ADVERTISEMENT

ಗಲಭೆಕೋರರನ್ನು ಜೈಲಿಗೆ ಅಟ್ಟುವವರೆಗೆ ನಾವು ವಿಶ್ರಮಿಸುವುದಿಲ್ಲ: ಸಚಿವ ಆರ್.ಅಶೋಕ್

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 10:20 IST
Last Updated 12 ಆಗಸ್ಟ್ 2020, 10:20 IST
ಕಂದಾಯ ಸಚಿವ ಆರ್.ಅಶೋಕ್
ಕಂದಾಯ ಸಚಿವ ಆರ್.ಅಶೋಕ್   

ಬೆಂಗಳೂರು:ಗಲಭೆ ಸೃಷ್ಟಿಸಿ ಬೆಂಗಳೂರನ್ನು ತಲ್ಲಣಗೊಳಿಸಬಲ್ಲೆವು ಎಂಬ ಭೀತಿ ಮೂಡಿಸಲು ಯಾರೋ ಪುಂಡರುಹೀಗೆ ಮಾಡಿದ್ದಾರೆ ಎನಿಸುತ್ತದೆ. ಇಂಥವನ್ನು ಮಟ್ಟಹಾಕದೆ ಬಿಡುವುದಿಲ್ಲ. ಗಲ್ಲಿಗಲ್ಲಿ, ಮನೆಮನೆಗೆ ನುಗ್ಗಿ ಗಲಭೆಕೋರರನ್ನು ಬಂಧಿಸುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಪುಲಕೇಶಿನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರಿಂದ ಮಾಹಿತಿ ಪಡೆದು, ಅವರಿಗೆಧೈರ್ಯ ಹೇಳಿದ ನಂತರಸುದ್ದಿಗೋಷ್ಠಿಯಲ್ಲಿ ಸಚಿವರು ಮಾತನಾಡಿದರು.

ಗಲಭೆಕೋರರು ಸ್ಥಳೀಯರಾ? ಅಥವಾ ಹೊರಗಿನಿಂದ ಬಂದವರ ಎಂಬ ಬಗ್ಗೆ ತನಿಖೆ ಆಗಬೇಕು. ಗಲಭೆಕೋರರನ್ನು ಜೈಲಿಗೆ ಕಳುಹಿಸುವವರೆಗೆ ನಾವು ವಿಶ್ರಮಿಸುವುದಿಲ್ಲ. ಈ ರೀತಿ ಶಾಂತಿ ಕದಡುವವರನ್ನು ಸರ್ಕಾರ ಸುಮ್ಮನೆ ಬಿಡುವುದಿಲ್ಲ. 'ಬೆಂಗಳೂರಿನಲ್ಲಿ ಹೀಗೆ ಮಾಡಿದರೆ ನಮ್ಮ ಸರ್ವನಾಶ ಆಗುತ್ತದೆ' ಎನ್ನುವ ಸಂದೇಶ ಅವರಿಗೆ ಹೋಗಬೇಕು. ಹಾಗೆ ಮಾಡುತ್ತೇವೆ. ಯಾವುದೇ ದಯೆಯಿಲ್ಲದೆ (ಮರ್ಸಿಲೆಸ್) ಕ್ರಮ ಜರುಗಿಸಬೇಕು ಎಂದು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ADVERTISEMENT

ಅಖಂಡ ಶ್ರೀನಿವಾಸಮೂರ್ತಿ ನನಗೆಕಳೆದ 10 ವರ್ಷಗಳಿಂದ ಪರಿಚಯ. ಸೌಮ್ಯ ಸ್ವಭಾವದವರು. ಅಂಥವರೇ ಕಣ್ಣೀರು ಹಾಕುತ್ತಿದ್ದಾರೆ. ಮನೆ ಸುಟ್ಟು ಹೋಗಿದೆ. ಅಣ್ಣತಮ್ಮಂದಿರು ಬೀದಿಪಾಲಾಗಿದ್ದಾರೆ. ನಾನೂ ನಿನ್ನೆ ರಾತ್ರಿ 3 ಗಂಟೆಗೆ ಅವರ ಮನೆಗೆ ಹೋಗಿದ್ದೆ. ಮನೆ ಕರಕಲಾಗಿದೆ. ಮನೆಯಲ್ಲಿದ್ದ ಒಡವೆ, ಬೆಳ್ಳಿ ವಸ್ತುಗಳು, ಸೀರೆ, ಬಟ್ಟೆಯನ್ನು ದೋಚಿದ್ದಾರೆ. ದರೋಡೆ ಮಾಡಿದ್ದಾರೆ. ಕಾರು, ಸ್ಕೂಟರ್‌ ಸೇರಿ ಎಲ್ಲವನ್ನೂ ಸುಟ್ಟು ಹಾಕಿದ್ದಾರೆ. ಶ್ರೀನಿವಾಸಮೂರ್ತಿ ಅವರನ್ನು ಮುಗಿಸಬೇಕು, ಹಲ್ಲೆ ಮಾಡಬೇಕು ಎನ್ನುವ ದೃಷ್ಟಿಯಿಂದಲೇ ಬಂದಿದ್ದಾರೆ. ಅಷ್ಟು ರೋಷ ಗಲಭೆಕೋರರಲ್ಲಿ ಇತ್ತು ಎಂದು ವಿವರಿಸಿದರು.

ಶಾಸಕನಾಗಿ ಕರ್ತವ್ಯ ನಿಭಾಯಿಸಲು ಆಗುತ್ತಿಲ್ಲ ಎಂದು ಶ್ರೀನಿವಾಸಮೂರ್ತಿಹೇಳಿದ್ದಾರೆ. ವೈಯಕ್ತಿಕವಾಗಿ ಅವರ ಜೊತೆಗೆ ಮಾತನಾಡಿದ್ದೇನೆ. ಕಾರ್ಪೊರೇಟರ್‌ಗಳ ಜೊತೆಗೆ ಸಂಪರ್ಕದಲ್ಲಿದ್ದೇನೆ. ಶ್ರೀನಿವಾಸಮೂರ್ತಿ ಅವರಿಗೆ ರಕ್ಷಣೆ ಕೊಡುವುದು ಸರ್ಕಾರದ ಜವಾಬ್ದಾರಿ. ಮುಖ್ಯಮಂತ್ರಿಯನ್ನು ಭೇಟಿಯಾಗಿ ನಾನು ಅಲ್ಲಿ ಏನೆಲ್ಲಾ ಕಂಡೆ ಎಂಬುದನ್ನು ವಿವರಿಸುವುದಾಗಿ ತಿಳಿಸಿದರು.

ಘಟನೆ ನಡೆದ 4 ಗಂಟೆಯೊಳಗೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಪೊಲೀಸರು ಸರಿಯಾಗಿ ಕೆಲಸ ಮಾಡದಿದ್ದರೆ ಗಲಭೆ ಇತರೆಡೆಗೂ ವಿಸ್ತರಿಸುತ್ತಿತ್ತು. ಗಲಭೆಕೋರರು ಶಿವಾಜಿನಗರ ಕಡೆಗೆ ಹೋಗಲು ಯೋಜನೆ ರೂಪಿಸಿದ್ದರು. ಗಲಭೆಯಲ್ಲಿ ಕೆಲ ಸಂಘಟನೆಗಳು ಭಾಗಿಯಾಗಿವೆ ಎಂದು ಕೆಲ ಸ್ಥಳೀಯರು ಹೇಳಿದ್ದಾರೆ. ಅಂಥ ಸಂಘಟನೆಗಳಿಗೆ ಸೇರಿದಕೆಲ ನಾಯಕರೂ ಅಲ್ಲಿದ್ದರು. ಇದು ವ್ಯವಸ್ಥಿತವಾಗಿ ನಡೆದ ಗಲಭೆ. ಅಖಂಡ ಶ್ರೀನಿವಾಸಮೂರ್ತಿ ಅವರನ್ನು ಟಾರ್ಗೆಟ್ ಮಾಡಿ, ಬೆಂಗಳೂರಿಗೆ ಬೆದರಿಕೆ ಸಂದೇಶ ನೀಡಲು ಮಾಡಿದ ಕೃತ್ಯ ಎಂದು ಆರೋಪಿಸಿದರು.

ಗೃಹ ಸಚಿವ ಬೊಮ್ಮಾಯಿ ಅವರು ಪ್ರವಾಹ ಪರಿಸ್ಥಿತಿ ಪರಿಶೀಲಿಸಲು ಉಡುಪಿಗೆ ಹೋಗಿದ್ದರು. ಇದೀಗ ಅವರು ನಗರಕ್ಕೆ ಹಿಂದಿರುಗಿದ್ದಾರೆ.ನಾನು ಮತ್ತು ಗೃಹ ಸಚಿವ ಬೊಮ್ಮಾಯಿ ಮುಖ್ಯಮಂತ್ರಿಯವರನ್ನು ಒಟ್ಟಿಗೆಭೇಟಿಯಾಗುತ್ತೇವೆ. ಕೇವಲ ಪೊಲೀಸ್ ಠಾಣೆಯ ಮೇಲೆ ಮಾತ್ರವಲ್ಲ. ಪ್ರಮುಖ ವೃತ್ತಗಳಲ್ಲಿ ಮತ್ತು ನಿರ್ದಿಷ್ಟ ಸಮುದಾಯಕ್ಕೆ ಸೇರಿದವರನ್ನು ಗುರಿಯಾಗಿಸಿಕೊಂಡು ಗಲಭೆಕೋರರು ಪುಂಡಾಟ ಮಾಡಿದ್ದಾರೆ. ಸರ್ಕಾರದ ಪರವಾಗಿ ನಾನು ಭರವಸೆ ಕೊಡುತ್ತೇನೆ. ಜನರ ಪ್ರಾಣ ರಕ್ಷಣೆ ಸರ್ಕಾರದ ಕರ್ತವ್ಯ. ನೀವು (ಶಾಸಕರು) ಭಯ ಬೀಳಬೇಡಿ ಎಂದರು.

ಸಾಮಾನ್ಯವಾಗಿ ನಕ್ಸಲರು ಇಂಥ ಕೆಲಸ ಮಾಡುತ್ತಾರೆ. ಇಲ್ಲಿಯೂ ಹಾಗೆ ಮಾಡಿದ್ದಾರೆ. ಅಂದ್ರೆ ಇವರೆಲ್ಲ ಎಂಥ ಮನಸ್ಥಿತಿಗೆ ತಲುಪಿದ್ದಾರೆ ಎಂಬುದು ಇದರಿಂದ ತಿಳಿಯುತ್ತದೆ ಎಂದು ಕಿಡಿಕಾರಿದರು.

ಪೊಲೀಸರು ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಇಂದು ಬಂದೋಬಸ್ತ್‌ಗೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಮೊನ್ನೆ ಪಾದರಾಯನಪುರದಲ್ಲಿ ಕೋವಿಡ್‌ಗೆ ಸಂಬಂಧಿಸಿದಂತೆ ಅಲ್ಲಿನ ಕಾರ್ಪೊರೇಟರ್‌ ನೇತೃತ್ವದಲ್ಲಿ ಗಲಭೆ ನಡೆದಿತ್ತು. ಅಂದು ಗಲಭೆ ಮಾಡಿದವರು ಇಂದು ಜೈಲು ಸೇರಿದ್ದಾರೆ. ಗಲ್ಲಿಗಲ್ಲಿಗಳಲ್ಲಿ, ಮನೆಮನೆಗಳಲ್ಲಿ, ಮೂಲೆಮೂಲೆಗಳಲ್ಲಿ ಅಡಗಿರುವವರನ್ನು ನುಗ್ಗಿ ಹೊರಗೆಳೆದು ಬಂಧಿಸುತ್ತೇವೆ. ಹೆದರುವ-ಹಿಂದೆ ಸರಿಯುವ ಮಾತೇ ಇಲ್ಲ ಎಂದು ಭರವಸೆ ನೀಡಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.