ADVERTISEMENT

ನೈಜತೆ ಪತ್ತೆಹಚ್ಚಲು ವಿಫಲ: ಕೃತಕ ಬುದ್ಧಿಮತ್ತೆ ಎಡವಟ್ಟು ಪೊಲೀಸರಿಗೆ ತಲೆನೋವು

ಮಕ್ಕಳ ಅಶ್ಲೀಲ ವಿಡಿಯೊ, ಚಿತ್ರಗಳ ನೈಜತೆ ಪತ್ತೆಹಚ್ಚಲು ವಿಫಲ

ಪ್ರಜಾವಾಣಿ ವಿಶೇಷ
Published 17 ಡಿಸೆಂಬರ್ 2023, 23:30 IST
Last Updated 17 ಡಿಸೆಂಬರ್ 2023, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚೇತನ್‌ ಬಿ.ಸಿ.

ಬೆಂಗಳೂರು: ಮಕ್ಕಳಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೊ ಹಾಗೂ ಫೋಟೊಗಳನ್ನು ಪತ್ತೆಹಚ್ಚಲು ಸಾಮಾಜಿಕ ಮಾಧ್ಯಮ ಕಂಪನಿಗಳು ಅಳವಡಿಸಿಕೊಂಡಿರುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ(ಎಐ)ದಲ್ಲಿ ಲೋಪದೋಷಗಳು ಕಂಡುಬಂದಿದ್ದು, ಸುಳ್ಳು ಪ್ರಕರಣಗಳು ಹೆಚ್ಚುತ್ತಿವೆ.

ADVERTISEMENT

ವಿಡಿಯೊ ಹಾಗೂ ಚಿತ್ರಗಳ ನೈಜತೆ ಪತ್ತೆಹಚ್ಚಲು ಎ.ಐ ತಂತ್ರಜ್ಞಾನವು ವಿಫಲವಾಗಿದ್ದು, ಸಿಐಡಿ ಪೊಲೀಸರಿಗೂ ತಲೆನೋವಾಗಿದೆ. ಈ ಪ್ರಕರಣದಲ್ಲಿ ತನಿಖೆ ನಡೆಸುವ ಪೊಲೀಸರ ಸಮಯ ಸಹ ವ್ಯರ್ಥವಾಗುತ್ತಿದೆ. ರಾಜ್ಯದಲ್ಲಿ ಸಾವಿರಾರು ಸುಳ್ಳು ಪ್ರಕರಣಗಳು ಪತ್ತೆಯಾಗುತ್ತಿವೆ.

ಸಣ್ಣ ಮಕ್ಕಳು ಮನೆಯ ಹೊರಭಾಗದಲ್ಲಿ ನಗ್ನವಾಗಿ ಆಟವಾಡುತ್ತಿರುವ ಅಥವಾ ಸಮುದ್ರ ತೀರದಲ್ಲಿ ಸ್ನಾನ ಮಾಡುವ ವಿಡಿಯೊ ಹಾಗೂ ಫೋಟೊಗಳನ್ನು ಈ ತಂತ್ರಜ್ಞಾನವು ಅಶ್ಲೀಲವೆಂದೇ ಪರಿಗಣಿಸುತ್ತಿದೆ ಎಂದು ತನಿಖಾಧಿಕಾರಿಗಳು ಹೇಳುತ್ತಾರೆ.

ಮಕ್ಕಳ ಅಶ್ಲೀಲ ವಿಡಿಯೊ ಹಾಗೂ ಚಿತ್ರಕ್ಕೆ ಸಂಬಂಧಿಸಿದಂತೆ 2019–2020 ಹಾಗೂ 2022–23ರ ನಡುವೆ ಎನ್‌ಸಿಆರ್‌ಬಿ ಮೂಲಕ ರಾಜ್ಯ ಸಿಐಡಿ ವಿಭಾಗಕ್ಕೆ 2.29 ಲಕ್ಷ ಪ್ರಕರಣಗಳು ಬಂದಿದ್ದವು. ಆ ಪೈಕಿ 820 ಮಾತ್ರ ನೈಜ ಪ್ರಕರಣಗಳು ಆಗಿದ್ದವು ಎಂದು ಮೂಲಗಳು ಹೇಳಿವೆ.

ಅಮೆರಿಕದ ಸ್ವಯಂ ಸೇವಾ ಸಂಸ್ಥೆಯು ಕೇಂದ್ರ ಗೃಹ ಇಲಾಖೆಯೊಂದಿಗೆ ಮಕ್ಕಳ ಮೇಲಿನ ದೌರ್ಜನ್ಯ, ಸಾಮಾಜಿಕ ಮಾಧ್ಯಮಗಳಲ್ಲಿನ ಅಶ್ಲೀಲ ವಿಡಿಯೊ ಹಾಗೂ ಚಿತ್ರಕ್ಕೆ ಸಂಬಂಧಿಸಿದ ದತ್ತಾಂಶ ಹಂಚಿಕೊಂಡಿತ್ತು. ಈ ಮಾಹಿತಿಯನ್ನು ಕೇಂದ್ರವು ರಾಜ್ಯಕ್ಕೆ ರವಾನಿಸಿತ್ತು. 

ರಾಜ್ಯದ ಸಿಐಡಿಯಲ್ಲಿ ಮಕ್ಕಳ ಅಶ್ಲೀಲ ವಿಡಿಯೊ ಪತ್ತೆಗೆ ಪ್ರತ್ಯೇಕ ವಿಭಾಗವಿದೆ. ಈ ವಿಭಾಗವು 2022–23ರಲ್ಲಿ ಸ್ವೀಕರಿಸಲಾದ 1.89 ಲಕ್ಷ ಪ್ರಕರಣಗಳಲ್ಲಿ 174 ಮಾತ್ರ ನೈಜವಾಗಿವೆ. ವಿಡಿಯೊ ನೈಜತೆ ಪತ್ತೆಮಾಡಲು ಎ.ಐ ತಂತ್ರಜ್ಞಾನವನ್ನು ಮತ್ತಷ್ಟು ಉನ್ನತೀಕರಿಸಬೇಕಿದೆ ಎಂದು ತನಿಖಾಧಿಕಾರಿಗಳು ಹೇಳುತ್ತಾರೆ.

ಬಹುತೇಕ ಪ್ರಕರಣದಲ್ಲಿ ಎಐ ತಂತ್ರಜ್ಞಾನವು ತಪ್ಪು ಮಾಹಿತಿ ನೀಡುತ್ತಿರುವ ಪರಿಣಾಮ ನೈಜವಾದ ಪ್ರಕರಣಗಳನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಎಐ ತಂತ್ರಜ್ಞಾನಕ್ಕೆ ನಿಖರವಾದ ಹೆಚ್ಚು ದತ್ತಾಂಶ ನೀಡಬೇಕು. ಸರಿಯಾದ ದತ್ತಾಂಶ ನೀಡದಿದ್ದರೆ ಅದು ಪರಿಣಾಮಕಾರಿ ಆಗಿರುವುದಿಲ್ಲ. ಎಐ ಮೇಲೆ ಇನ್ನೂ ಕೆಲಸಗಳು ನಡೆಯುತ್ತಿವೆ’ ಎಂದು ಧಾರವಾಡದ ಐಐಐಟಿಯ ಪ್ರೊ.ಉತ್ಕರ್ಷ್‌ ಖೈರೆ ಹೇಳುತ್ತಾರೆ.

ಗ್ರಾಮೀಣ ಭಾಗದಲ್ಲಿ ಪೋಷಕರು ಪುಟ್ಟ ಮಕ್ಕಳಿಗೆ ಬಟ್ಟೆ ಹಾಕಿರುವುದಿಲ್ಲ. ನಗ್ನವಾಗಿಯೇ ಮಕ್ಕಳು ಆಟವಾಡುತ್ತಿರುವ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಅದು ಅವರ ಸಂಸ್ಕೃತಿಯಲ್ಲಿ ಅಪರಾಧ ಅಲ್ಲದಿದ್ದರೂ ಈ ತಂತ್ರಜ್ಞಾನವು ಅಶ್ಲೀಲವೆಂದು ಹೇಳುತ್ತಿದೆ ಎಂದು ತನಿಖಾಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.