ADVERTISEMENT

ಧರ್ಮಸ್ಥಳ, ತಿರುಪತಿಯಲ್ಲಿ ದೀಪ ಆರಿದ ವದಂತಿ: ಮನೆಗಳೆದುರು ದೀಪ ಬೆಳಗಿದ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 4:31 IST
Last Updated 27 ಮಾರ್ಚ್ 2020, 4:31 IST
   

ಚಿತ್ರದುರ್ಗ/ಕೂಡ್ಲಿಗಿ: ಧರ್ಮಸ್ಥಳ, ತಿರುಪತಿ, ಶ್ರೀಶೈಲದಂಥ ತೀರ್ಥ ಕ್ಷೇತ್ರಗಳಲ್ಲಿ ದೀಪ ಆರಿದೆ ಎಂಬ ವದಂತಿ ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಆವರಿಸಿದ್ದು ಮಹಿಳೆಯರು ತಮ್ಮ ಮನೆಗಳ ಎದುರು ರಾತ್ರಿ ದೀಪಗಳನ್ನು ಬೆಳಗಿದ್ದಾರೆ.

ಶ್ರೀಶೈಲದಲ್ಲಿ ದೀಪ ನಂದಿದೆ ಎಂಬ ವದಂತಿ

ಕೂಡ್ಲಿಗಿ: ಶ್ರೀಶೈಲದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದೀಪ ನಂದಿದೆ. ಅದ್ದರಿಂದ ತಮ್ಮ ತಮ್ಮ ಮನೆಗಳ ಬಾಗಿಲ ಮುಂದೆ ನಾಲ್ಕು ದೀಪಗಳನ್ನು ಹಚ್ಚಿ ಇಡಬೇಕು ಎಂಬ ವದಂತಿ ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕೂಡ್ಲಿಗಿ ತಾಲ್ಲೂಕುಗಳಲ್ಲಿ ಹರಡಿದೆ.
ಇದರಿಂದ ಮಹಿಳೆಯರು ಮನೆಯ ಮುಂದೆ ಕಸ ಗೂಡಿಸಿ, ಸೆಗಣಿ ಸಾರಿಸಿ, ರಂಗೋಲೊ ಹಾಕಿ ವೀಳ್ಯದೆಲೆ ಅಥವಾ ಎಕ್ಕೆ ಎಲೆ ಇಟ್ಟು ನಾಲ್ಕು ದೀಪಗಳನ್ನು ಹಚ್ಚುತಿರುವುದು ಕಂಡು ಬಂದಿದೆ.

ADVERTISEMENT

ಸ್ಪಷ್ಟನೆ: ಈ ಬಗ್ಗೆ ಶ್ರೀಶೈಲ ಮಠಕ್ಕೆ ಪೋನ್ ಮಾಡಿ ವಿಚಾರಿಸಿದಾಗ "ಅಂತಃ ಯಾವುದೇ ಅವಘಡ ನಡೆದಿಲ್ಲ. ಎಂದಿನಂತೆ ಶ್ರೀಮಠದಲ್ಲಿ ಪೂಜಾ ಕಂಕಾರ್ಯಗಳು ನಡೆದಿವೆ ಎಂದು ಶ್ರೀಮಠದ ವಿಚಾರಣ ವಿಭಾಗದ ಸಿಬ್ಬಂದಿ ಸ್ಪಷ್ಟ ಪಡಿಸಿದ್ದಾರೆ.

ಧರ್ಮಸ್ಥಳ, ತಿರುಪತಿ ದೇಗುಲ ದೀಪ ಆರಿದ ವದಂತಿ

ಚಿತ್ರದುರ್ಗ: ಧರ್ಮಸ್ಥಳ ಮತ್ತು ತಿರುಪತಿ ದೇಗುಲದಲ್ಲಿ ದೀಪ ಆರಿ ಹೋಗಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಮಧ್ಯರಾತ್ರಿ ಮನೆ ಅಂಗಳದಲ್ಲಿ ದೀಪ ಹಚ್ಚಿರುವುದು ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಮತ್ತು ಮೊಳಕಾಲ್ಮುರು ತಾಲ್ಲೂಕಿನಲ್ಲಿ ನಡೆದಿದೆ.

ದೇಗುಲದ ದೀಪ ಆರಿ ಹೋಗಿರುವುದು ಅಪಶಕುನದ ಸಂಕೇತ ಎಂಬ ವದಂತಿ ಗ್ರಾಮೀಣ ಪ್ರದೇಶದಲ್ಲಿ ಹಬ್ಬಿದೆ. ಕಿಡಿಗೇಡಿಗಳು ದೂರವಾಣಿ ಕರೆ ಮಾಡಿ ಜನರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಮಧ್ಯರಾತ್ರಿ ಎದ್ದು ಮನೆಯಂಗಳ ಸಾರಿಸಿದ ಮಹಿಳೆಯರು ದೀಪ ಹಚ್ಚಿಟ್ಟರು. ದೀಪ ಆರದಂತೆ ನೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.