ADVERTISEMENT

ರೈತರ ಸಾಲಮನ್ನಾ ಮಾಡುವ ಬದಲು ವಾರಂಟ್‌ ಜಾರಿಮಾಡುತ್ತಿದೆ ಮೈತ್ರಿ ಸರ್ಕಾರ– ಮೋದಿ

ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 3 ಮೇ 2019, 16:52 IST
Last Updated 3 ಮೇ 2019, 16:52 IST
   

ಚಿತ್ರದುರ್ಗ: ಮೈತ್ರಿ ಸರ್ಕಾರ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ, ಅದನ್ನು ಪೂರ್ಣಗೊಳಿಸಲು ವಿಫಲವಾಗಿದೆ. ಸಾಲ ಮನ್ನಾ ಮಾಡುವ ಬದಲು ವಾರಂಟ್‌ ಜಾರಿ ಮಾಡಿದೆ ಎಂದು ಕಾಂಗ್ರೆಸ್‌–ಜೆಡಿಎಸ್ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.

ಇಲ್ಲಿನ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಬಿಜೆಪಿ ಆಯೋಜಿಸಿದ್ದ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ನಾವು ಪಾಕಿಸ್ತಾನದಲ್ಲಿ ಉಗ್ರರ ಮೇಲೆ ದಾಳಿ ನಡೆಸಿದೆವು. ಆದರೆ ಭಾರತದಲ್ಲಿ ಕೆಲವರಿಗೆ ನೋವುಂಟಾಯಿತು. ಇಲ್ಲಿನ ಮುಖ್ಯಮಂತ್ರಿ ಒಂದು ಹಜ್ಜೆ ಮುಂದೆ ಹೋಗಿ, 'ಭದ್ರತಾ ಪಡೆಗಳ ಪರಾಕ್ರಮದ ಬಗೆಗೆ ಪ್ರಸ್ತಾಪಿಸಬಾರದು, ಅದು ವೋಟ್‌ಬ್ಯಾಂಕ್‌ ಮೇಲೆ ಪರಿಣಾಮ ಉಂಟು ಮಾಡುತ್ತದೆ’ ಎಂದಿದ್ದರು.

ನಾನು ಅವರಿಗೆ ಕೇಳಲು ಬಯಸುತ್ತೇನೆ, 'ನಿಮ್ಮ ಮತ ಬ್ಯಾಂಕ್‌ ಭಾರತದಲ್ಲಿಯೇ ಅಥವಾ ಪಾಕಿಸ್ತಾನದಲ್ಲಿಯೋ’ ಎಂದು ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ADVERTISEMENT

ಕರ್ನಾಟಕದ ಸರ್ಕಾರವನ್ನು ಯಾರು ನಡೆಸುತ್ತಿದ್ದಾರೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಸ್ವಾರ್ಥದಿಂದಾಗಿ ಮೈತ್ರಿ ಮಾಡಿಕೊಂಡಿರುವ ಪಕ್ಷದ ಮುಖಂಡರು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡುತ್ತಿದ್ದಾರೆ. ಅವರನ್ನು ಸಮಾಧಾನ ಪಡಿಸಲು ಇವರು, ಹೀಗೆ ಸಮಾಧಾನಪಡಿಸುವುದರಲ್ಲಿಯೇ ದಿನ–ರಾತ್ರಿ ಕಳೆಯುತ್ತಿದ್ದಾರೆ. ಇಂಥ ನಿಸ್ಸಹಾಯಕ ಸರ್ಕಾರಕ್ಕೆ ಜನರಿಗೆ ಏನು ಬೇಕಾಗಿದೆ ಎಂಬುದು ಅವರಿಗೆ ಬೇಕಿಲ್ಲ ಎಂದರು.

ಇಂಥ ಮಹಾಮೈತ್ರಿ ಸರ್ಕಾರ, ಸರ್ಕಾರ ನಡೆಸುವ ಡಜನ್‌ ರಿಮೋಟ್‌ ಹೊಂದಿರುವ ಇಂಥ ಸರ್ಕಾರ ದೆಹಲಿಯಲ್ಲಿ ಕುಳಿತರೆ ಹೇಗಿರುತ್ತದೆ..? ಯೋಚಿಸಿ..

ದೇಶಕ್ಕಾಗಿ ಪರಾಕ್ರಮ ತೋರಿದವರು, ದೇಶಕ್ಕಾಗಿ ಸೇವೆ ಸಲ್ಲಿಸುವವರನ್ನು ಹೊಗಳಿದರೆ ಕಾಂಗ್ರೆಸ್–ಜೆಡಿಎಸ್ ಮೈತ್ರಿಗೆ ಆಗುತ್ತಿಲ್ಲ. ಕ್ಷಿಪಣಿ ಪರೀಕ್ಷೆ ನಡೆಸಲು ವಿಜ್ಞಾನಿಗಳಿಗೆ ಅನುಮತಿ ನೀಡುವ ಧೈರ್ಯವನ್ನು ಕಾಂಗ್ರೆಸ್ ತೋರಿರಲಿಲ್ಲ ಎಂದರು.

ದಾವಣಗೆರೆಯನ್ನು ಕರ್ನಾಟಕದ ಮ್ಯಾನ್‌ಚೆಸ್ಟೆರ್‌ ಎಂದ ಅವರು, ನಗರವನ್ನು ಸ್ಮಾರ್ಟ್‌ಸಿಟಿ ಮಾಡುವ ನಿಟ್ಟಿನಲ್ಲಿ ಸೂಕ್ತ ಯೋಜನೆ ರೂಪಿಸಲುಪಕ್ಷ ಬದ್ಧವಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರ ದೇಶದ ನಾಲ್ಕು ತಲೆಮಾರುಗಳಲ್ಲಿ ಅನ್ಯಾಯ ನಡೆಸಿದೆ. 2ಜಿ ಹಗರಣ, ಕಲ್ಲಿದ್ದಲು ಹಗರಣ, ಸಬ್‌ಮರೀನ್‌ ಹಗರಣಗಳ ಮೂಲಕ ದೇಶದ ವಿಶ್ವಾಸಾರ್ಹತೆಗೆ ಹಾನಿ ಮಾಡುವ ಮೂಲಕ ಸ್ವತಃ ಶ್ರೀಮಂತರಾದರು. ಅವರು ನ್ಯಾಯವನ್ನು ಎದುರಿಸಲಿದ್ದಾರೆ. ದೇಶದ ಕನಸು, ಸಂಪನ್ಮೂಲಗಳಿಗೆ ಹಾನಿ ಮಾಡಿದ ಕಾಂಗ್ರೆಸ್‌ನಂತಹ ಸರ್ಕಾರದ ಅವಶ್ಯಕತೆ ನಮಗಿಲ್ಲ ಎಂದು ಮೋದಿ ಆರೋಪಿಸಿದರು.

ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ, ಚೌಕಿದಾರ ಘೋಷಣೆಯೊಂದಿಗೆ ಕನ್ನಡದಲ್ಲಿಯೇ ಮಾತು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.