನಿಷೇಧಿಸಬೇಕು. ಅದರ ಬದಲಿಗೆ ಈ ಸಂಘಟನೆಗಳ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದಿದೆ’ ಎಂದಿದ್ದಾರೆ.

‘ಕರಾವಳಿ ಕರ್ನಾಟಕ ಮತ್ತು ಕೇರಳದಲ್ಲಿ ನೂರಾರು ಹಿಂದೂ ಕಾರ್ಯಕರ್ತರ ಹತ್ಯೆ ಹಿಂದೆ ಈ ಎರಡು ಸಂಘಟನೆಗಳ ಕೈವಾಡವಿದೆ. ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಪೊಲೀಸ್‌ ಠಾಣೆ ಮತ್ತು ಪೊಲೀಸ್‌ ವಾಹನಗಳಿಗೆ ಬೆಂಕಿ ಹಚ್ಚಿದ ಪ್ರಕರಣಗಳಲ್ಲೂ ಈ ಸಂಘಟನೆಗಳು ಇದ್ದವು. ಆ ಪ್ರಕರಣಗಳನ್ನು ಹಿಂದೆ ಪಡೆದ ರಾಜ್ಯ ಸರ್ಕಾರದ ನಡೆಯನ್ನು ಮಲ್ಲಿಕಾರ್ಜುನ ಖರ್ಗೆ ಅವರು ಪ್ರಶ್ನಿಸಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

‘ನೂರು ವರ್ಷಗಳಿಂದ ದೇಶದ ಏಕತೆ, ಸಮಗ್ರತೆ, ಸಾಂಸ್ಕೃತಿಕ ಪುನರುಜ್ಜೀವನ, ಸಮಾಜ ಸೇವೆ ಮತ್ತು ಸಾಮಾಜಿಕ ಸೌಹಾರ್ದಕ್ಕಾಗಿ ಕೆಲಸ ಮಾಡುತ್ತಿರುವ ಆರ್‌ಎಸ್‌ಎಸ್‌ ಅನ್ನು ನಿಷೇಧಿಸುವಂತೆ ಖರ್ಗೆ ಅವರು ಹೇಳುತ್ತಿರುವುದು ವಿಪರ್ಯಾಸ ಮಾತ್ರವಲ್ಲ, ಸತ್ಯದ ತಿರುಚುವಿಕೆಯೂ ಹೌದು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.