ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಹಕಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದ ಕೆ.ಎನ್. ರಾಜಣ್ಣ, ಸದಾ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಬಂದಿದ್ದರು.
ಕೆ.ಎನ್. ರಾಜಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ನಿಂತಿದ್ದರು. ಮುಖ್ಯಮಂತ್ರಿ ಬದಲಾವಣೆ ವಿಚಾರ ಬಂದಾಗಲೆಲ್ಲ, ಮುಂಚೂಣಿಯಲ್ಲಿ ನಿಂತು ಮಾತನಾಡುತ್ತಿದ್ದರು. ಚುನಾವಣೆ ಸಮಯ ಮತ್ತು ನಂತರ ಅಧಿಕಾರ ಹಂಚಿಕೆ ಸೂತ್ರ ಆಗಿಲ್ಲ. ಐದು ವರ್ಷಗಳವರೆಗೆ ಅವರೇ ಮುಂದುವರಿಯುತ್ತಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎನ್ನುತ್ತಿದ್ದರು.
ರಾಜ್ಯದಲ್ಲಿ ಮೂವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು 2024ರ ಲೋಕಸಭಾ ಚುನಾವಣೆಗೂ ಮೊದಲು ಧ್ವನಿ ಎತ್ತಿದ್ದರು. ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಚುನಾವಣೆ ನಡೆದಾಗ ಒಂದಕ್ಕಿಂತ ಹೆಚ್ಚು ಮಂದಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವ ತೀರ್ಮಾನವನ್ನು ಬಿಜೆಪಿ ಮಾಡಿತ್ತು. ಈಗ ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರನ್ನು ಕಾಂಗ್ರೆಸ್ ಪಕ್ಷದ ಜತೆಯಲ್ಲಿ ಉಳಿಸಿಕೊಳ್ಳಬೇಕಿದೆ. ಅದಕ್ಕಾಗಿ ಇನ್ನಷ್ಟು ಮಂದಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದರು.
‘ಉಪ ಮುಖ್ಯಮಂತ್ರಿ ಹುದ್ದೆ, ಜತೆಗೆ ಲೋಕಸಭೆ ಚುನಾವಣೆವರೆಗೂ ಅಧ್ಯಕ್ಷ ಸ್ಥಾನದಲ್ಲಿ ಡಿ.ಕೆ. ಶಿವಕುಮಾರ್ ಇರುತ್ತಾರೆ ಎಂದು ಹೈಕಮಾಂಡ್ ಹೇಳಿತ್ತು. ಲೋಕಸಭೆ ಚುನಾವಣೆ ಮುಗಿದರೂ ಬದಲಾವಣೆ ಏಕಿಲ್ಲ’ ಎಂದು ರಾಜಣ್ಣ ಪ್ರಶ್ನಿಸಿದ್ದರು. ‘ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಆ ಸ್ಥಾನ ಸಿಕ್ಕಿದರೆ ಸಚಿವ ಸ್ಥಾನ ತೊರೆಯಲು ಸಿದ್ಧ. ಕೆಪಿಸಿಸಿ ಅಧ್ಯಕ್ಷ ಹುದ್ದೆಯ ವಿಚಾರದಲ್ಲಿ ಗೊಂದಲ ಉಂಟಾಗಲು ಹೈಕಮಾಂಡ್ ಕಾರಣ. ಹೀಗಾಗಿ, ಈ ಗೊಂದಲವನ್ನು ಹೈಕಮಾಂಡ್‌ನವರೇ ನಿವಾರಿಸಬೇಕು’ ಎಂದು ಹೈಕಮಾಂಡ್‌ಗೇ ಸವಾಲು ಹಾಕಿದ್ದರು.
ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಸಚಿವರ ಕಾರ್ಯವೈಖರಿ ಮೌಲ್ಯಮಾಪನ ಮಾಡುವ ಕುರಿತು ಟೀಕಿಸಿದ್ದರು. ಅವರು ‘ನನಗೇನು ತಾಕೀತು ಮಾಡುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಎಐಸಿಸಿ ಹೆಸರನ್ನು ಡಿ.ಕೆ. ಶಿವಕುಮಾರ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಸಿದ್ದರಾಮಯ್ಯನವರ ಹೆಸರನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುವುದು ಬೇಡ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದರು.
ಇದೇ ವರ್ಷದ ಬಜೆಟ್ ಮೇಲಿನ ಚರ್ಚೆ ವೇಳೆ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪಿಸಿದ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಅವರ ಮಾತಿಗೆ ಧ್ವನಿಗೂಡಿಸಿದ್ದ ಅವರು, ‘ಕೆಲವರು ಹನಿಟ್ರ್ಯಾಪ್‌ನ ಖೆಡ್ಡಾಕ್ಕೆ ಬೀಳಿಸಲು ಯತ್ನಿಸಿದ್ದಾರೆ. ಈ ಬಗ್ಗೆ ದಾಖಲೆಗಳಿವೆ. ರಾಜಕೀಯ ಪಕ್ಷದಲ್ಲಿ ಇರುವವರು ತಮ್ಮ ಹಾಗೂ ತಮ್ಮ ಕುಟುಂಬದ ಭವಿಷ್ಯಕ್ಕಾಗಿಯೋ, ಮುಖ್ಯಮಂತ್ರಿ ಆಗಬೇಕೆಂಬ ಕಾರಣಕ್ಕೊ ಹೀಗೆಲ್ಲ ಮಾಡುವುದು ಸರಿಯಲ್ಲ’ ಎಂದಿದ್ದರು. ಈ ವಿಷಯ ಆಡಳಿತ ಪಕ್ಷದಲ್ಲಿ ಕಂಪನವನ್ನೇ ಎಬ್ಬಿಸಿತ್ತು.
ರಾಜ್ಯ ರಾಜಕೀಯದಲ್ಲಿ ಸೆಪ್ಟೆಂಬರ್ (2025) ನಂತರ ಕ್ರಾಂತಿ ಆಗಲಿದೆ ಎಂಬ ರಾಜಣ್ಣ ಅವರ ಮಾತು ಕಾಂಗ್ರೆಸ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಕಾಂಗ್ರೆಸ್‌ನಲ್ಲಿ ಪವರ್ ಸೆಂಟರ್‌ಗಳು ಜಾಸ್ತಿ ಆಗಿವೆ. 2013-18ರಲ್ಲಿ ಪವರ್ ಸೆಂಟರ್ ಒಂದೇ ಇದ್ದದ್ದು. ಈಗ ಎರಡು-ಮೂರು ಎಷ್ಟು ಬೇಕಿದ್ದರೂ ಹೇಳಿಕೊಳ್ಳಬಹುದು. ಪವರ್ ಸೆಂಟರ್ ಜಾಸ್ತಿ ಇದ್ದಾಗ ಜಂಜಾಟವೂ ಜಾಸ್ತಿ ಆಗುತ್ತದೆ. ಅದಕ್ಕೆ ಅನುಗುಣವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರವನ್ನು ನಡೆಸಬೇಕಾಗುತ್ತದೆ. 2013-18ರ ಸಿದ್ದರಾಮಯ್ಯ ಈಗ ಇಲ್ಲ ಎಂಬುದು ಜನರ ಅಭಿಪ್ರಾಯ ಎಂದಿದ್ದರು.
ನೇರ, ನಿಷ್ಠುರವಾಗಿ ಮಾತನಾಡುತ್ತಿದ್ದ ಸಚಿವ ರಾಜಣ್ಣ ಅವರನ್ನು ಕಾಣದ ಕೈಗಳ ಒತ್ತಡಕ್ಕೆ ಮಣಿದು ಸಂಪುಟದಿಂದ ತೆಗೆದಿರುವುದು ವಾಲ್ಮೀಕಿ ಸಮುದಾಯಕ್ಕೆ ಮಾಡಿದ ಅಪಮಾನಶ್ರೀರಾಮುಲು, ಬಿಜೆಪಿ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.