ADVERTISEMENT

ಒಂಬತ್ತು ಜಿಲ್ಲೆಗಳಲ್ಲಿ ನರೇಗಾ ಅಡಿ ಜಲಮೂಲ ಅಭಿವೃದ್ಧಿಗೆ ಯೋಜನೆ

ರವಿಶಂಕರ ಗುರೂಜಿ ಜೊತೆ ಸಚಿವ ಕೆ.ಎಸ್‌. ಈಶ್ವರಪ್ಪ ಚರ್ಚೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 8:40 IST
Last Updated 16 ಏಪ್ರಿಲ್ 2020, 8:40 IST
ಶ್ರೀ ರವಿಶಂಕರ ಗುರೂಜಿ ಜೊತೆ ಸಚಿವ ಕೆ.ಎಸ್‌. ಈಶ್ವರಪ್ಪ ಚರ್ಚೆ ನಡೆಸಿದರು
ಶ್ರೀ ರವಿಶಂಕರ ಗುರೂಜಿ ಜೊತೆ ಸಚಿವ ಕೆ.ಎಸ್‌. ಈಶ್ವರಪ್ಪ ಚರ್ಚೆ ನಡೆಸಿದರು   

ಬೆಂಗಳೂರು: ರಾಜ್ಯದ ಆಯ್ದ ಒಂಬತ್ತು ಜಿಲ್ಲೆಗಳಲ್ಲಿ ಜಲಮೂಲ ಅಭಿವೃದ್ಧಿ ಮತ್ತು ಅಂತರ್ಜಲಮಟ್ಟ ಹೆಚ್ಚಿಸುವ ಯೋಜನೆಗಳನ್ನು ಉದ್ಯೋಗ ಖಾತ್ರಿ (ನರೇಗಾ) ಬಳಸಿಕೊಂಡು ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಸಹಯೋಗದಲ್ಲಿ ಕೈಗೊಳ್ಳುವ ಸಂಬಂಧ ಶ್ರೀ ರವಿಶಂಕರ ಗುರೂಜಿ ಜೊತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಸುದೀರ್ಘವಾಗಿ ಚರ್ಚೆ ನಡೆಸಿದರು.

ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆಗೆ ಗುರುವಾರ ಬೆಳಿಗ್ಗೆ ಭೇಟಿ ನೀಡಿದ ಸಚಿವರು, ನದಿ, ಹಳ್ಳ-ಕೊಳ್ಳಗಳ ಪಾತ್ರ ಮತ್ತು ಕೆರೆ-ಕಟ್ಟೆ, ಚೆಕ್ ಡ್ಯಾಂಗಳ ಪಾತ್ರಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಕುರಿತು ಚರ್ಚೆ ‌ನಡೆಸಿದರು.

ಶಿವಮೊಗ್ಗ, ಉಡುಪಿ, ಉತ್ತರಕನ್ನಡ, ಚಿತ್ರದುರ್ಗ, ಬಳ್ಳಾರಿ, ಕೋಲಾರ, ಕೊಡಗು, ತುಮಕೂರು, ಚಿಕ್ಕಬಳ್ಳಾಪುರ ಈ ಒಂಬತ್ತು ಜಿಲ್ಲೆಗಳಲ್ಲಿ ಈ ಯೋಜನೆ ಕಾರ್ಯಗತಗೊಳಿಸುವ ಸಂಬಂಧ ಆರ್ಟ್ ಆಫ್‌ ಲಿವಿಂಗ್‌ ಸಂಸ್ಥೆಯ ಜೊತೆ ಒಡಂಬಡಿಕೆ (ಎಂಒಯು) ಮಾಡಿಕೊಳ್ಳಲಾಗಿದೆ.

ADVERTISEMENT

ಭೀಕರ ಬರಗಾಲಕ್ಕೆ ತುತ್ತಾಗಿದ್ದ ಮಹಾರಾಷ್ಟ್ರದ ಲಾತೂರು ಜಿಲ್ಲೆಯಲ್ಲಿ ರೈಲು ಮತ್ತು ಟ್ರಾಕ್ಟ್ರರ್‌ಗಳ ಮೂಲಕ ನೀರು ಸಾಗಿಸಲಾಗುತ್ತಿತ್ತು. ಅಲ್ಲಿ ಆರ್ಟ್‌ ಆಫ್‌ ಲಿವಿಂಗ್‌ನ ಜಲತಜ್ಞರ ತಂಡ 40 ನದಿ ಮೂಲಗಳನ್ನು ಅಭಿವೃದ್ಧಿಪಡಿಸುವ ಮೂಲಕ ಜಲ ಸಂಪನ್ಮೂಲ ವೃದ್ಧಿಗೆ ಕಾರಣರಾಗಿದ್ದರು. ಅದೇ ರೀತಿ ರಾಜ್ಯದಲ್ಲಿಯೂ ತೀವ್ರ ಬರ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ಜಲ ಸಂಪನ್ಮೂಲ ವೃದ್ಧಿಗೆ ಯೋಜನೆಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.

ನೀರು ಇಂಗಿಸುವ ರೀತಿ, ಗಿಡಮರಗಳನ್ನು ನೆಟ್ಟು ಮಳೆ ನೀರಿಗೆ ತಡೆ ಒಡ್ಡುವ ನಿಟ್ಟಿನಲ್ಲಿ ತಾಂತ್ರಿಕ ಜ್ಞಾನ ಬಳಸಿಕೊಳ್ಳುವ ಬಗ್ಗೆ ಮತ್ತು ನರೇಗಾ ಕಾಮಗಾರಿಗಳನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳುವ ಕುರಿತು ರವಿಶಂಕರ ಗುರೂಜಿ ಮತ್ತು ಅಲ್ಲಿನ ಜಲ ತಜ್ಞರ ಜೊತೆ ಸಚಿವರು ಚರ್ಚೆ ನಡೆಸಿದರು. ಸ್ಯಾಟಲೈಟ್‌ ಚಿತ್ರಗಳ ಆಧಾರದಲ್ಲಿ ಜಲ ಸಂಪನ್ಮೂಲ ವೃದ್ಧಿಯ ಸ್ಥಳಗಳನ್ನು ಗುರುತಿಸಿ ಕ್ರಿಯಾಯೋಜನೆಗಳನ್ನು ಸಿದ್ಧಪಡಿಸುವ ಬಗ್ಗೆಯೂ ಮಾತುಕತೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.