ADVERTISEMENT

ಪ್ರವೀಣ್ ನೆಟ್ಟಾರು ಹತ್ಯೆಗೆ ಪಿಎಫ್ಐ ನಂಟು: ಎಡಿಜಿಪಿ ಅಲೋಕ್ ಕುಮಾರ್

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 13:43 IST
Last Updated 10 ಆಗಸ್ಟ್ 2022, 13:43 IST
ಎಡಿಜಿಪಿ ಅಲೋಕ್ ಕುಮಾರ್
ಎಡಿಜಿಪಿ ಅಲೋಕ್ ಕುಮಾರ್   

ಸುಳ್ಯ/ ಮಂಗಳೂರು: 'ಪ್ರವೀಣ್ ನೆಟ್ಟಾರು ಕೊಲೆಗೆ ಪತ್ಯಕ್ಷ ಮತ್ತು ಪರೋಕ್ಷವಾಗಿ ಸಹಕಾರ ಮಾಡಿದವರ ಮೇಲೂ ಕ್ರಮ ನಿಶ್ಚಿತ' ಎಂದು ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.

'ಕೆಲವು ಆರೋಪಿಗಳಿಗೆ ಪಿಎಫ್ ಐ ಸಂಪರ್ಕ‌ ಇದೆ. ಈ ಬಗ್ಗೆ ತನಿಖೆಯನ್ನು ಮಾಡುತ್ತಿದ್ದೇವೆ. ಯಾರಿಗೆಲ್ಲಾ ಪಿಎಫ್ಐ ಸಂಪರ್ಕ ಇದೆ ಎಂಬುವುದರ ಬಗ್ಗೆ ತನಿಖೆಯ ಬಳಿಕ ಹೇಳುತ್ತೇವೆ' ಎಂದರು. ಪ್ರವೀಣ್ ಕೊಲೆ ಪ್ರಕರಣದ ತನಿಖೆ ಬಗ್ಗೆ ಬೆಳ್ಳಾರೆಯಲ್ಲಿ ಅವರು ಪೊಲೀಸ್ ಅಧಿಕಾರಿಗಳ ಜೊತೆ ಬುಧವಾರ ಸಭೆ ನಡೆಸಿದರು.

ಬೆಳ್ಳಾರೆಗೆ ಭೇಟಿ ನೀಡುವ ಮುನ್ನ ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

ADVERTISEMENT

' ಆರೋಪಿಗಳಿಗೆ ಪಿಎಫ್ಐ ಜೊತೆ ನಂಟು ಇರುವ ವಿಚಾರಕ್ಕೆ ಸಂಬಂಧಿಸಿ‌ ನಾವು ಯಾವುದೇ ದಾಖಲೆ ಇಲ್ಲದೇ ಮಾತನಾಡುವುದಿಲ್ಲ. ದಾಖಲೆ ಜೊತೆಗೆ ಮಾತನಾಡುತ್ತೇವೆ' ಎಂದರು.

'ಪ್ರವೀಣ್ ಹತ್ಯೆಯ ಪ್ರಮುಖ ಆರೋಪಿಗಳ ಸಂಪೂರ್ಣ ಮಾಹಿತಿ ಇದೆ, ಅವರ ಫೋಟೊ,ಮನೆ ವಿಳಾಸ, ತಂದೆ-ತಾಯಿ, ಹೆಂಡತಿ ಸೇರಿದಂತೆ ಕುಟುಂಬದವರ ಮಾಹಿತಿಯೂ ಲಭ್ಯವಿದೆ. ಪ್ರಮುಖ ಆರೋಪಿಗಳನ್ನು ಬಚ್ಚಿಡುವ ಕೆಲಸ ನಡೆಯುತ್ತಿದೆ. ಆಗಾಗ ಅವರ ಸ್ಥಳ ಬದಲಾವಣೆ ಮಾಡಲಾಗುತ್ತಿದೆ.

ಪೊಲೀಸರ ದಾಳಿ ವೇಳೆ ಪ್ರಮುಖ ಆರೋಪಿಗಳು ಪರಾರಿಯಾಗುತ್ತಿದ್ದಾರೆ' ಎಂದು ತಿಳಿಸಿದರು.'ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಎನ್ .ಐ. ಎ. ಅಧಿಕಾರಿಗಳ‌ ಜೊತೆ ಸೇರಿ ಕರ್ನಾಟಕ‌ ಪೊಲೀಸರ ತಂಡ ತನಿಖೆ ನಡೆಸುತ್ತಿದೆ. ಮುಖ್ಯ ಆರೋಪಿಗಳ ದಸ್ತಗಿರಿ ಸಲುವಾಗಿ ಬೇರೆ ಬೇರೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಂಗಳೂರಿನ ಕಾನೂನು ಸುವ್ಯವಸ್ಥೆ ಬಗ್ಗೆಯೂ ಸಭೆ ನಡೆಸುತ್ತೇವೆ' ಎಂದರು.

'ನ್ಯಾಯಾಲಯದ ಮೂಲಕ ವಾರೆಂಟ್ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ, ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕುವ ಪ್ರಕ್ರಿಯೆ ನಡೆಯುತ್ತಿದೆ' ಎಂದು ತಿಳಿಸಿದರು.

'ಈಗಾಗಲೇ ಪ್ರಕರಣ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಪ್ರಕರಣಕ್ಕೆ ಕೇರಳದ ನಂಟು ಇರುವ ಬಗ್ಗೆ ಹೇಳಲು ಸಾಧ್ಯವಿಲ್ಲ. ಈಗ ಬಂಧನವಾಗಿರುವ ಏಳು ಮಂದಿಯೂ ಸ್ಥಳೀಯರೇ ಆಗಿದ್ದಾರೆ. ಅವರಿಗೆ ನಿರ್ದೇಶನ ಕೊಟ್ಟಿರುವುದು ಯಾರು ಎಂಬುವುದರ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡುತ್ತೇವೆ' ಎಂದರು. 'ಬೆಳ್ಳಾರೆಯಲ್ಲಿ ಈ ಎಲ್ಲಾ ವಿಚಾರಗಳ ಬಗ್ಗೆ ಸಭೆಯನ್ನು ಮಾಡುತ್ತೇವೆ. ಎನ್ ಐ ಎ ಅಧಿಕಾರಿಗಳು, ಮಂಡ್ಯ, ಚಾಮರಾಜನಗರ ಹಾಸನ, ಚಿಕ್ಕಮಗಳೂರು, ಉಡುಪಿ,ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಸಭೆ ಮಾಡುತ್ತೇನೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.