ADVERTISEMENT

ಭಾಗಮಂಡಲ | ಕೊರೊನಾದಿಂದ ಸರಳವಾಗಿ ನಡೆದ ಪೊಲಿಂಕಾನ ಉತ್ಸವ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 11:16 IST
Last Updated 20 ಜುಲೈ 2020, 11:16 IST
   
""

ನಾಪೋಕ್ಲು (ಮಡಿಕೇರಿ): ಕೊಡಗಿನ ಪುಣ್ಯಕ್ಷೇತ್ರವಾದ ಭಾಗಮಂಡಲದಲ್ಲಿ ಸೋಮವಾರ ಪೊಲಿಂಕಾನ ಉತ್ಸವ ಆಚರಿಸಲಾಯಿತು. ಕೊರೊನಾ ಹಿನ್ನೆಲೆ ಈ ಬಾರಿ ಸರಳವಾಗಿ ಆಚರಣೆ ಮಾಡಲಾಯಿತು.

ಪ್ರತಿ ವರ್ಷ ಭಗಂಡೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ಸಲ್ಲಿಸಿ ಉತ್ಸವ ಆಚರಿಸಲಾಗುತ್ತಿತ್ತು. ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಬೆಳಿಗ್ಗೆ ಪೊಲಿಂಕಾನ ಉತ್ಸವ ಮಂಟಪದೊಂದಿಗೆ ಕಾವೇರಿ ಮಾತೆಗೆ ಕರಿಮಣಿ, ಬಿಚ್ಚೋಲೆ, ಸೀರೆ, ವಸ್ತ್ರ ಮತ್ತು ಕುಂಕುಮ ಬಳೆಗಳನ್ನು ಬೆಳ್ಳಿಯ ತಟ್ಟೆಯಲ್ಲಿಟ್ಟು ಪೂಜಿಸಲಾಯಿತು.

ಬಳಿಕ, ಬಾಳೆದಿಂಡುಗಳಿಂದ ರಚಿಸಲಾದ ಪೊಲಿಂಕಾನ ಮಂಟಪವನ್ನು ಭಗಂಡೇಶ್ವರ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿಸಿದ ನಂತರ ತ್ರಿವೇಣಿ ಸಂಗಮದ ಬಳಿ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ADVERTISEMENT

ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ ನಂತರ ನದಿ ನೀರಿನಲ್ಲಿ ಬಾಗಿನದಂತೆ ಬಾಳೆದಿಂಡಿನ ಮಂಟಪವನ್ನು ತೇಲಿ ಬಿಡಲಾಯಿತು. ತಲೆತಲಾಂತರಗಳಿಂದ ಭಾಗಮಂಡಲದಲ್ಲಿ ಪೊಲಿಂಕಾನ ಉತ್ಸವವನ್ನು ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಲಾಗುತ್ತಿದೆ.

ಹೆಚ್ಚು ಪ್ರಚಾರ ಮಾಡದೇ ಸಂಪ್ರದಾಯಕ್ಕೂ ಚ್ಯುತಿ ಬಾರದಂತೆ ದೇವಾಲಯದ ವತಿಯಿಂದ ಸರಳವಾಗಿ ಪೊಲಿಂಕಾನ ಉತ್ಸವವನ್ನು ಆಚರಿಸಲಾಯಿತು ಎಂದು ಅರ್ಚಕರು ತಿಳಿಸಿದರು.

ಏನಿದು ಸಂಪ್ರದಾಯ?: ಪ್ರತಿ ವರ್ಷ ತುಂಬಿ ಹರಿದು ಪ್ರವಾಹ ರೂಪಿಣಿಯಾಗುವ ಕಾವೇರಿ ಮಾತೆಗೆ, ವಿಶೇಷ ಪೂಜೆ ಸಲ್ಲಿಸುವ ಮೂಲಕ ಧನ್ಯವಾದ ಅರ್ಪಿಸುವುದೇ ಈ ಉತ್ಸವದ ವಿಶೇಷತೆ. ಪ್ರತಿವರ್ಷ ಕರ್ಕಾಟಕ ಅಮಾವಾಸ್ಯೆಯಂದು ಭಾಗಮಂಡಲದಲ್ಲಿ ಪೊಲಿಂಕಾನ ಉತ್ಸವ ಆಚರಿಸುವುದು ವಾಡಿಕೆ.

ತಲಕಾವೇರಿಯಲ್ಲಿ ಹುಟ್ಟುವ ಕಾವೇರಿ ಭಾಗಮಂಡಲದ ವರೆಗೆ ಗುಪ್ತಗಾಮಿನಿಯಾಗಿ ಹರಿದು, ತ್ರಿವೇಣಿ ಸಂಗಮದಲ್ಲಿ ‘ಸುಜ್ಯೋತಿ’, ‘ಕನ್ನಿಕೆ’ ನದಿಗಳೊಂದಿಗೆ ಸೇರುವ ಮೂಲಕ ತಮಿಳುನಾಡಿನವರೆಗೆ ಹರಿದರೂ ಪ್ರವಾಹ ಭೀತಿ ಎದುರಾಗುವುದು ಮಾತ್ರ ಭಾಗಮಂಡಲದಲ್ಲಿ.

ಮಳೆಗಾಲದಲ್ಲಿ ಕಾವೇರಿ ನದಿ ಉಕ್ಕಿ ಹರಿಯದೇ ಸೌಮ್ಯಳಾಗಿ ಹರಿಯುವ ಮೂಲಕ ರೈತಾಪಿ ವರ್ಗಕ್ಕೆ ಒಳಿತು ಮಾಡಲೆಂದು ಪ್ರಾರ್ಥಿಸುವುದು ಈ ಉತ್ಸವದ ವಿಶೇಷ. ಈ ವರ್ಷ ಭಾಗಮಂಡದಲ್ಲಿ ವಾಡಿಕೆಗೂ ಕಡಿಮೆ ಮಳೆಯಾಗಿದ್ದು, ಇದುವರೆಗೆ ಒಮ್ಮೆ ಮಾತ್ರ ತ್ರಿವೇಣಿ ಸಂಗಮ ಭರ್ತಿಯಾಗಿದೆ.

ಹಿಂದೆ ಮಳೆಗಾಲದಲ್ಲಿ ಕಾವೇರಿ ನದಿ ತುಂಬಿ ಹರಿದು ಪ್ರವಾಹ ಎದುರಾದಾಗ ಜನರು ಸಂಪರ್ಕವಿಲ್ಲದೇ ಪರಿತಪಿಸುವ ಪರಿಸ್ಥಿತಿಯಿತ್ತು. ಆ ಸಂದರ್ಭದಲ್ಲಿ ಹಿರಿಯರು ಸೇರಿಕೊಂಡು ‘ಕಾವೇರಿ ಮಾತೆ ಕೋಪಗೊಂಡಿದ್ದಾಳೆ’ ಎಂದು ಆಕೆಯನ್ನು ಸಂತೈಸುವ ನಿಟ್ಟಿನಲ್ಲಿ ಮುತ್ತೈದೆಯರು ಆಭರಣಗಳನ್ನು ಇರಿಸಿ ತೆಪ್ಪದ ಮೂಲಕ ಸಾಗಿ ಬಾಗಿನ ಅರ್ಪಿಸುತ್ತಿದ್ದರು. ಅದೇ ಪ್ರತೀತಿ ಮುಂದುವರಿದುಕೊಂಡು ಬಂದಿದ್ದು ‘ಪೊಲಿಂಕಾನ ಉತ್ಸವ’ವಾಗಿ ಆಚರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.