ADVERTISEMENT

ವಯಸ್ಸು 55 ದಾಟಿದ ಪೊಲೀಸರಿಗೆ ಕೊರೊನಾ ತಡೆ ಕರ್ತವ್ಯ ಇಲ್ಲ: ಪ್ರವೀಣ್ ಸೂದ್

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2020, 20:02 IST
Last Updated 29 ಏಪ್ರಿಲ್ 2020, 20:02 IST
ಪ್ರವೀಣ್
ಪ್ರವೀಣ್   

ಬೆಂಗಳೂರು: ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಕೊರೊನಾ ವೈರಸ್ ಹರಡದಂತೆ ತಡೆಯುವ ಕರ್ತವ್ಯಗಳಿಗೆ 55 ವರ್ಷ ದಾಟಿದ ಹಾಗೂ ದೀರ್ಘಕಾಲಿಕ ಕಾಯಿಲೆಗಳಿಂದ ಬಳಲುತ್ತಿರುವ ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸದಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಸುತ್ತೋಲೆ ಹೊರಡಿಸಿದ್ದಾರೆ.

ಹೃದಯ ಸಂಬಂಧಿ ರೋಗಗಳು, ಮಧುಮೇಹ, ಕ್ಯಾನ್ಸರ್, ಮೂತ್ರಪಿಂಡ ವೈಫಲ್ಯ, ಯಕೃತ್‌ ವೈಫಲ್ಯದಂಥ ರೋಗದಿಂದ ಬಳಲುತ್ತಿರುವವರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಅಂಥವರಿಗೆ ಕೊರೊನಾ ಸೋಂಕು ಮಾರಕವಾಗುವ ಸಾಧ್ಯತೆ ಇದೆ. ಪೊಲೀಸ್‌ ಇಲಾಖೆಯ ಮಾನವ ಸಂಪನ್ಮೂಲದ ಆರೋಗ್ಯವನ್ನು ಗರಿಷ್ಠಮಟ್ಟದಲ್ಲಿ ರಕ್ಷಿಸುವ ಸಲುವಾಗಿ 55 ವರ್ಷ ದಾಟಿದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸದೆ, ಒಳಾಂಗಣ ಕರ್ತವ್ಯಗಳಿಗೆ ಅಥವಾ ವೈರಸ್‌ ಹರಡುವಿಕೆ ಇರದಂಥ ಪರಿಸರದಲ್ಲಿ ಕರ್ತವ್ಯಕ್ಕೆ ನಿಯೋಜಿಸಬೇಕು ಎಂದೂ ಆದೇಶದಲ್ಲಿ ಅವರು ತಿಳಿಸಿದ್ದಾರೆ.

ಪೊಲೀಸ್‌ ಇಲಾಖೆಯ ಎಲ್ಲ ವಿಭಾಗಗಳಿಗೆ ಈ ಸೂಚನೆ ನೀಡಿರುವ ಸೂದ್‌, ಈ ಕ್ರಮಗಳು ಜಾರಿ ಆಗಿರುವುದನ್ನು ಮುಖ್ಯಸ್ಥರು ಖಚಿತಪಡಿಸಿಕೊಳ್ಳಬೇಕು ಎಂದೂ ಸುತ್ತೋಲೆಯಲ್ಲಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.