
‘ಆವಾಸ್’ ಯೋಜನೆ
ನವದೆಹಲಿ: ನಗರ ಪ್ರದೇಶದಲ್ಲಿ ಮನೆ ಇಲ್ಲದವರಿಗೆ ವಸತಿ ಒದಗಿಸುವ ಪ್ರಧಾನಮಂತ್ರಿ ಆವಾಸ್ ಯೋಜನೆಯು ಕರ್ನಾಟಕದಲ್ಲಿ ತೆವಳುತ್ತಾ ಸಾಗಿದೆ. ರಾಜ್ಯಕ್ಕೆ ಮಂಜೂರಾಗಿರುವ 2.74 ಲಕ್ಷ ಎಎಚ್‌ಪಿ ಮನೆಗಳ ಪೈಕಿ ಈವರೆಗೆ 1.26 ಲಕ್ಷ ಮನೆಗಳಷ್ಟೇ ಪೂರ್ಣಗೊಂಡಿವೆ.
ನಗರದ ಅರ್ಹ ಫಲಾನುಭವಿಗಳಿಗೆ ವಸತಿ ಕಲ್ಪಿಸುವ ಉದ್ದೇಶದಿಂದ ಈ ಯೋಜನೆಗೆ 2015ರ ಜೂನ್‌ನಲ್ಲಿ ಚಾಲನೆ ನೀಡಿತ್ತು. ಮೊದಲ ಹಂತದ ಯೋಜನೆ 2022ರಲ್ಲಿ ಮುಕ್ತಾಯಗೊಳ್ಳಬೇಕಿತ್ತು. ಯೋಜನೆಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದ ಕಾರಣ ಯೋಜನೆಯನ್ನು 2025ರ ಡಿಸೆಂಬರ್ ಅಂತ್ಯದ ವರೆಗೆ ವಿಸ್ತರಿಸಲಾಗಿತ್ತು. ರಾಜ್ಯದಲ್ಲಿ ಮೊದಲ ಹಂತದ ಯೋಜನೆಯನ್ನು 2026ರ ಡಿಸೆಂಬರ್ ಅಂತ್ಯದ ವರೆಗೆ ವಿಸ್ತರಿಸಬೇಕು ಎಂದು ರಾಜ್ಯ ವಸತಿ ಇಲಾಖೆಯು ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದು ಮನವಿ ಮಾಡಿತ್ತು. ಇದಕ್ಕೆ ಸಚಿವಾಲಯ ಸಮ್ಮತಿ ಸೂಚಿಸಿಲ್ಲ.
ಯೋಜನೆಯ ಮಾರ್ಗಸೂಚಿಯ ಪ್ರಕಾರ, ಕೇಂದ್ರ ಸರ್ಕಾರವು ಮೂರು ಕಂತುಗಳಲ್ಲಿ ಅನುದಾನ ಬಿಡುಗಡೆ ಮಾಡುತ್ತದೆ. ರಾಜ್ಯದಲ್ಲಿ 2.74 ಲಕ್ಷ ಎಎಚ್‌ಪಿ ಮನೆಗಳು ಸೇರಿದಂತೆ 5.74 ಲಕ್ಷ ಮನೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು ₹9,696 ಕೋಟಿ ಅನುದಾನ ಮಂಜೂರು ಮಾಡಿತ್ತು. ಆದರೆ, ಡಿಸೆಂಬರ್ ಅಂತ್ಯದ ವರೆಗೆ ರಾಜ್ಯಕ್ಕೆ ಬಿಡುಗಡೆ ಮಾಡಿರುವ ಅನುದಾನ ₹7,379 ಕೋಟಿ ಅನುದಾನ ಮಾತ್ರ. ಕೇಂದ್ರದ ಪಾಲು ₹2,317 ಕೋಟಿ ಬರಬೇಕಿದೆ. ಮೊದಲ ಹಂತದ ಯೋಜನೆ ಮುಕ್ತಾಯಗೊಂಡಿರುವುದರಿಂದ ಕೇಂದ್ರದ ಪಾಲಿನಲ್ಲಿ ಖೋತಾ ಆಗುವ ಸಂಭವ ಇದೆ.
ಬಳಕೆ ಪ್ರಮಾಣಪತ್ರ ಸಲ್ಲಿಕೆ, ಫಲಾನುಭವಿಗಳ ಆಧಾರ್ ಜೋಡಣೆ, ಸ್ವತಂತ್ರ ಸಂಸ್ಥೆಯಿಂದ ಗುಣಮಟ್ಟ ಪರಿಶೀಲನೆ, ಮನೆಗಳ ಪ್ರಗತಿಯ ಜಿಯೊಟ್ಯಾಗಿಂಗ್, ರೇರಾ ನೋಂದಣಿ ಮತ್ತಿತರ ಷರತ್ತುಗಳನ್ನು ಪಾಲಿಸಿದರಷ್ಟೇ ಕೇಂದ್ರದ ಸಹಾಯಧನ ಬಿಡುಗಡೆ ಮಾಡಲಾಗುತ್ತದೆ. ರಾಜ್ಯ ಸರ್ಕಾರ ಸಲ್ಲಿಸಿರುವ ದಾಖಲೆಗಳ ಆಧಾರದಲ್ಲಿ ಕೇಂದ್ರದ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.
ಕೇಂದ್ರದ ಪಾಲು ಹೆಚ್ಚಿಸಿ: ರಾಜ್ಯ ಒತ್ತಾಯ
ಕೋವಿಡ್ ಲಾಕ್‌ಡೌನ್, ಭೂಮಿ ಹಂಚಿಕೆಯಲ್ಲಿ ವಿಳಂಬ, ಭೂ ವಿವಾದ, ನ್ಯಾಯಾಲಯಗಳಲ್ಲಿ ಪ್ರಕರಣ ಮತ್ತಿತರ ಕಾರಣಗಳಿಂದಾಗಿ ಎಎಚ್‌ಪಿ ಮನೆಗಳ ನಿರ್ಮಾಣ ವಿಳಂಬವಾಗಿದೆ ಎಂಬುದು ರಾಜ್ಯ ವಸತಿ ಇಲಾಖೆಯ ವಾದ. ಜತೆಗೆ, ಆರ್ಥಿಕ ದುರ್ಬಲ ವರ್ಗಗಳ ಫಲಾನುಭವಿಗಳು ತಮ್ಮ ಪಾಲನ್ನು ಪಾವತಿಸಲು ತೊಂದರೆ ಅನುಭವಿಸಿದರು. ಬಡ ಫಲಾನುಭವಿಗಳಿಗೆ ಸಾಲ ನೀಡಲು ಬ್ಯಾಂಕ್‌ಗಳು ಹಿಂಜರಿಯುತ್ತಿವೆ. ಇದರಿಂದ ಸಹ ಸಮಸ್ಯೆ ಆಗಿದೆ ಎಂದು ಇಲಾಖೆ ಹೇಳಿಕೊಂಡಿದೆ.
ಪ್ರತಿ ಮನೆ ನಿರ್ಮಾಣಕ್ಕೆ ₹7 ಲಕ್ಷ ವೆಚ್ಚ ಆಗಲಿದೆ. ಕೇಂದ್ರ ಸರ್ಕಾರ ಪ್ರತಿ ಮನೆಗೆ ₹1.50 ಲಕ್ಷ ಕೊಡುತ್ತಿದೆ. ಈ ಮೊತ್ತ ಏನೇನೂ ಸಾಲದು. ಎರಡನೇ ಹಂತದ ಯೋಜನೆಯಲ್ಲಿ ಈ ಮೊತ್ತವನ್ನು ₹2 ಲಕ್ಷಕ್ಕೆ ಏರಿಸಬೇಕು ಎಂದು ವಸತಿ ಇಲಾಖೆಯು ವಸತಿ ಸಚಿವಾಲಯಕ್ಕೆ ಪತ್ರ ಬರೆದು ಒತ್ತಾಯಿಸಿದೆ.