ADVERTISEMENT

ದಲಿತರಿಗೆ ಅಧಿಕಾರ ‘ಟ್ವೀಟ್‌’ನಲ್ಲಿ ಸಹಕಾರ

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 19:59 IST
Last Updated 5 ಜೂನ್ 2019, 19:59 IST
...
...   

ಬೆಂಗಳೂರು: ದಲಿತ ಸಮುದಾಯವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ, ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ವಿಷಯದಲ್ಲಿ ಕಾಂಗ್ರೆಸ್–ಬಿಜೆಪಿ ನಾಯಕರು ಟ್ವಿಟರ್‌ನಲ್ಲಿ ವಾಗ್ವಾದ ನಡೆಸಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಈ ಕುರಿತು ಮಾಡಿದ ಟ್ವೀಟ್‌ಗೆ ಬಿಜೆಪಿ ನಾಯಕರು ತಿರುಗೇಟು ಕೊಟ್ಟಿದ್ದಾರೆ.

‘ಬಿಜೆಪಿಯಿಂದ ದ್ರೋಹ’

ADVERTISEMENT

ಬಾಯಿ ಬಡಾಯಿ ಮೂಲಕ ದಲಿತರ ಉದ್ಧಾರ ಆಗುವುದಿಲ್ಲ. ಮೊನ್ನೆ ನಡೆದ ಚುನಾವಣೆಯಲ್ಲಿ ರಾಜ್ಯದ ಮೀಸಲು ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಅಭಿನಂದನೆಗಳು. ಹೀಗಿದ್ದರೂ ಕೇಂದ್ರ ಸಂಪುಟದಲ್ಲಿ ರಾಜ್ಯದ ಒಬ್ಬ ದಲಿತ ಸಂಸದನಿಗೂ ಅವಕಾಶ ಸಿಕ್ಕಿಲ್ಲ. ಇದಕ್ಕಿಂತ ದೊಡ್ಡ ಅನ್ಯಾಯ, ದ್ರೋಹ ಬೇರೇನಿದೆ?

ದಲಿತರ ಬಗ್ಗೆ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ಪ್ರಾಮಾಣಿಕ ಕಾಳಜಿ, ಬದ್ಧತೆ ಇದ್ದರೆ ಮೊದಲು ರಾಷ್ಟ್ರಮಟ್ಟದಲ್ಲಿ ಎಸ್‌ಸಿಪಿ-ಟಿಎಸ್‌ಪಿ ಕಾಯ್ದೆ ರೂಪಿಸಿ ಜಾರಿಗೆ ತರುವ ಧೈರ್ಯ ತೋರಿಸಲಿ. ಇದನ್ನು ಬೇಕಾದರೆ ಸವಾಲಾಗಿ ಸ್ವೀಕರಿಸಲಿ.

‘ದಲಿತರನ್ನು ಸಿ.ಎಂ ಮಾಡಿ’

‘ರಾಜ್ಯದಲ್ಲಿ ಆಯ್ಕೆಯಾದ ದಲಿತ ಸಂಸದರೊಬ್ಬರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ಕೊಡಿಸುತ್ತೇವೆ. ನೀವು ದಲಿತರೊಬ್ಬರನ್ನು ರಾಜ್ಯದಲ್ಲಿ ಮುಖ್ಯಮಂತ್ರಿ ಮಾಡಿ ತೋರಿಸಿ’ ಎಂದು ಯಡಿಯೂರಪ್ಪ ಸವಾಲು ಒಡ್ಡಿದ್ದಾರೆ.

‘7 ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿಯವರೇ ಆಯ್ಕೆ ಆಗಿದ್ದಾರೆ. ಅವರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಕೊಡಿಸಲು ಸಿದ್ಧ’ ಎಂದು ಹೇಳಿದ್ದಾರೆ.

‘ಎಲ್ಲ ಅರ್ಹತೆ ಹೊಂದಿದ್ದ ಪರಮೇಶ್ವರ ಅವರನ್ನು 2013ರಲ್ಲಿ ನೀಚ ರಾಜಕಾರಣ ಮಾಡಿ ಸೋಲಿಸಿದ ದಲಿತ ಪ್ರೇಮಿ ನೀವು. ಈಗ ಯಾವ ಮುಖ ಇಟ್ಟುಕೊಂಡು ದಲಿತರ ಬಗ್ಗೆ ಮಾತನಾಡುತ್ತೀರಾ?’ ಸಿ.ಟಿ. ರವಿ ಪ್ರಶ್ನಿಸಿದ್ದಾರೆ.

‘ಬಿಎಸ್‌ವೈ ಕಾಂಗ್ರೆಸ್‌ಗೆ ಬರಲಿ’

‘ಯಡಿಯೂರಪ್ಪ ಕಾಂಗ್ರೆಸ್‍ಗೆ ಬಂದರೆ ಮುಖ್ಯಮಂತ್ರಿ ಆಗಲು ಸಹಾಯ ಮಾಡುತ್ತೇನೆ’ ಎಂದು ಗೃಹ ಸಚಿವ ಎಂಬಿ ಪಾಟೀಲ ಹೇಳಿದ್ದಾರೆ.

‘ಅಯ್ಯೋ ಪಾಟೀಲರೇ, ನೀವು ಎಷ್ಟು ಅತ್ತು ಸುರಿದು ಮಂತ್ರಿ ಆಗಿದ್ದೀರಿ ಎಂಬುದು ಜಗತ್ತಿಗೆ ತಿಳಿದಿದೆ. ಇನ್ನು ನೀವು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುತ್ತೀರಾ? ನಿಮ್ಮ ನಾಯಕ ರಾಹುಲ್ ಗಾಂಧಿ ತರಹ ಫುಲ್‌ಟೈಮ್‌ ಕಾಮಿಡಿ ಮಾಡಲು ಹೊರಟಿದ್ದೀರಾ? ಮೊದಲು ನಿಮ್ಮ ಪಕ್ಷದ ಲಿಂಗಾಯತ ನಾಯಕರಿಗೆ ಮಂತ್ರಿಗಿರಿ ಕೊಡಿಸಿ ನಿಮ್ಮ ಗೌರವ ಉಳಿಸಿಕೊಳ್ಳಿ’ ಎಂದು ರವಿ ಮತ್ತೊಂದು ಟ್ವೀಟ್‌ನಲ್ಲಿ ಕುಟುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.