ADVERTISEMENT

ಪಿ.ಎಂ ಕಿಸಾನ್‌ ಸಮ್ಮಾನ್ ಕರ್ನಾಟಕ: ರೈತರ ಕೈಸೇರದ ಎರಡನೇ ಕಂತು

ಹಣದ ನಿರೀಕ್ಷೆಯಲ್ಲಿ ಅನ್ನದಾತರು

ರವಿ ಎಸ್.ಬಳೂಟಗಿ
Published 31 ಮಾರ್ಚ್ 2021, 22:13 IST
Last Updated 31 ಮಾರ್ಚ್ 2021, 22:13 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಹುಬ್ಬಳ್ಳಿ: ರೈತರಿಗೆ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಜಾರಿಗೊಳಿಸಿರುವ ‘ಪಿ.ಎಂ ಕಿಸಾನ್‌ ಸಮ್ಮಾನ್ ಕರ್ನಾಟಕ’ ಯೋಜನೆಯ ಎರಡನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಇನ್ನೂ ಜಮೆ ಆಗಿಲ್ಲ.

2020–21ನೇ ಆರ್ಥಿಕ ವರ್ಷದಲ್ಲಿ 2ನೇ ಕಂತಿನಲ್ಲಿ ರಾಜ್ಯದ 51,66,395 ಫಲಾನುಭವಿಗಳಿಗೆ ₹1,033.28 ಕೋಟಿ ಹಣ ಪಾವತಿ ಮಾಡಬೇಕಾಗಿದೆ.

ರೈತರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ವರ್ಷಕ್ಕೆ ₹6,000 ಹಣವನ್ನು ಮೂರು ಸಮಾನ ಕಂತುಗಳಲ್ಲಿ ಹಾಗೂ ರಾಜ್ಯ ಸರ್ಕಾರ ₹4,000ವನ್ನು ಎರಡು ಕಂತುಗಳಲ್ಲಿ ಜಮೆ ಮಾಡುತ್ತಿವೆ. ಕೇಂದ್ರದ ನೆರವು ಖಾತೆಗೆ ಜಮೆಯಾದ ಬಗ್ಗೆ ಮೊಬೈಲ್‌ಗೆ ಸಂದೇಶ ಬಂದಿದೆ. ಆದರೆ, ರಾಜ್ಯದಪಾಲು ಖಾತೆಗೆ ಬಾರದಿರುವುದಕ್ಕೆ ಹಲವು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ಸಂಪನ್ಮೂಲ ಕೊರತೆ: ‘ಪಿ.ಎಂ ಕಿಸಾನ್‌ ಸಮ್ಮಾನ್ ಕರ್ನಾಟಕ’ ಯೋಜನೆಯಡಿ ಆರ್ಥಿಕ ನೆರವು ಪಾವತಿಸಲು ಅನುದಾನ ಬಿಡುಗಡೆ ಆಗಿಲ್ಲ. ಹೆಚ್ಚುವರಿ ಆರ್ಥಿಕ ಸಹಾಯಧನ ಬಿಡುಗಡೆ ಮಾಡಬೇಕು’ ಎಂದು ಕೃಷಿ ಇಲಾಖೆಯ ಆಯುಕ್ತರು ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಬಾಕಿಯೂ ಇದೆ: ಹಲವು ರೈತರಿಗೆ ಮೊದಲ ಕಂತಿನ ಹಣವೇ ಇನ್ನೂ ತಲುಪಿಲ್ಲ. ವಿವಿಧ ಜಿಲ್ಲೆಗಳ 56,665 ರೈತರಿಗೆ ₹11.33 ಕೋಟಿ ಬಾಕಿ ನೀಡಬೇಕಾಗಿದೆ. ‘ಬಾಕಿ ಹಣ ಹಾಗೂ ಎರಡನೇ ಕಂತಿನ ನೆರವು ನೀಡಲು ಒಟ್ಟು ₹1,044.61 ಕೋಟಿ ಅನುದಾನದ ಅವಶ್ಯಕತೆ ಇದೆ. ಇದನ್ನು ಬಿಡುಗಡೆ ಮಾಡುವಂತೆ ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ‘ಸಂಪನ್ಮೂಲ ಕ್ರೋಡೀಕರಿಸಲು‌ ಕೋವಿಡ್ ಅಡ್ಡಿ
ಯಾಗಿದೆ. ಇದರಿಂದಾಗಿಯೇ ರೈತರಿಗೆ ನೀಡಲು ಆಗಿಲ್ಲ’ ಎನ್ನುತ್ತವೆ ಮೂಲಗಳು‌.

‘ಇಲಾಖೆಯ ಪೋರ್ಟಲ್‌ನಲ್ಲಿ ನೋಂದಣಿಯಾಗಿರುವ ರೈತರು ನೀಡಿದ ಮಾಹಿತಿಯನ್ನು ಪರಿಶೀಲನೆ ಮಾಡಲಾಗುತ್ತಿದೆ. ಅನರ್ಹ ರೈತರ ಖಾತೆಗೆ ಹಣವೇನಾದರೂ ಹೋಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಇದರಿಂದಾಗಿ ತಡವಾಗಿದೆ’ ಎಂದು ಕೃಷಿ
ಇಲಾಖೆಯ ಧಾರವಾಡದ ಜಂಟಿ ನಿರ್ದೇಶಕ ಡಾ.ರಾಜಶೇಖರ ಬಿಜಾಪುರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲ ಕಂತು ಜಮೆಯಾದ ಆರು ತಿಂಗಳ‌ ನಂತರ ಎರಡೇ ಕಂತಿನ ಹಣ ಬರುತ್ತದೆ’ ಎಂದು ಅಣ್ಣಿಗೇರಿಯ ಸಹಾಯಕ ಕೃಷಿ ನಿರ್ದೇಶಕ ಶ್ರೀನಾಥ ಚಿಮ್ಮೂಲಗಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.