ADVERTISEMENT

ಫಾರ್ಮಸಿ ಇನ್ಸ್‌ಪೆಕ್ಟರ್ ನೇಮಕಾತಿಯ ಅರ್ಹತಾ ನಿಯಮಕ್ಕೆ ಕ್ಯಾಬಿನೆಟ್ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 15:53 IST
Last Updated 15 ಡಿಸೆಂಬರ್ 2021, 15:53 IST
   

ಬೆಂಗಳೂರು: ‘ರಾಜ್ಯದಲ್ಲಿ ಫಾರ್ಮಸಿ ಇನ್ಸ್‌ಪೆಕ್ಟರ್ ನೇಮಕಾತಿಗೆ ಅರ್ಹತಾ ನಿಯಮಗಳನ್ನು ರೂಪಿಸಲಾಗಿದ್ದು, ಸಚಿವ ಸಂಪುಟ ಇದಕ್ಕೆ ಅನುಮೋದನೆ ನೀಡಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

‘ರಾಜ್ಯದಲ್ಲಿ, ಫಾರ್ಮಸಿ ಕಾಯ್ದೆ-1948ರ ವಿವಿಧ ನಿಯಮಗಳನ್ನು ಜಾರಿಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಅಶೋಕ್ ಸ್ವಾಮಿ ಹೆರೂರ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರು, ಫಾರ್ಮಸಿ ಇನ್ಸ್‌ಪೆಕ್ಟರ್ ನೇಮಕಾತಿಗೆ ಅರ್ಹತಾ ನಿಯಮಗಳನ್ನು ರೂಪಿಸಲಾಗಿದೆ. ಆ ನಿಯಮಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಸದ್ಯ ಸಹಿಗಾಗಿ ಸಂಬಂಧಪಟ್ಟ ಸಚಿವರ ಮುಂದೆ ಕಡತವನ್ನು ಇರಿಸಲಾಗಿದ್ದು, ಶೀಘ್ರದಲ್ಲೇ ನಿಯಮಗಳನ್ನು ಪ್ರಕಟಿಸಲಾಗುವುದು’ ಎಂದು ಮಾಹಿತಿ ನೀಡಿದರು.

ADVERTISEMENT

ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ನಿಯಮಗಳನ್ನು ಪ್ರಕಟಿಸಲು ಸರ್ಕಾರಕ್ಕೆ ಕಾಲಾವಕಾಶ ನೀಡಿ ವಿಚಾರಣೆಯನ್ನು 2022ರ ಫೆಬ್ರುವರಿ 2ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.